ಮತ್ತಾಯನ ಪರಿಚಯ


ಯೆಹೂದ್ಯರು ಆತನನ್ನು ಅಸಹ್ಯ ಮತ್ತು ತಿರಸ್ಕಾರದಿಂದ ನೋಡುತ್ತಿದ್ದರು. ಸ್ವಯಂ ಯೆಹೂದ್ಯನೇ ಆಗಿದ್ದರೂ ಆತ ಅವರ ಕೋಪಕ್ಕೆ ತುತ್ತಾಗಿದ್ದ. ಅದಕ್ಕೆ ಕಾರಣ ಯೆಹೂದ್ಯನಾಗಿದ್ದೂ ಆತ ರೋಮನ್ ಚಕ್ರವರ್ತಿಯ ಅಧೀನದಲ್ಲಿದ್ದು ಅವನ ಸೇವೆಯಲ್ಲಿ ನಿರತನಾಗಿದ್ದು. ತಾವು ದೇವರ 'ವಿಶಿಷ್ಟ ಪ್ರಜೆಗಳು' ಎಂದೇ ಯೆಹೂದ್ಯರು ತಿಳಿದಿದ್ದರು. ಅನ್ಯರ ನೆರಳಲ್ಲಿ ಬದುಕಲು, ಅವರ ಅಡಿಯಾಳುಗಳಾಗಿರಲು ಅವರೆಂದಿಗೂ ಇಚ್ಚಿಸುತ್ತಿರಲಿಲ್ಲ. ಅದೂ ಅಲ್ಲದೇ ತಮ್ಮ ನಾಡನ್ನು ಅತಿಕ್ರಮಿಸಿ ಆಳುತ್ತಿರುವ ರೋಮನರನ್ನು ಕಂಡರೆ ಯೆಹೂದ್ಯರಿಗೆ ಅಷ್ಟಕ್ಕಷ್ಟೆ. ಅದೇ ಕಾರಣಕ್ಕೆ ರೋಮನರ ಅಡಿಯಾಳಾಗಿ ಕಾರ್ಯನಿರ್ವಹಿಸುವ ಯಾವ ಯೆಹೂದ್ಯರನ್ನು ಕಂಡರೂ ಅವರು ತುಚ್ಚವಾಗಿ ಕಾಣುತ್ತಿದ್ದುದು. ಪರಿಸ್ಥಿತಿ ಹೀಗಿದ್ದಾಗ ಸ್ವಯಂ ಯೆಹೂದ್ಯನಾಗಿದ್ದು ರೋಮನರ ಅಡಿಯಾಳಾಗಿ ಯೆಹೂದ್ಯರಿಂದಲೇ ಸುಂಕ ವಸೂಲಿ ಮಾಡುತ್ತಿದ್ದನೆಂದರೆ ಅಂತಹವನನ್ನು ಯೆಹೂದ್ಯರು ಹೇಗೆ ತಾನೇ ಸಹಿಸಿಯಾರು?

ರೋಮನ್ ಚಕ್ರವರ್ತಿಯ ಅಧೀನನಾಗಿ ‘ಹೆರೋದ ಅಂತಿಪಾ’ ಎಂಬುವವನು ಗಲಿಲೇಯ ಮತ್ತು ಪೆರೇಯವನ್ನು ಆಳುತ್ತಿದ್ದನು. ಅವನಿಗಾಗಿ  ಕಫರ್ನೌಮ್ ಎಂಬ ಊರಿನಲ್ಲಿ ಶುಲ್ಕ ವಸೂಲಿ ಮಾಡಲು ನೇಮಕಗೊಂಡಾತನೇ ‘ಲೇವಿ’. ಅದು ಆತನ ಮೂಲ ಹೆಸರು. ಈತನ ತಂದೆ ‘ಆಲ್ಫೆಯುಸ್’. ಈತನೂ ಶುಲ್ಕ ವಸೂಲಿ ಮಾಡುತ್ತಿದ್ದವನೇ. ಕಾಲಾನಂತರ ತಂದೆಯ ಕಾಯಕವನ್ನು ಮಗನೂ ಮುಂದುವರಿಸಿದ್ದ.

ಲೇವಿಯ ಹುಟ್ಟೂರು ಗಲಿಲೇಯ. ಅರಾಮೈಕ್ ಮತ್ತು ಗ್ರೀಕ್ ಭಾಷಾ ಪಾಂಡಿತ್ಯವನ್ನು ಈತ ಹೊಂದಿದ್ದ. ಯೇಸುವಿನ ಹನ್ನೆರಡು ಮಂದಿ ಅನುಯಾಯಿಗಳಲ್ಲಿ ಈತ ಮೇಧಾವಿಯಾಗಿದ್ದ. ಸಾಮಾಜಿಕವಾಗಿ ಅಂದು ಪಾಲೆಸ್ತೀನ್‌ನಲ್ಲಿ ಅರಾಮೈಕ್ ಭಾಷೆ ಪ್ರಚಲಿತದಲ್ಲಿದ್ದರೂ, ಮಾರುಕಟ್ಟೆಗಳಲ್ಲಿ ಗ್ರೀಕ್ ಭಾಷೆಯನ್ನು ಬಳಸಲಾಗುತ್ತಿತ್ತು. ಸುಂಕ ವಸೂಲಿಯಂತಹ ಕೆಲಸಗಳನ್ನು ನಿರ್ವಹಿಸುವ ಸರಕಾರಿ ಅಧಿಕಾರಿಗಳು ಅರಾಮೈಕ್ ಮತ್ತು ಗ್ರೀಕ್ ಭಾಷೆಗಳನ್ನು ಕಲಿತವರಾಗಿರಬೇಕೆಂಬ ನಿಯಮ ಇದ್ದಿರಬೇಕು. ಹಾಗಾಗಿಯೇ ಲೇವಿ ಸುಂಕ ವಸೂಲಿಗಾಗಿ ನೇಮಿಸಲ್ಪಟ್ಟಿದ್ದ.

ಸುಂಕ ವಸೂಲಿ ಮಾಡುತಿದ್ದ ಲೇವಿಯನ್ನು ಯೇಸುವು ಭೇಟಿಯಾಗಿ ತನ್ನ ಶಿಷ್ಯನಾಗಲು ಆಹ್ವಾನಿಸಿದ ತಕ್ಷಣವೇ ಆತ ಎದ್ದು ಬಂದಿದ್ದ. ಯೇಸುವಿನ ಶಿಷ್ಯನಾದ ಬಳಿಕವೇ ಲೇವಿಯ ಹೆಸರು ‘ಮತ್ತಾಯ’ ಎಂದು ಬದಲಾದದ್ದು. ‘ಮತ್ತಾಯ’ ಎಂದರೆ ಅರ್ಥಾತ್ ‘ದೇವರ ಉಡುಗೊರೆ’ ಎಂದು ಆರ್ಥ!

ನಂತರದ ದಿನಗಳಲ್ಲಿ ಮತ್ತಾಯನು ಯೇಸುವನ್ನು ಔತಣಕ್ಕಾಗಿ ತನ್ನ ಮನೆಗೆ ಆಹ್ವಾನಿಸುತ್ತಾನೆ. ಮತ್ತಾಯನ ಮನೆಯಲ್ಲಿ ಇನ್ನಷ್ಟು ಮಂದಿ ಸುಂಕ ವಸೂಲಿಗಾರರೂ, ಸಮಾಜದಿಂದ ಬಹಿಷ್ಕೃತರಾದವರೂ ಇರುತ್ತಾರೆ. ಅವರೂ ಸಹ ಯೇಸುವಿನೊಂದಿಗೆ ಔತಣದಲ್ಲಿ ಪಾಲ್ಗೊಂಡಿರುತ್ತಾರೆ. ಅದನ್ನು ಕಂಡ ಫರಿಸೇಯರೆಂಬ ಯೆಹೂದ್ಯರ ಒಂದು ಪಂಗಡ ಯೇಸುವನ್ನು ಹಂಗಿಸುತ್ತದೆ. ‘ಶುಲ್ಕ ವಸೂಲಿಗಾರರ ಮತ್ತು ಪಾಪಿಗಳ ಸಂಗಡ ಕುಳಿತು ಊಟ ಮಾಡುತ್ತಾನೆ’ ಎಂದು ಕುಹುಕವಾಡುತ್ತಾರೆ. ಯೇಸು ಅದಕ್ಕೆ ಮಾರ್ಮಿಕವಾಗಿ ಉತ್ತರಿಸುತ್ತಾರೆ; “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ…ನಾನು ಕರೆಯಲು ಬಂದಿರುವುದು ಧರ್ಮಿಷ್ಟರನ್ನಲ್ಲ, ಪಾಪಿಷ್ಟರನ್ನು!”, ಎನ್ನುತ್ತಾರೆ.

ಯೇಸುವಿನ ಮರಣಾನಂತರ ಅವರ ಪುನರುತ್ಥಾನ ಮತ್ತು ಸ್ವರ್ಗಾರೋಹಣವನ್ನು ಇತರ ಪ್ರೇಷಿತರ ಜೊತೆಗೆ ಮತ್ತಾಯನೂ ಕಣ್ಣಾರೆ ಕಂಡಿದ್ದ.  ಅನಂತರದ ದಿನಗಳಲ್ಲಿ ತನ್ನ ಪಾಂಡಿತ್ಯವನ್ನು ಬಳಸಿಕೊಂಡು ಮತ್ತಾಯನು ಸುಸಂದೇಶವನ್ನು ಬರೆಯುತ್ತಾನೆ. ಬರೆದ ಸ್ಥಳ ಪಾಲೆಸ್ತೀನ್‌ನ ಜುದೇಯ. ವರ್ಷ ಪ್ರಾಯಶಃ ಕ್ರಿ.ಶ.41.

ತನ್ನ ಪ್ರಭುವಾದ ಯೇಸುವನ್ನು ಶಿಲುಬೆಗೇರಿಸಿದ ಯೆಹೂದ್ಯರು ಇದನ್ನು ಕಣ್ಣು ತೆರೆದು ಓದಲಿ ಎಂಬ ಉದ್ದೇಶವನ್ನಿರಿಸಿಕೊಂಡು ಮತ್ತಾಯನು ಈ ಕೃತಿಯನ್ನು ರಚಿಸಿರುವಂತೆ ಮೇಲ್ನೋಟಕ್ಕೆ ಅನಿಸುತ್ತದೆ. ಯೇಸುವಿನ ವಂಶಾವಳಿ ಮತ್ತು ಅಲ್ಲಲ್ಲಿ ಕಂಡು ಬರುವ ಹಳೇ ಒಡಂಬಡಿಕೆಯ ವಾಕ್ಯಗಳೂ, ಪ್ರವಾದನೆಗಳೂ ಇದಕ್ಕೆ ಪುಷ್ಟಿಯನ್ನು ನೀಡುತ್ತದೆ. ಆದರೂ ‘ಯೇಸುವಿನ ಸ್ವಂತ ಜನರಾದ ಯೆಹೂದ್ಯರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಈ ಸುಸಂದೇಶ’, ಎಂಬ ಘೋಷಣಾ ವಾಕ್ಯವೂ ಈ ಗ್ರಂಥದಲ್ಲಿದೆ. ಸಂತ ಐರೆನ್ಯೂಸ್ ಮತ್ತು ಅಲೆಕ್ಸಾಂಡ್ರಿಯಾದ ಸಂತ ಕ್ಲೆಮೆಂಟರ ಪ್ರಕಾರ ಮತ್ತಾಯನು ಇತರ ದೇಶಗಳಿಗೆ ಕಾಲಿಡುವ ಮೊದಲು ಜುದೇಯದ ಯೆಹೂದ್ಯ ಸಮುದಾಯಕ್ಕಾಗಿ ಹದಿನೈದು ವರ್ಷಗಳ ಕಾಲ ಹೀಬ್ರೂ ಭಾಷೆಯಲ್ಲಿ ಧರ್ಮಬೋಧನೆಯನ್ನು ಮಾಡಿದ್ದನಂತೆ. ಇದೇ ವೇಳೆಯಲ್ಲೇ ಮತ್ತಾಯನು ತನ್ನ ಸುಸಂದೇಶವನ್ನು ಹೀಬ್ರೂ ಭಾಷೆಯಲ್ಲಿ ಮೊದಲು ಬರೆದು ಅನಂತರ ಗ್ರೀಕ್ ಭಾಷೆಗೆ ತರ್ಜುಮೆ ಮಾಡಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಇದನ್ನು ಒಪ್ಪದ ಅನೇಕ ತಜ್ಞರು ಆತ ಸುಸಂದೇಶವನ್ನು ಮೊದಲು ಬರೆದದ್ದು ಗ್ರೀಕ್ ಭಾಷೆಯಲ್ಲೇ ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ. ಅದೇನೇ ಇರಲಿ, ಮತ್ತಾಯನು ರಚಿಸಿದ ಹೀಬ್ರೂ ಸುಸಂದೇಶವು ಸೆಜಾ಼ರಿಯಾದ ಗ್ರಂಥಾಲಯದಲ್ಲಿ ಭದ್ರವಾಗಿದೆ. ಗ್ರೀಕ್‌ ಕೃತಿ ಕಳೆದುಹೋಗಿದೆ.

ಮತ್ತಾಯನು ತನ್ನ ಕೃತಿಯಲ್ಲಿ ಕ್ರಿ.ಪೂ.2ರಿಂದ ಕ್ರಿ.ಶ.33ರ ಅವಧಿಯೊಳಗೆ ಸಂಭವಿಸಿದ ಘಟನೆಗಳನ್ನು ಚಿತ್ರಿಸಿದ್ದಾನೆ. 28 ಅಧ್ಯಾಯಗಳ ರೂಪದಲ್ಲಿ ತನ್ನ ಕೃತಿಯಲ್ಲಿ ವಿಸ್ತೃತಗೊಳಿಸಿದ್ದಾನೆ. ಇದರಲ್ಲಿನ ಒಟ್ಟು ಸಂಖ್ಯಾಸೂಚಕ ವಾಕ್ಯಗಳು 1070. ಅತ್ಯಂತ ಹಿರಿದಾದ ಅಧ್ಯಾಯ 26 ಮತ್ತು ಅದರ ಒಟ್ಟು ಸಂಖ್ಯಾಸೂಚಕ ವಾಕ್ಯಗಳು 75. ಅತ್ಯಂತ ಕಿರಿಯ ಅಧ್ಯಾಯ 28; ಮತ್ತು ಅದರ ಒಟ್ಟು ಸಂಖ್ಯಾಸೂಚಕ ವಾಕ್ಯಗಳು 20.

ಮತ್ತಾಯ ರಚಿಸಿದ ಕೃತಿಯನ್ನು ಅದು ಆತನದೇ ಕೃತಿಯೆಂಬುದನ್ನು ಎಲ್ಲೂ ಸೂಚಿಸಿಲ್ಲ. ಆದರೆ ಇತರ ಸುಸಂದೇಶಕರ್ತರಂತೆ ಮತ್ತಾಯನೂ ತನ್ನ ಕೃತಿಯಲ್ಲೂ ತನಗೆ ತಿಳಿಯದಂತೆ ಅನೇಕ ಕುರುಹುಗಳನ್ನು ಬಿಟ್ಟಿದ್ದಾನೆ. ಸುಂಕ ವಸೂಲಿ ಮಾಡುತ್ತಿದ್ದ ಮತ್ತಾಯ ತನ್ನ ಕೃತಿಯಲ್ಲೂ ಅದರ ಛಾಯೆಯನ್ನು ಉಳಿಸಿಕೊಂಡಿದ್ದಾನೆ. ಹಣಕಾಸಿನ ವಿಚಾರವಾಗಿರಲಿ, ಅದರ ಮೌಲ್ಯದ ಬಗ್ಗೆಯಾಗಲಿ ಆತನ ಗ್ರಂಥದಲ್ಲಿ ಬರುವ ವಿವರಣೆ ಉಳಿದವರ ಕೃತಿಗಳಲ್ಲಿ ಕಂಡು ಬರುವುದಿಲ್ಲ. ಹಾಗೆಯೇ ತಾನು ಸ್ವಜನರಾದ ಯೆಹೂದ್ಯರಿಂದ ತಿರಸ್ಕೃತಗೊಂಡರೂ, ದೇವರು ತನ್ನನ್ನು ಕೈಬಿಡದೇ ಓರ್ವ ಪ್ರೇಷಿತನನ್ನಾಗಿ, ಸುಸಂದೇಶಕರ್ತನನ್ನಾಗಿ ಮಾಡಿದನೆಂಬ ಕೃತಕೃತ್ಯತೆ ಆತನಲ್ಲಿ ವ್ಯಕ್ತವಾಗಿರುವುದನ್ನು ಕೃತಿಯಲ್ಲಿ ಕಾಣಬಹುದಾಗಿದೆ. ಕೃತಿಯ ಹಲವು ಕಡೆಗಳಲ್ಲಿ ಬರುವ ‘ದೇವರ ದಯೆ’ ಎಂಬ ಪದಬಳಕೆ ಇದಕ್ಕೆ ಸ್ಪಷ್ಟನೆಯನ್ನು ನೀಡುತ್ತದೆ.

ಮತ್ತಾಯನ ಸುಸಂದೇಶದ ಸುಮಾರು 40ರಷ್ಟು ಭಾಗ ಉಳಿದವರ ಸುಸಂದೇಶಗಳಲ್ಲಿ ಕಂಡು ಬರುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ವಿಶೇಷವಾಗಿ ಕನಿಷ್ಟ ಹತ್ತು ಸಾಮತಿಗಳಂತೂ ಇತರ ಮೂರು ಸುಸಂದೇಶಗಳಲ್ಲಿ ಕಾಣುವುದೇ ಇಲ್ಲ. ಅವುಗಳು: 1.ಕಳೆಗಳ ಸಾಮತಿ, 2.ಹೂತಿಟ್ಟ ನಿಧಿ, 3.ಅನರ್ಘ್ಯ ಮುತ್ತುರತ್ನ, 4.ಬೀಸುಬಲೆ, 5.ದಯೆಯಿಲ್ಲದ ಸೇವಕ, 6.ಉದಾರ ಮನದ ಮಾಲೀಕ, 7.ಆಡದೇ ಮಾಡುವವನು ಉತ್ತಮ, 8.ವಿವಾಹಕ್ಕೆ ತಕ್ಕ ವಸ್ತ್ರ ಧರಿಸದೇ ಬಂದ ಅತಿಥಿ, 9.ಹತ್ತು ಮಂದಿ ಕನ್ಯೆಯರ ಸಾಮತಿ, 10.ಪರಸೇವೆಯೇ ಪರಮಾತ್ಮನ ಸೇವೆ; ಅಂತೆಯೇ, “ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ” ಎಂಬ ಯೇಸುವಿನ ನುಡಿಮುತ್ತುಗಳು ಓದಲು ಸಿಗುವುದು ಮತ್ತಾಯನ ಕೃತಿಯಲ್ಲಿಯೇ! ಅದೇ ರೀತಿಯಲ್ಲಿ ಯೇಸುವಿನ ಮರಣದ ಸಮಯದಲ್ಲಿ, ‘…ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು. ಹೀಗೆ ಎದ್ದವರು ಸಮಾಧಿಗಳಿಂದ ಹೊರಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರ ನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು,’ ಎಂಬ ವಾಕ್ಯಗಳು ಮತ್ತಾಯನ ಕೃತಿಯಲ್ಲಿ ಇವೆ. 

ಇಸ್ಲಾಂ ಮತಾವಲಂಬಿಗಳು ಇತರ ಸುಸಂದೇಶಕರ್ತರಿಗಿಂತ ಅಧಿಕ ಒಲವನ್ನು ಮತ್ತಾಯನ ಬಗ್ಗೆ ತೋರುತ್ತಾರೆ. ‘ಕುರಾನ್’ ಗ್ರಂಥವು ಯೇಸುವಿನ ಅನುಯಾಯಿಗಳನ್ನು ‘ಯೇಸುವಿನ ಸೇವಕರು’ ಎಂದೇ ಹೇಳುತ್ತದೆ. ಆದರೆ ಮತ್ತಾಯನನ್ನು ಮಾತ್ರ ‘ಕ್ರಿಸ್ತನ ಅನುಯಾಯಿ’ ಎನ್ನುತ್ತದೆ. ಅದಕ್ಕೆ ಪೂರಕವಾಗಿ, ‘ಮತ್ತಾಯ ಮತ್ತು ಆಂಡ್ರೂ ಎಂಬ ಇಬ್ಬರು ಅನುಯಾಯಿಗಳು ಇಥಿಯೋಪಿಯಾಕ್ಕೆ ತೆರಳಿ ದೇವರ ಸಂದೇಶವನ್ನು ಸಾರಿದರು’ ಎಂದು ಕುರಾನ್ ಹೇಳುತ್ತದೆ.

ಮತ್ತಾಯನು ಹುತಾತ್ಮನಾದನೆಂಬ ಅಭಿಪ್ರಾಯವಿದೆಯಾದರೂ ಅದು ಖಚಿತಗೊಂಡಿಲ್ಲ. ಒಂದು ಅಭಿಪ್ರಾಯದ ಪ್ರಕಾರ, ಇಥಿಯೋಪಿಯಾದ ರಾಜ ‘ಹಿರ್ತಾಕಸ್’ನ ಸಹೋದರಿಯ ಮಗಳಾದ ‘ಇಫಿಜೀನಿಯ’ ಎಂಬವಳು ಕ್ರೈಸ್ತ ಮತವನ್ನು ಅಪ್ಪಿ, ಕನ್ಯಾಸ್ತ್ರಿಯಾಗಿ, ದೇವರ ಸೇವೆಗೆಂದು ತನ್ನನ್ನು ಮುಡಿಪಾಗಿ ಇಟ್ಟಿದ್ದಳಂತೆ. ಆದರೆ ಕಾಮಾಂಧನಾದ ರಾಜ  ಅವಳನ್ನು ತನ್ನವಳನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ವಿಷಯ ತಿಳಿದ ಮತ್ತಾಯ ರಾಜನನ್ನು ಆಕ್ಷೇಪಿಸಿ ಅವನ ಕೃತ್ಯವನ್ನು ಖಂಡಿಸುತ್ತಾನೆ. ಕೋಪೋದ್ರಿಕ್ತನಾದ ರಾಜ ಸೈನಿಕನೊಬ್ಬನ ಮುಖಾಂತರ ಬಲಿಪೂಜೆಯಲ್ಲಿ ನಿರತನಾಗಿದ್ದ ಮತ್ತಾಯನನ್ನು ಕೊಲ್ಲಿಸುತ್ತಾನೆ. ಇದು ಇಥಿಯೋಪಿಯಾದಲ್ಲಿ ಜನಜನಿತವಾಗಿರುವ ಕಥೆ. ಇದನ್ನು ಸೂಚಿಸುವ ಖ್ಯಾತ ಕಲಾವಿದ ‘ಮೈಕಲ್ ಆಂಜೆಲೊ ಮೆರಿಸಿ ಡ ಕರವಾಗಿಯೋ’ ವರ್ಣದ ತೈಲಚಿತ್ರ(1599-1600ರಲ್ಲಿ )ವೊಂದು ರೋಂನ ‘ಕೊಂಟರೆಲಿ ಚಾಪೆಲ್’ನಲ್ಲಿ ಇದೆ.

ಸಂತ ಪದವಿಗೇರಿದ ಮತ್ತಾಯನ ಸಮಾಧಿಯು ದಕ್ಷಿಣ ಇಟಲಿಯಲ್ಲಿರುವ ಸಾಲೆರ್ನೊ ಪ್ರಧಾನಾಲಯದ ನೆಲಮಾಳಿಗೆಯಲ್ಲಿದೆ. ಸೆಪ್ಟಂಬರ್ 21, ಸುಸಂದೇಶಕರ್ತ ಸಂತ ಮತ್ತಾಯನ ಹಬ್ಬದ ದಿನಾಚರಣೆ. ಸಂತ ಮತ್ತಾಯನನ್ನು ಲೇವಾದೇವಿದಾರರ ಸಂತನೆಂದು ಹೇಳಲಾಗುತ್ತಿದೆ. ಇವರ ಚಿಹ್ನೆ ‘ದೇವದೂತ'.







ಅಧ್ಯಾಯಗಳು

 1    2    3    4    5    6    7     8     9    10   11   12   13   14   15   16   17    18    19    20   21   22   23   24   25   26    27   28







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ