ಮತ್ತಾಯನು ಬರೆದ ಸುಸಂದೇಶಗಳು
ಯೇಸುವನ್ನು ಕೊಲ್ಲಲು ಸಂಚು
(ಮಾರ್ಕ14:1-11; ಲೂಕ222:1-6, ಯೊವಾನ್ನ12:1-8)
1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತಮ್ಮ ಶಿಷ್ಯರಿಗೆ, 2 "ಎರಡು ದಿನಗಳಾದ ಮೇಲೆ ಪಾಸ್ಕ ಹಬ್ಬವಿರುವುದೆಂದು ನೀವು ಬಲ್ಲಿರಿ. ಆಗ ನರಪುತ್ರನನ್ನು ಶಿಲುಬೆಗೆ ಹಾಕುವುದಕ್ಕಾಗಿ ಬಂಧಿಸಲ್ಪಡುವನು," ಎಂದರು. 3 ಆಗ ಪ್ರಧಾನ ಯಾಜಕರೂ, ಧರ್ಮಶಾಸ್ತ್ರಿಗಳೂ, ಪ್ರಜಾಪ್ರಮುಖರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು 4 ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರಾದರೂ. 5 'ಜನರಲ್ಲಿ ಗದ್ದಲವಾದೀತು, ಹಬ್ಬದ ಸಮಯದಲ್ಲಿ ಬೇಡ' ಎಂಬ ನಿರ್ಧಾರಕ್ಕೆ ಬಂದರು.
6 ಯೇಸು ಬೆಥಾನಿಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ತಂಗಿದ್ದರು. 7 ಅಲ್ಲಿ ಅವರು ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಅತಿಶ್ರೇಷ್ಠವಾದ ಸುಗಂಧತೈಲದ ಭರಣಿಯೊಂದಿಗೆ ಅವರ ಬಳಿಗೆ ಬಂದು ಅದನ್ನು ಅವರ ತಲೆಯ ಮೇಲೆ ಸುರಿದಳು. 8 ಅದಕ್ಕೆ ಶಿಷ್ಯರು ಕೋಪಗೊಂಡು, "ಯಾವ ಉದ್ದೇಶಕ್ಕಾಗಿ ಹೀಗೆ ಮಾಡಿದೆ? ತೈಲವು ಹಾಳಾಯಿತಲ್ಲ 9 ಈ ತೈಲವನ್ನು ಹೆಚ್ಚಿನ ಹಣಕ್ಕೆ ಮಾರಿ ಆ ಹಣವನ್ನು ಬಡಬಗ್ಗರಿಗಾದರೂ ನೀಡಬಹುದಾಗಿತ್ತಲ್ಲಾ," ಎಂದರು. 10 ಆದರೆ ಯೇಸುವು ಅವರಿಗೆ, "ನೀವೇಕೆ ಈ ಸ್ತ್ರೀಗೆ ತೊಂದರೆ ಕೊಡುತ್ತೀರಿ? ಈಕೆಯು ನನಗಾಗಿ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ; 11 ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ; ಆದರೆ ನಾನು ಸದಾ ನಿಮ್ಮ ಸಂಗಡ ಇರುವುದಿಲ್ಲ. 12 ಇದಲ್ಲದೆ ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ," ಎಂದರು. 13 ಬಳಿಕ, "ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಲೋಕದಲ್ಲೆಲ್ಲಾ ಸುವಾರ್ತೆಯನ್ನು ಎಲ್ಲೆಲ್ಲಿ ಸಾರಲಾಗುವುದೋ ಅಲ್ಲಿ ಈ ಸ್ತ್ರೀ ಸ್ಮರಿಸುವರು," ಎಂದರು.
14 ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ 'ಇಸ್ಕರಿಯೋತ್ ಯೂದ' ಎನ್ನುವವನು ಪ್ರಧಾನ ಯಾಜಕನ ಬಳಿಗೆ ಹೋಗಿ, 15 "ನಾನು ಯೇಸುನ್ನು ನಿಮಗೆ ಹಿಡಿದು ಕೊಟ್ಟರೆ ನೀವು ನನಗೇನನ್ನು ಕೊಡುವಿರಿ?" ಎಂದು ಕೇಳಿದನು. ಆಗ ಅವನು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಕೊಡುವುದಾಗಿ ಅವನೊಂದಿಗೆ ಒಪ್ಪಂದ ಮಾಡಿಕೊಂಡನು. 16 ಅಂದಿನಿಂದ ಅವನು ಯೇಸುವನ್ನು ಹಿಡಿದುಕೊಡಲು ಬೇಕಾದ ಸಂದರ್ಭಕ್ಕಾಗಿ ಕಾಯ ತೊಡಗಿದನು.
ಯೇಸುವಿನ ಕಡೆಯ ಭೋಜನ
(ಮಾರ್ಕ14:22-31; ಲೂಕ22:7-34, ಯೊವಾನ್ನ13:21-26)
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಶಿಷ್ಯರು ಯೇಸುವಿನ ಬಳಿಗೆ ಬಂದು, "ನಾವು ನಿಮಗಾಗಿ ಎಲ್ಲಿ ಪಾಸ್ಕಹಬ್ಬದ ಊಟಕ್ಕೆ ಸಿದ್ಧತೆ ಮಾಡಬೇಕೆಂದು ಅಪೇಕ್ಷಿಸುತ್ತೀರಿ" ಎಂದು ಯೇಸುವನ್ನು ಕೇಳಿದರು. 18 ಅದಕ್ಕೆ ಯೇಸುವು, "ನೀವು ಪಟ್ಟಣದೊಳಕ್ಕೆ ಹೋಗಿ ನಾನು ಸೂಚಿಸಿದವನ ಬಳಿ, "ತಮ್ಮ ಸಮಯವು ಸಮೀಪಿಸಿದೆ; ಹಾಗಾಗಿ ನಿನ್ನ ಮನೆಯಲ್ಲಿ ತಮ್ಮ ಶಿಷ್ಯರ ಜೊತೆ ಪಾಸ್ಕವನ್ನು ಆಚರಿಸುವೆನೆಂದು ಬೋಧಕರು ಹೇಳಿದ್ದಾರೆ ಎಂದವನಿಗೆ ಹೇಳಿರಿ" ಎಂದರು. 19 ಯೇಸು ಶಿಷ್ಯರಿಗೆ ಆಜ್ಞಾಪಿಸಿದಂತೆ ಅವರು ಪಾಸ್ಕಹಬ್ಬಕ್ಕೆ ಸಿದ್ಧತೆ ಮಾಡಿದರು.
20 ಸಂಜೆಯಾದಾಗ ಯೇಸುವು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡರು; 21 ಅವರು ಊಟ ಮಾಡುತ್ತಿದ್ದಾಗ, "ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ," ಎಂದರು. 22 ಆಗ ಶಿಷ್ಯರು ಬಹಳ ದುಃಖದಿಂದ, "ಸ್ವಾಮಿ, ನಾನೇನಾ ಅವನು?" ಎಂದು ಪ್ರತಿಯೊಬ್ಬನು ಅವರನ್ನು ಕೇಳಲಾರಂಭಿಸಿದರು. 23 ಅದಕ್ಕೆ ಯೇಸುವು ಪ್ರತ್ಯುತ್ತರವಾಗಿ, "ನನ್ನ ಸಂಗಡ ಪಾತ್ರೆಯಲ್ಲಿ ಕೈ ಹಾಕುವವನೇ ನನ್ನನ್ನು ಹಿಡಿದುಕೊಡುವವನು. 24 ನರಪುತ್ರನು ತನ್ನ ವಿಷಯದಲ್ಲಿ ಧರ್ಮಶಾಸ್ತ್ರವು ಬರೆದಿರುವ ಪ್ರಕಾರವೇ ಹೋಗುತ್ತಾನೆ; ಆದರೆ ನರಪುತ್ರನು ಯಾರಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಧಿಕ್ಕಾರ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೆಯದಾಗುತ್ತಿತ್ತು," ಎಂದರು. 25 ಆಗ ಯೇಸುವನ್ನು ಹಿಡಿದುಕೊಡಬೇಕೆಂದಿದ್ದ ಯೂದನು, "ಬೋಧಕರೇ, ನಾನೇನಾ ಅವನು?" ಎಂದು ಕೇಳಲು ಯೇಸುವು, "ನೀನೇ ಹೇಳಿದ್ದೀಯಲ್ಲ," ಎಂದರು. 26 ಅವರು ಊಟವನ್ನು ಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ ಮುರಿದು ತಮ್ಮ ಶಿಷ್ಯರಿಗೆ ಕೊಡುತ್ತಾ, "ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ," ಎಂದರು. 27 ಮತ್ತು ಪಾನ ಪಾತ್ರೆಯನ್ನು ತೆಗೆದುಕೊಂಡು ಸ್ತುತಿಸಿ ಅವರಿಗೆ ಕೊಡುತ್ತಾ, ಇದನ್ನು ತೆಗೆದುಕೊಂಡು ಪಾನಮಾಡಿರಿ. 28 ಇದರಲ್ಲಿರುವುದು ಜನರ ಪಾಪಗಳ ಪರಿಹಾರಕ್ಕಾಗಿ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ, 29 ಮತ್ತು ನಾನು ನಿಮಗೆ ಹೇಳುವುದೇನೆಂದರೆ, ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ಪುನಃ ನಿಮ್ಮೊಂದಿಗೆ ಕುಡಿಯುವ ದಿನದವರೆಗೆ ನಾನಿನ್ನು ದ್ರಾಕ್ಷಾರಸವನ್ನು ಮುಟ್ಟುವುದೇ ಇಲ್ಲ," ಎಂದು ಹೇಳಿದರು.
30 ತರುವಾಯ ಅವರು ಕೀರ್ತನೆಯನ್ನು ಹಾಡುತ್ತಾ, ಓಲಿವ್ ಎಣ್ಣೆ ಮರಗಳ ಗುಡ್ಡಕ್ಕೆ ಹೋದರು. 31 ಆ ನಂತರ ಯೇಸು ಅವರಿಗೆ,
"ಕುರಿಗಾಹಿಯನ್ನು ಕೊಲ್ಲುವೆನು,
ಕುರಿಗಳು ಚದುರುವುವು
ಎಂದು ಧರ್ಮಗ್ರಂಥದಲ್ಲಿ ಬರೆಯಲಾಗಿದೆ; ಅದೇ ರೀತಿಯಲ್ಲಿ ನೀವೆಲ್ಲರೂ ಈ ರಾತ್ರಿ ನನ್ನ ಮೇಲಿನ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ. 32 ಆದರೆ ನಾನು ಪುನರ್ಜೀವಂತನಾಗಿ ಎದ್ದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವೆನು," ಎಂದರು. 33 ಪೇತ್ರನು ಅದಕ್ಕುತ್ತರವಾಗಿ ಯೇಸುವಿಗೆ, "ಎಲ್ಲರೂ ನಿಮ್ಮ ವಿಷಯದಲ್ಲಿ ಹಿಮ್ಮೆಟ್ಟಿದರೂ ನಾನು ಎಂದಿಗೂ ಹಿಮ್ಮೆಟ್ಟುವುದಿಲ್ಲ," ಎಂದು ಹೇಳಿದನು. 34 ಯೇಸು ಅವನಿಗೆ, "ಈ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕೆ ಮುಂಚೆ ಮೂರಾವರ್ತಿ ನೀನು ನನ್ನನ್ನು ಅಲ್ಲಗಳೆಯುವೆ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ," ಎಂದು ಹೇಳಿದರು. 35 ಅದಕ್ಕೆ ಪೇತ್ರನು ಅವರಿಗೆ, "ನಿಮ್ಮೊಂದಿಗೆ ಸಾಯಬೇಕಾಗಿ ಬಂದರೂ ನಾನು ನಿಮ್ಮನ್ನು ಅಲ್ಲಗಳೆಯುವುದಿಲ್ಲ," ಎಂದನು. ಅದೇ ಪ್ರಕಾರ ಶಿಷ್ಯರೆಲ್ಲರೂ ಹೇಳಿದರು.
ಗೆತ್ಸೆಮನೆ ತೋಪಿನಲ್ಲಿ ಯೇಸುವಿನ ಬಂಧನ
(ಮಾರ್ಕ14:32-50; ಲೂಕ22:40-53, ಯೊವಾನ್ನ18:1-12)
36 ತರುವಾಯ ಯೇಸು ಶಿಷ್ಯರ ಸಂಗಡ ಗೆತ್ಸೆಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ, "ನೀವು ಇಲ್ಲೇ ಕುಳಿತುಕೊಂಡಿರಿ. ನಾನು ಕೊಂಚ ದೂರ ಹೋಗಿ ಪ್ರಾರ್ಥಿಸುತ್ತೇನೆ," ಎಂದರು. 37 ಅವರು ತಮ್ಮ ಜೊತೆಯಲ್ಲಿ ಪೇತ್ರನನ್ನೂ, ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವುದಕ್ಕೂ, ಬಹುವಾಗಿ ವ್ಯಥೆಪಡುವುದಕ್ಕೂ ಆರಂಭಿಸಿದರು. 38 ಅನಂತರ ಯೇಸುವು ಅವರಿಗೆ, "ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ಅಧಿಕವಾಗಿದೆ; ನೀವಿಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ," ಎಂದು ಹೇಳಿ, 39 ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿಸುತ್ತಾ, "ಓ ನನ್ನ ತಂದೆಯೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನನ್ನು ಬಿಟ್ಟು ಹೋಗಲಿ; ಆದರೂ ಅದು ನನ್ನ ಚಿತ್ತದಂತಲ್ಲ; ನಿಮ್ಮ ಚಿತ್ತದಂತೆಯೇ ಆಗಲಿ," ಎಂದರು. 40 ಅವರು ತಮ್ಮ ಶಿಷ್ಯರ ಬಳಿಗೆ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು ಪೇತ್ರನಿಗೆ, "ಒಂದು ಗಳಿಗೆಯಾದರೂ ನೀವು ನನ್ನೊಂದಿಗೆ ಎಚ್ಚರವಾಗಿರಲು ನಿಮ್ಮಂದ ಆಗದೇ ಹೋಯಿತೇ? 41 ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವೇನೋ ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ," ಎಂದರು. 42 ಬಳಿಕ ಅವರು ಮತ್ತೊಮ್ಮೆ ಹೋಗಿ ಪ್ರಾರ್ಥಿಸುತ್ತಾ, "ಓ ನನ್ನ ತಂದೆಯೇ, ಈ ಕಷ್ಟದ ಕೊಡವು ನನ್ನನ್ನು ಬಿಟ್ಟು ಹೋಗದೇ ನಾನಿದನ್ನು ಅನುಭವಿಸಬೇಕೆನ್ನುವುದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ," ಎಂದರು. 43 ನಂತರ ಅವರು ಹಿಂದಿರುಗಿ ಬಂದು ತಮ್ಮ ಶಿಷ್ಯರನ್ನು ಕಂಡರು; ಅವರಿನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿದ್ದವು. 44 ಯೇಸುವು ಅವರನ್ನು ಬಿಟ್ಟು ಹಿಂದಿರುಗಿ ಹೋಗಿ ಮೂರನೆಯ ಸಲವೂ ಪ್ರಾರ್ಥಿಸುತ್ತಾ ಅದೇ ಮಾತುಗಳನ್ನು ಹೇಳಿದರು. 45 ತರುವಾಯ ತನ್ನ ಶಿಷ್ಯರ ಬಳಿಗೆ ಬಂದು ಅವರಿಗೆ, "ಈಗ ನಿದ್ದೆ ಮಾಡಿ ವಿಶ್ರಮಿಸುವುದನ್ನು ಸಾಕು ಮಾಡಿರಿ; ನರಪುತ್ರನು ಪಾಪಿಷ್ಠರ ಕೈಗಳಿಗೆ ಹಿಡಿದು ಕೊಡಲಾಗುವ ಸಮಯವು ಸಮೀಪಿಸಿದೆ; 46 ಏಳಿರಿ, ನಾವಿನ್ನು ಹೊರಡೋಣ; ನನ್ನನ್ನು ಹಿಡಿದುಕೊಡುವವನು ಇಲ್ಲೇ ಸಮೀಪದಲ್ಲಿದ್ದಾನೆ," ಎಂದರು. 47 ಅವರು ಮಾತನ್ನಾಡುತ್ತಿರುವಾಗಲೇ ಪ್ರಧಾನ ಯಾಜಕರ ಮತ್ತು ಪ್ರಜಾನಾಯಕರ ಕಡೆಯಿಂದ ಕತ್ತಿ, ದೊಣ್ಣೆಗಳೊಡನೆ ಬಂದ ಜನಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಜೂದನೂ ಬಂದನು. 48 ಜೂದನು ಅಲ್ಲಿಗೆ ಸೇರಿದ್ದ ಸಮೂಹಕ್ಕೆ ಮುಂಚಿತವಾಗಿಯೇ, "ನಾನು ಯಾರಿಗೆ ಮುದ್ದಿಡುತ್ತೇನೋ ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ," ಎಂದು ಹೇಳಿದ್ದನು. 49 ಅವನು ಯೇಸುವಿನ ಬಳಿಗೆ ಬಂದು, "ಬೋಧಕರೇ, ವಂದನೆ," ಎಂದು ಹೇಳಿ ಅವರನ್ನು ಮುದ್ದಿಸಿದನು. 50 ಅದಕ್ಕೆ ಯೇಸುವು ಅವನಿಗೆ, "ಸ್ನೇಹಿತನೇ, ನೀನು ಬಂದ ಕಾರ್ಯವನ್ನು ಮಾಡಿ ಮುಗಿಸು" ಎಂದು ಹೇಳಿದರು. ಆಗ ಜೂದನೊಂದಿಗೆ ಬಂದಿದ್ದವರು ಯೇಸುವಿನ ಮೇಲೆ ಕೈಹಾಕಿ ಅವರನ್ನು ಹಿಡಿದರು. 51 ಆಗ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಒರೆಯಿಂದ ಕತ್ತಿಯನ್ನು ಹಿರಿದು ಮಹಾಯಾಜಕನ ಸೇವಕನನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು. 52 ಆಗ ಯೇಸುವು ಅವನಿಗೆ, "ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದಲೇ ನಾಶವಾಗುವರು. 53 ನಾನೀಗ ನನ್ನ ತಂದೆಯ ಬಳಿ ಪ್ರಾರ್ಥಿಸಿದರೆ ಅವರೀಗಲೇ ತಮ್ಮ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ಕಳುಹಿಸುವರು. 54 ಹಾಗೆ ಮಾಡುವುದಾದರೆ ಇವುಗಳು ಹೀಗೆಯೇ ನಡೆಯಬೇಕೆಂಬ ಧರ್ಮಶಾಸ್ತ್ರದ ವಾಕ್ಯಗಳು ಫಲಿಸುವುದಾದರೂ ಹೇಗೆ?" ಎಂದರು. 55 ಅದೇ ಸಮಯದಲ್ಲಿ ಯೇಸುವು ಜನಸಮೂಹಕ್ಕೆ, "ಒಬ್ಬ ಕಳ್ಳನನ್ನು ಹಿಡಿಯಲು ಬಂದಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯಲು ಬಂದಿರಾ? ನಾನು ಪ್ರತಿದಿನವೂ ನಿಮ್ಮ ಸಂಗಡ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ; 56 ಏಕೆಂದರೆ, ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ನಡೆಯಿತು," ಎಂದು ಹೇಳಿದರು. ಆಗ ಶಿಷ್ಯರೆಲ್ಲರೂ ಅವರನ್ನು ಬಿಟ್ಟು ಓಡಿಹೋದರು.
ಯೇಸುವಿಗೆ ಮರಣದಂಡನೆ, ಪೇತ್ರನ ನಕಾರ
(ಮಾರ್ಕ14:32-50; ಲೂಕ22:40-53, ಯೊವಾನ್ನ18:1-12)
57 ಯೇಸುವನ್ನು ಹಿಡಿದಿದ್ದವರು ಅವರನ್ನು ಮಹಾಯಾಜಕನಾದ ಕಾಯಫನ ಬಳಿಗೆ ಕರೆದುಕೊಂಡು ಹೋದರು; ಅಲ್ಲಿ ಧರ್ಮಶಾಸ್ತ್ರಿಗಳೂ, ಪ್ರಜಾಪ್ರಮುಖರೂ ಸೇರಿದ್ದರು. 58 ಆದರೆ ಪೇತ್ರನು ಮಹಾಯಾಜಕನ ಭವನದವರೆಗೆ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ ಬಂದು ಭವನದ ಒಳಗೆ ಹೋಗಿ ಏನಾಗುವುದೆಂದು ನೋಡಲು ಸೇವಕರ ನಡುವೆ ಹೋಗಿ ಕುಳಿತುಕೊಂಡನು. 59 ಆಗ ಪ್ರಧಾನಯಾಜಕರೂ, ಪ್ರಜಾಪ್ರಮುಖರೂ, ನ್ಯಾಯಸಭೆಯ ಸದಸ್ಯರು ಯೇಸುವಿಗೆ ವಿರೋಧವಾಗಿ ಅವರನ್ನು ಕೊಲ್ಲಿಸಲು ಅನುಕೂಲವಾಗುವಂತಹ ಸುಳ್ಳು ಸಾಕ್ಷಿಗಳಿಗಾಗಿ ಹುಡುಕುತ್ತಿದ್ದರು. 60 ಹಲವು ಸುಳ್ಳು ಸಾಕ್ಷಿಗಳು ಮುಂದೆ ಬಂದರಾದರು ಅವರಿಂದ ಸರಿಯಾದ ಸಾಕ್ಷ್ಯಗಳು ಲಭಿಸಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು, 61 ತಾನು ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವುದಾಗಿ ಈತ ಹೇಳಿದನು, ಎಂದರು. 62 ಆಗ ಮಹಾಯಾಜಕರು ಎದ್ದು ಯೇಸುವಿಗೆ, "ಇವರು ನಿನ್ನ ವಿರೋಧವಾಗಿ ನೀಡಿದ ಸಾಕ್ಷಿಗೆ ನೀನೇನು ಉತ್ತರ ಕೊಡುವೆ?" ಎಂದು ಕೇಳಿದನು. 63 ಯೇಸು ಏನನ್ನೂ ಹೇಳದೆ ಸುಮ್ಮನಿದ್ದರು. ಆಗ ಮಹಾಯಾಜಕನು ಯೇಸುನಿಗೆ, "ಜೀವಸ್ವರೂಪನಾದ ದೇವರ ಮೇಲೆ ಆಣೆಯನ್ನು ಇಟ್ಟು ನಾನು ನಿನ್ನನ್ನು ಕೇಳುತ್ತೇನೆ; ನೀನು ದೇವಪುತ್ರನಾದ ಕ್ರಿಸ್ತನು ಹೌದೋ ಅಲ್ಲವೋ?" ಎಂದು ಕೇಳಲು, 64 ಯೇಸುವು ಅವನಿಗೆ, "ನಿನ್ನ ಬಾಯಿಯಿಂದಲೇ ಅದು ಬಂದಿದೆ. ಅಲ್ಲದೇ ನಾನು ನಿಮಗೆ ಹೇಳುತ್ತೇನೆ, ನರಪುತ್ರನು ಆಕಾಶದ ಮೇಘಗಳ ಮೇಲೆ ಬರುವುದನ್ನೂ, ಸರ್ವಶಕ್ತನ ಬಲಪಾರ್ಶ್ವದಲ್ಲಿ ಕುಳಿತಿರುವುದನ್ನೂ ನೀವು ನೋಡುವಿರಿ," ಎಂದು ಹೇಳಿದರು. 65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, "ಇವನು ದೇವದೂಷಣೆ ಮಾಡಿದ್ದಾನೆ; ನಮಗಿನ್ನು ಹೆಚ್ಚಿನ ಸಾಕ್ಷಿಗಳು ಬೇಕಾಗಿಲ್ಲ? ಇದೋ, ಈಗಷ್ಟೆ ಇವನ ದೇವದೂಷಣೆಯನ್ನು ನೀವೂ ಕೇಳಿದ್ದೀರಲ್ಲಾ. 66 ಈಗ ನಿಮ್ಮ ತೀರ್ಮಾನವೇನು?" ಎಂದು ಕೇಳಿದಾಗ, ಅಲ್ಲಿದ್ದವರು, "ಇವನು ಮರಣದಂಡನೆಗೆ ಪಾತ್ರನು," ಎಂದರು. 67 ಆಮೇಲೆ ಅವರು ಯೇಸುವಿನ ಮುಖದ ಮೇಲೆ ಉಗುಳಿ ಅವರನ್ನು ಗುದ್ದಿದರು; ಬೇರೆ ಕೆಲವರು ಅವರನ್ನು ಹೊಡೆದರು. 68 ಅನಂತರ ಅವರು, "ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಮಾಡು," ಎಂದು ಗೇಲಿ ಮಾಡಿದರು.
69 ಪೇತ್ರನು ಆಗ ಭವನದ ಹೊರಗೆ ಕುಳಿತಿದ್ದನು. ಅವನನ್ನು ನೋಡಿದ ಒಬ್ಬ ಹುಡುಗಿಯು ಅವನ ಬಳಿಗೆ ಬಂದು, "ನೀನೂ ಗಲಿಲೇಯದ ಯೇಸುವಿನೊಂದಿಗೆ ಇದ್ದವನಲ್ಲವೇ?" ಎಂದು ಕೇಳಿದಳು. 70 ಆದರೆ ಪೇತ್ರನು ಎಲ್ಲರ ಮುಂದೆ, "ನೀನು ಏನು ಹೇಳುತ್ತಿದ್ದೀಯೋ ನಾನರಿಯೆ," ಎಂದು ಅಲ್ಲಗಳೆದನು. 71 ಅವನು ಅಲ್ಲಿಂದ ಬಾಗಿಲ ಬಳಿಗೆ ಹೋದಾಗ ಮತ್ತೊಬ್ಬ ಸ್ತ್ರೀಯು ಅವನನ್ನು ಕಂಡು ಅಲ್ಲಿದ್ದವರಿಗೆ, "ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು," ಎಂದಳು. 72 ಆಗ ಪೇತ್ರನು ಪ್ರಮಾಣಮಾಡಿ, "ಆ ಮನುಷ್ಯನನ್ನು ನಾನರಿಯೆನು," ಎಂದು ಪುನಃ ಅಲ್ಲಗಳೆದನು. 73 ಮತ್ತೆ ಸ್ವಲ್ಪ ಸಮಯ ನಂತರ ಅಲ್ಲಿ ನಿಂತಿದ್ದವರು ಪೇತ್ರನಿಗೆ, "ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು; ಏಕೆಂದರೆ ನಿನ್ನ ಭಾಷೆಯು ಅದನ್ನು ತೋರಿಸಿಕೊಡುತ್ತದೆ," ಎಂದರು. 74 ಅದಕ್ಕೆ ಅವನು, "ಆ ಮನುಷ್ಯನನ್ನು ನಾನರಿಯೆ," ಎಂದು ಶಪಿಸಿಕೊಂಡು ಆಣೆಯಿಡಲು ಪ್ರಾರಂಭಿಸಿದನು. ಕೂಡಲೆ ಕೋಳಿಯು ಕೂಗಿತು. 75 ಆಗ ಪೇತ್ರನು, "ಕೋಳಿಯು ಕೂಗುವುದಕ್ಕೆ ಮುಂಚೆ ನೀನು ಮೂರಾವರ್ತಿ ನನ್ನನ್ನು ಅಲ್ಲಗಳೆಯುವೆ," ಎಂದು ಯೇಸು ಹೇಳಿದ ಮಾತನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹುವಾಗಿ ವ್ಯಥೆಪಟ್ಟು ಅತ್ತನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ