ಮತ್ತಾಯನು ಬರೆದ ಸುಸಂದೇಶಗಳು
1 ಯೇಸುವು ಮುಂದುವರಿದು, "ಇದಲ್ಲದೆ ಸ್ವರ್ಗಸಾಮ್ರಾಜ್ಯವು ಹೇಗಿದೆ ಎನ್ನುವುದಕ್ಕೆ ಇನ್ನೊಂದು ಸಾಮತಿಯಿದೆ. ಅದೆಂದರೆ ಹತ್ತು ಮಂದಿ ಕನ್ಯೆಯರು ತಮ್ಮ ದೀಪಗಳನ್ನು ಎತ್ತಿಕೊಂಡು ಮದುವಣಿಗನನ್ನು ಎದುರುಗೊಳ್ಳುವುದಕ್ಕಾಗಿ ಸಿದ್ಧರಾದರು. 2 ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ, ಐದು ಮಂದಿ ಬುದ್ಧಿಹೀನೆಯರೂ ಇದ್ದರು. 3 ಬುದ್ಧಿಹೀನರು ತಮ್ಮ ದೀಪಗಳನ್ನು ತೆಗೆದುಕೊಂಡರೇ ಹೊರತು ಅಗತ್ಯವಾದ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ, 4 ಬುದ್ದಿವಂತೆಯರು ತಮ್ಮ ದೀಪಗಳೊಂದಿಗೆ ಬುಡ್ಡಿಯಲ್ಲಿ ಸಾಕಷ್ಟು ಎಣ್ಣೆಯನ್ನೂ ತೆಗೆದುಕೊಂಡರು. 5 ಮದುವಣಿಗನು ಬರಲು ತಡಮಾಡಿದಾಗ ಅವರೆಲ್ಲರೂ ಕಾದು ತೂಕಡಿಸಿ ನಿದ್ದೆಹೋದರು. 6 ಮಧ್ಯರಾತ್ರಿಯಲ್ಲಿ 'ಇದೋ ಮದುವಣಿಗನು ಬರುತ್ತಿದ್ದಾನೆ; ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,' ಎಂಬ ಕೂಗು ಕೇಳಿಸಿತು. 7 ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು; 8 ಬುದ್ಧಿಹೀನರು ಬುದ್ಧಿವಂತೆಯರಿಗೆ, 'ನಮ್ಮ ದೀಪಗಳು ಎಣ್ಣೆ ಮುಗಿದು ಆರಿಹೋಗಿವೆ. ನಿಮ್ಮಲ್ಲಿರುವ ಎಣ್ಣೆಯಲ್ಲಿ ಸ್ವಲ್ಪ ನಮಗೂ ಕೊಡಿರಿ'; ಎಂದು ಕೇಳಿಕೊಂಡರು. 9 ಆದರೆ ಬುದ್ಧಿವಂತೆಯರು ಪ್ರತ್ಯುತ್ತರವಾಗಿ, 'ಅದು ನಮಗೂ ನಿಮಗೂ ಸಾಲದೆ ಹೋದೀತು; ಆದುದರಿಂದ ನೀವು ಎಣ್ಣೆಯನ್ನು ಮಾರುವವರ ಬಳಿಗೆ ಹೋಗಿ ಕೊಂಡು ಕೊಳ್ಳಿರಿ,' ಎಂದರು. 10 ಅವರು ಎಣ್ಣೆಯನ್ನು ಕೊಂಡುಕೊಳ್ಳುವುದಕ್ಕೆ ಹೋದಾಗ ಮದವಣಿಗನು ಆಗಮಿಸಿದನು. ಆಗ ಸಿದ್ಧವಾಗಿದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಿಲನ್ನು ಮುಚ್ಚಲಾಯಿತು. 11 ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, 'ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,' ಎಂದರು. 12 ಅದಕ್ಕೆ ಪ್ರತ್ಯುತ್ತರವಾಗಿ, 'ನಿಮ್ಮನ್ನು ನಾನರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,' ಎಂಬ ಧ್ವನಿಯು ಕೇಳಿಸಿತು. 13 ಆದುದರಿಂದ ಎಚ್ಚರವಾಗಿರಿ; ಏಕೆಂದರೆ ನರಪುತ್ರನು ಬರುವ ದಿನವನ್ನಾಗಲಿ, ಕ್ಷಣವನ್ನಾಗಲಿ ನೀವು ಅರಿಯಲಾರಿರಿ,' ಎಂದರು ಯೇಸು.
14 ಅಂತೆಯೇ "ಸ್ವರ್ಗಸಾಮ್ರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡಲು ಹೊರಟ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ" ಎಂದು ಇನ್ನೊಂದು ಸಾಮತಿಯನ್ನು ಹೇಳಲಾರಂಭಿಸಿದರು. 15 "ಆತನು ತನ್ನ ಮೂವರು ಸೇವಕರಲ್ಲಿ ಒಬ್ಬನಿಗೆ ಐದು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನಾಣ್ಯಗಳನ್ನು ಕೊಟ್ಟು ತಕ್ಷಣವೇ ಪ್ರಯಾಣ ಮಾಡಲು ಹೊರಟು ಹೋದನು. 16 ತರುವಾಯ ಐದು ನಾಣ್ಯಗಳನ್ನು ಪಡೆದವನು ಹೋಗಿ ಅವುಗಳಿಂದ ವ್ಯಾಪಾರ ಮಾಡಿ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದನು. 17 ಅದೇ ಪ್ರಕಾರ ಎರಡು ನಾಣ್ಯಗಳನ್ನು ಹೊಂದಿದವನು ಸಹ ಇನ್ನೂ ಎರಡನ್ನು ಸಂಪಾದಿಸಿದನು. 18 ಆದರೆ ಏಕೈಕ ನಾಣ್ಯವನ್ನು ಹೊಂದಿದವನು ಅದನ್ನು ತೆಗೆದುಕೊಂಡು ಹೋಗಿ ಭೂಮಿಯನ್ನು ಅಗೆದು ಅದರಲ್ಲಿ ಅದನ್ನು ಹೂಳಿಟ್ಟನು. 19 ಬಹುಕಾಲದ ನಂತರ ಆ ಸೇವಕರ ಯಜಮಾನನು ಹಿಂದಿರುಗಿ ಬಂದು ಅವರಲ್ಲಿ ಲೆಕ್ಕವನ್ನು ಕೇಳಿದನು. 20 ಆಗ ಐದು ನಾಣ್ಯಗಳನ್ನು ಹೊಂದಿದ್ದವನು ಬಂದು ಇನ್ನೂ ಐದು ನಾಣ್ಯಗಳನ್ನು ತಂದು, 'ಒಡೆಯನೇ, ನೀವು ನನಗೆ ಐದು ನಾಣ್ಯಗಳನ್ನು ಕೊಟ್ಟಿರಿ; ಇದೋ ನೋಡಿ, ಅವುಗಳಲ್ಲದೆ ಇನ್ನೂ ಐದು ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,' ಎಂದನು. 21 ಆಗ ಅವನ ಯಜಮಾನನು, 'ಭಲೇ ಸೇವಕನೇ, ನೀನು ಒಳ್ಳೆಯದನ್ನೇ ಮಾಡಿದ್ದೀಯ. ಈ ಚಿಕ್ಕ ಕಾರ್ಯಗಳಲ್ಲಿ ನಿನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದರಿಂದ ನಾನು ನಿನಗೆ ಹೆಚ್ಚಿನ ಜವಾಬ್ದಾರಿಯನ್ನೇ ಹೊರಿಸುವೆನು; ನೀನು ನಿನ್ನ ಯಜಮಾನನ ಸೌಭಾಗ್ಯದಲ್ಲಿ ಪಾಲುಗಾರನು,' ಎಂದನು. 22 ಬಳಿಕ ಎರಡು ನಾಣ್ಯಗಳನ್ನು ಹೊಂದಿದ್ದವನು ಸಹ ಬಂದು, 'ಧಣಿ, ನೀವು ನನಗೆ ಎರಡು ನಾಣ್ಯಗಳನ್ನು ಒಪ್ಪಿಸಿರುವಿರಿ; ಇದೋ, ಅವುಗಳೂ ಅಲ್ಲದೆ ಇನ್ನೂ ಎರಡು ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,' ಎಂದನು. 23 ಆಗ ಅವನ ಯಜಮಾನನು ಅವನಿಗೆ, 'ನಂಬಿಗಸ್ತನಾದ ನೆಚ್ಚಿನ ಸೇವಕನೇ, ನೀನೂ ಸಹ ಒಳ್ಳೆಯದನ್ನೇ ಮಾಡಿರುವಿ; ಈ ಚಿಕ್ಕ ಕಾರ್ಯಗಳಲ್ಲಿ ನಿನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದರಿಂದ ನಾನು ನಿನಗೆ ಹೆಚ್ಚಿನ ಜವಾಬ್ದಾರಿಯನ್ನೇ ಹೊರಿಸುವೆನು; ನೀನೂ ನಿನ್ನ ಯಜಮಾನನ ಸೌಭಾಗ್ಯದಲ್ಲಿ ಪಾಲುಗಾರನು,' ಎಂದನು. 24 ಆಗ ಏಕೈಕ ನಾಣ್ಯವನ್ನು ಹೊಂದಿದ್ದವನು ಬಂದು, 'ಸ್ವಾಮಿ, ನೀವು ಕಠಿಣರೂ, ಬಿತ್ತದ ಎಡೆಯಲ್ಲಿ ಕೊಯ್ಯುವವರೂ, ತೂರದಿರುವೆಡೆಯಲ್ಲಿಯೇ ರಾಶಿ ಮಾಡುವವರೂ ಆಗಿರುವಿರೆಂದು ನಾನು ಬಲ್ಲೆ; 25 ಅದಕ್ಕಾಗಿ ನಾನು ಭಯದಿಂದ ನೀವು ಕೊಟ್ಟ ನಾಣ್ಯವನ್ನು ಭೂಮಿಯಲ್ಲಿ ಹೂತಿಟ್ಟೆ. ಇದೋ, ನಿಮ್ಮದನ್ನು ನಿಮಗೆ ಸಲ್ಲಿಸುತ್ತಿದ್ದೇನೆ,' ಎಂದನು.
26 ಅದಕ್ಕೆ ಅವನ ಯಜಮಾನನು ಪ್ರತ್ಯುತ್ತರವಾಗಿ, 'ಹೊಣೆಗೇಡಿಯಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೂ, ತೂರದಿರುವಲ್ಲಿ ರಾಶಿಹಾಕುವವನೆಂದೂ ನಿನಗೆ ತಿಳಿದಿದೆ. 27 ಆದರೆ ನೀನು ನನ್ನ ಹಣವನ್ನು ಕೊನೆಯ ಪಕ್ಷ ಬಡ್ಡಿಗಾದರೂ ಬಿಡಬಹುದಿತ್ತು; ಆಗ ನಾನು ಬಂದು ನನ್ನ ನಾಣ್ಯವನ್ನು ಬಡ್ಡಿ ಸಹಿತವಾಗಿ ವಸೂಲಿ ಮಾಡುತ್ತಿದ್ದೆನು,' 28 ಎಂದು ಹೇಳಿ ತನ್ನ ಸೇವಕನೊಬ್ಬನನ್ನು ಕರೆದು, 'ಇವನಿಂದ ಆ ನಾಣ್ಯವನ್ನು ಕಿತ್ತು ತೆಗೆದು ಹತ್ತು ನಾಣ್ಯಗಳಿರುವವನಿಗೆ ಕೊಡಿರಿ. 29 ಇರುವ ಪ್ರತಿಯೊಬ್ಬನಿಗೆ ಹೆಚ್ಚಿನದನ್ನು ಕೊಡಲಾಗುವುದು, ಅವನು ಸಮೃದ್ಧನಾಗುವನು; ಇಲ್ಲದವನ ಕಡೆಯಿಂದ ಅವನಲ್ಲಿದ್ದುದನ್ನೂ ಕಿತ್ತು ತೆಗೆಯಲಾಗುವುದು. 30 ಈ ನಿಷ್ಪ್ರಯೋಜಕನಾದ ಸೇವಕನನ್ನು ನೀವು ಹೊರಗಿನ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವುವು,' ಎಂದನು. 31 ನರಪುತ್ರನು ಮಹಿಮಾಭರಿತನಾಗಿ, ಎಲ್ಲಾ ಪರಿಶುದ್ಧ ದೂತಗಣಗಳೊಂದಿಗೆ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನಾಗುವನು. 32 ಆತನ ಮುಂದೆ ಎಲ್ಲಾ ಜನಾಂಗಗಳವರು ಸೇರುವರು; ಆಗ ಮೇಷಪಾಲಕನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇಕಿಸುವನು; 33 ಆತನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ, ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು. 34 ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, 'ನನ್ನ ತಂದೆಯಿಂದ ಆಶೀರ್ವದಿಸಲ್ಪಟ್ಟವರೇ, ನೀವು ಬನ್ನಿರಿ; ಲೋಕದ ಆರಂಭದಿಂದ ನಿಮಗೋಸ್ಕರ ಸಿದ್ಧಮಾಡಿದ ಸಾಮ್ರಾಜ್ಯದ ಹಕ್ಕನ್ನು ಹೊಂದಿರಿ; 35 ಏಕೆಂದರೆ ನಾನು ಹಸಿದಿದ್ದಾಗ, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದಾಗ, ನೀವು ನನಗೆ ಕುಡಿಯಲು ಕೊಟ್ಟಿರಿ; ನಾನು ದಿಕ್ಕಿಲ್ಲದವನಾಗಿದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿದಿರಿ; 36 ಬಟ್ಟೆಯಿಲ್ಲದವನಾಗಿದ್ದಾಗ, ನೀವು ನನಗೆ ಉಡಲು ನೀಡಿದಿರಿ; ನಾನು ಅನಾರೋಗ್ಯದಿಂದ ನರಳುತ್ತಿದ್ದಾಗ; ನೀವು ನನ್ನನ್ನು ಸಂತೈಸಿದಿರಿ; ನಾನು ಸೆರೆಯಲ್ಲಿದ್ದಾಗ, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು. 37 ಆಗ ಆ ಸಜ್ಜನರು ಪ್ರತ್ಯುತ್ತರವಾಗಿ ಆತನಿಗೆ, 'ಸ್ವಾಮಿ, ಯಾವಾಗ ನೀವು ಹಸಿದಿದ್ದನ್ನು ಕಂಡು ನಾವು ನಿಮಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿಮಗೆ ಕುಡಿಯುವುದಕ್ಕೆ ಕೊಟ್ಟೆವು? ಯಾವಾಗ 38 ನೀವು ದಿಕ್ಕಿಲ್ಲದವರಾಗಿರುವದನ್ನು ನಾವು ಕಂಡು ನಿಮ್ಮನ್ನು ಒಳಕ್ಕೆ ಸೇರಿಸಿ ಕೊಂಡೆವು? ಬಟ್ಟೆಯಿಲ್ಲದಿರುವಾಗ ನಾವು ನಿಮಗೆಗೆ ಉಡಿಸಿದ್ದು ಯಾವಾಗ? 39 ಯಾವಾಗ ನೀವು ಅನಾರೋಗ್ಯದಿಂದಿದ್ದುದು? ಸೆರೆಯಲ್ಲಿದ್ದುದನ್ನು ಕಂಡು ನಾವು ನಿಮ್ಮ ಬಳಿಗೆ ಬಂದದ್ದು ಯಾವಾಗ? ಎಂದು ಹೇಳುವರು. 40 ಅದಕ್ಕೆ ಆತನು ಪ್ರತ್ಯುತ್ತರವಾಗಿ, 'ಈ ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗ ಅದು ನನಗೆ ಮಾಡಿದಂತೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,' ಎನ್ನುವನು. 41 ಅನಂತರ ಆತನು ಎಡಗಡೆಯಲ್ಲಿರುವವರಿಗೆ, 'ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿ ಬೀಳಿರಿ. 42 ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ದಿಕ್ಕಲ್ಲದವನಾಗಿದ್ದೆನು, ನೀವು ನನ್ನನ್ನು ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂಧಿಸಲಿಲ್ಲ' ಎಂದು ಹೇಳುವನು. 44 ಆಗ ಅವರು ಸಹ ಪ್ರತ್ಯುತ್ತರವಾಗಿ ಆತನಿಗೆ, 'ಸ್ವಾಮಿ, ನೀವು ಯಾವಾಗ ಹಸಿದು ಬಾಯರಿದ್ದಿರಿ? ನೀವು ಯಾವಾಗ ದಿಕ್ಕಿಲ್ಲದವರಾಗಿದ್ದಿರಿ? ನೀವು ಬಟ್ಟೆಯಿಲ್ಲದವರಾಗಿದ್ದುದು, ಅಸ್ವಸ್ಥರಾಗಿದ್ದುದು, ಸೆರೆಯಲ್ಲಿದ್ದುದು ಯಾವಾಗ?,' ಎಂದು ಹೇಳುವರು. 45 ಆಗ ಆತನು ಪ್ರತ್ಯುತ್ತರವಾಗಿ, 'ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಯಾವ ಸಹಾಯವನ್ನೂ ಮಾಡದೆ ಹೋದುದರಿಂದ ನೀವೂ ನನಗೂ ಮಾಡಲಿಲ್ಲ,' ಎಂದು ಹೇಳುವನು. 46 ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು. ಹೀಗೆ ಈ ದುರ್ಜನರು ನಿತ್ಯ ಶಿಕ್ಷೆಗೂ, ಸಜ್ಜನರು ನಿತ್ಯಜೀವಕ್ಕೂ ಹೋಗುವರು" ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ