ಅಧ್ಯಾಯ 18

ಮತ್ತಾಯನು ಬರೆದ ಸುಸಂದೇಶಗಳು


ಯೇಸು ಶಿಶುಭಾವದ ಕುರಿತು ಶಿಷ್ಯರಿಗೆ ಹೇಳಿದ್ದು
(ಮಾರ್ಕ9:33-37; ಲೂಕ9:46-48)


1 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. 2 ಆಗ ಯೇಸುವು ಒಂದು ಚಿಕ್ಕ ಮಗುವನ್ನು ತಮ್ಮ ಬಳಿಗೆ ಕರೆದು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, 3 "ನೀವು ಪರಿವರ್ತನೆ ಹೊಂದಿ ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನಿಮಗೆ ಸ್ವರ್ಗಸಾಮ್ರಾಜ್ಯದೊಳಕ್ಕೆ ಪ್ರವೇಶಿಸಲಾಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 4 ಆದುದರಿಂದ ಯಾರು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನು ತಗ್ಗಿಸಿಕೊಳ್ಳುವನೋ ಅವನೇ ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಂತ ದೊಡ್ಡವನು. 5 ಯಾರು ನನ್ನ ಹೆಸರಿನಲ್ಲಿ ಇಂತಹ ಮಗುವನ್ನು ಸ್ವೀಕರಿಸುವನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ. 6 ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಯಾರಾದರೂ ಒಬ್ಬನು ಪಾಪಕ್ಕೆ ಕಾರಣನಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಸಮುದ್ರದ ಆಳಕ್ಕೆ ಮುಳುಗಿಸಿ ಬಿಡುವುದೇ ಲೇಸು.

7 ಜನರನ್ನು ಪಾಪಕ್ಕೆ ಪ್ರಚೋದಿಸುವ ಸಾಧನಗಳಿಂದಾಗಿ ಲೋಕಕ್ಕೆ ಕೆಡುಕು! ಪಾಪಗಳು ಹೇಗಾದರೂ ಸಂಭವಿಸುತ್ತವೆ; ಆದರೆ ಯಾವ ಮನುಷ್ಯನಿಂದ ಪಾಪವುಂಟಾಗುತ್ತದೋ ಅವನಿಗೆ ಧಿಕ್ಕಾರವಿರಲಿ. 8 ಆದುದರಿಂದ ನಿನ್ನ ಕೈಯಾಗಲಿ, ಕಾಲಾಗಲಿ ನಿನ್ನನ್ನು ಪಾಪಕ್ಕೆ ಪ್ರಚೋದಿಸಿದರೆ ಅವುಗಳನ್ನು ಕಡಿದು ಬಿಸಾಡು; ನಿನಗೆ ಎರಡು ಕೈಗಳಿದ್ದು ಅಥವಾ ಎರಡು ಕಾಲುಗಳಿದ್ದು ನರಕಕ್ಕೆ ತಳ್ಳಲ್ಪಡುವುದಕ್ಕಿಂತ ಕುಂಟನಾಗಿಯೋ ಇಲ್ಲವೆ ಕೈಯಿಲ್ಲದವನಾಗಿಯೋ ನಿತ್ಯ ಜೀವನವನ್ನು ಪಡೆಯುವುದು ಒಳ್ಳೆಯದಲ್ಲವೇ?. 9 ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ಸಿಲುಕಿಸುವುದಾದರೆ ಅದನ್ನು ಕಿತ್ತು ಬಿಸಾಡು; ನೀನು ಎರಡು ಕಣ್ಣುಳ್ಳವನಾಗಿ ನರಕದ ಬೆಂಕಿಯಲ್ಲಿ ಬೇಯುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ಅಮರತ್ವವನ್ನು ಪಡೆಯುವುದು ಒಳ್ಳೆಯದು. 

10 ಚಿಕ್ಕವರಲ್ಲಿ ಒಬ್ಬನನ್ನೂ ನೀವು ನಿರ್ಲಕ್ಷ್ಯ ಮಾಡಬೇಡಿರಿ; 11 ಏಕೆಂದರೆ ಪರಲೋಕದಲ್ಲಿರುವ ಇವರ ದೂತರು ಸದಾ ನನ್ನ ತಂದೆಯ ಪಕ್ಕದಲ್ಲಿರುತ್ತಾರೆ ಎಂದು ನಾನು ನಿಜವಾಗಿಯೂ ಹೇಳುತ್ತೇನೆ.

12 ನಿಮಗೆ ಏನನಿಸುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳಿದ್ದು ಅವುಗಳಲ್ಲಿ ಒಂದು ತಪ್ಪಿಸಿಕೊಂಡು ಹೋದರೆ ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಕುರಿಯು ತಪ್ಪಿಸಿಕೊಂಡ ಸ್ಥಳಕ್ಕೆ ಹೋಗಿ ಆ ಕುರಿಯನ್ನು ಹುಡುಕುವುದಿಲ್ಲವೇ? 13 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಅವನು ಅದಿರುವ ಸ್ಥಳವನ್ನು ಕಂಡುಕೊಂಡರೆ ತಪ್ಪಿಸಿಕೊಳ್ಳದೆ ಇದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಕಳೆದುಹೋದ ಕುರಿಯ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆ. 14 ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನೂ ಸಹ ಕಳೆದುಹೋಗದಿರುವುದೇ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಚಿತ್ತ!

15 ಅಲ್ಲದೆ ನಿನ್ನ ಸಹೋದರನು ನಿನಗೆ ವಿರುದ್ದವಾಗಿ ತಪ್ಪು ಮಾಡಿದ್ದೇ ಆದರೆ ನೀನೂ ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದ್ದೇ ಆದರೆ ನೀನು ನಿನ್ನ ಸಹೋದರನನ್ನು ಪಡೆದುಕೊಂಡಂತೆಯೇ ಅರ್ಥ. 16 ಆದರೆ ಅವನು ನಿನ್ನ ಮಾತನ್ನು ಕೇಳದೆಹೋದರೆ ನಿನ್ನ ಜೊತೆಗೆ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗು; ಹೀಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳ ನಡುವೆ ಎಲ್ಲವೂ ನಿರ್ಧಾರವಾಗಲಿ. 17 ನಿನ್ನ ಸಹೋದರನು ಅವರ ಮಾತುಗಳನ್ನೂ ಕೇಳದೇ ಹೋದರೆ ಅದನ್ನು ಧರ್ಮಸಭೆಗೆ ತಿಳಿಸು. ಆದರೆ ಅವನು ಧರ್ಮಸಭೆಯ ಮಾತನ್ನೂ ನಿರ್ಲಕ್ಷಿಸಿದರೆ ಅವನು ನಿನಗೆ ಅನ್ಯನಂತೆಯೂ, ಸುಂಕದವನಂತೆಯೂ ಇರಲಿ. 18 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಭೂಮಿಯ ಮೇಲೆ ಯಾವುದನ್ನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ನೀವು ಭೂಮಿಯ ಮೇಲೆ ಯಾವುದನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು. 19 ಇನ್ನೂ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದೇ ವಿಷಯಕ್ಕಾದರೂ ಭೂಮಿಯ ಮೇಲೆ ಒಮ್ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುವುದು. 20 ಏಕೆಂದರೆ ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಎಲ್ಲಿ ಸೇರಿರುತ್ತಾರೋ ಅವರ ಮಧ್ಯದಲ್ಲಿ ನಾನು ಇರುತ್ತೇನೆ" ಎಂದರು. 

21 ತರುವಾಯ ಪೇತ್ರನು ಯೇಸುವಿನ ಬಳಿ ಬಂದು, "ಸ್ವಾಮಿ, ನನ್ನ ಸಹೋದರನು ನನಗೆ ವಿರೋಧವಾಗಿ ಪಾಪಮಾಡಿದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ಏಳು ಸಲವೋ?" ಎಂದು ಕೇಳಿದನು. 22 ಯೇಸುವು ಅವನಿಗೆ, "ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿನಗೆ ಹೇಳುತ್ತೇನೆ; 23 ಆದುದರಿಂದ ಸ್ವರ್ಗಸಾಮ್ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ರಾಜನಿಗೆ ಹೋಲಿಸಬಹುದಾಗಿದೆ. 24 ಅವನು ಲೆಕ್ಕವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಹತ್ತು ಸಾವಿರ ತಲೆಂತು ಹಣವನ್ನು  ಹಿಂತಿರುಗಿಸಬೇಕಾಗಿದ್ದ ಒಬ್ಬನನ್ನು ಅವನ ಬಳಿಗೆ ಹಿಡಿದು ತರಲಾಯಿತು. 25 ಆದರೆ ಸಾಲವನ್ನು ತೀರಿಸುವುದಕ್ಕೆ ಆ ಸೇವಕನಲ್ಲಿ ಏನೂ ಇಲ್ಲದಿದ್ದುದರಿಂದ ಅವನನ್ನೂ, ಅವನ ಹೆಂಡತಿ-ಮಕ್ಕಳನ್ನೂ, ಅವನಿಗಿದ್ದುದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ರಾಜನು ಅಪ್ಪಣೆ ಮಾಡಿದನು. 26 ಆಗ ಆ ಸೇವಕನು ನೆಲಕ್ಕೆ ಬಿದ್ದು ಅವನ ಕಾಲನ್ನು ಹಿಡಿದು, "ಪ್ರಭು, ನನ್ನನ್ನು ಕ್ಷಮಿಸು; ನಾನು ಎಲ್ಲವನ್ನು ನಿಮಗೆ ಸಲ್ಲಿಸುವೆನು" ಎಂದು ಹೇಳಿದನು. 27 ರಾಜನು ಅವನ ಮೇಲೆ ಕನಿಕರಪಟ್ಟು ಅವನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು. 28 ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೀನಾರುಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆ ಸೇವಕರಲ್ಲಿ ಒಬ್ಬನನ್ನು ಕಂಡು ಅವನ ಕುತ್ತಿಗೆಯನ್ನು ಹಿಡಿದು, "ನನ್ನ ಸಾಲವನ್ನು ತೀರಿಸು" ಎಂದನು. 29 ಆಗ ಆ ಸಾಲಮಾಡಿದ ಸೇವಕನು ಅವನ ಪಾದಕ್ಕೆ ಬಿದ್ದು, "ನನ್ನನ್ನು ಕ್ಷಮಿಸು; ನಾನು ನಿನಗೆ ಕೊಡಬೇಕಾದ್ದನ್ನೆಲ್ಲಾ ಕೊಟ್ಟು ತೀರಿಸುತ್ತೇನೆ" ಎಂದು ಬೇಡಿಕೊಂಡನು. 30 ಅವನು ಆ ಸಾಲಮಾಡಿದ ಸೇವಕನ ಮಾತನ್ನು ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. 31 ಅದನ್ನು ನೋಡಿದ ರಾಜನ ಸೇವಕರು, ನಡೆದ ವಿಷಯವನ್ನು ರಾಜನಿಗೆ ತಿಳಿಸಿದರು. 32 ಆಗ ರಾಜನು ಅವನನ್ನು ತನ್ನ ಬಳಿಗೆ ಕರೆಸಿ ಅವನಿಗೆ, "ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡ ಕಾರಣ ನಾನು ನಿನ್ನ ಸಾಲವನ್ನೆಲ್ಲಾ ಮನ್ನಿಸಿದೆನು. 33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆ ನೀನೂ ಸಹ ನಿನ್ನ ಜೊತೆಸೇವಕನ ಮೇಲೆ ಕರುಣೆ ತೋರಿಸಬಹುದಿತ್ತಲ್ಲವೇ" ಎಂದು ಕೋಪದಿಂದ ಹೇಳಿದನು, 34 ಬಳಿಕ ತನಗೆ ಬರಬೇಕಾದ ಸಾಲವನ್ನು ತೀರಿಸುವ ತನಕ ಅವನನ್ನು ಕಠಿಣಶಿಕ್ಷೆಗೆ ಒಳಪಡಿಸಿದನು. 35 ಅದರಂತೆಯೇ ನಿಮ್ಮಲ್ಲಿ ಪ್ರತಿಯೊಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸಲಾರರು" ಎಂದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ