(ಮಾರ್ಕ1:2-8, ಲೂಕ3:1-18, ಯೋವಾ1:6-8, 19-34)
1 ಆ ದಿನಗಳಲ್ಲಿ ಸ್ನಾನಿಕ ಯೋವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧಿಸಲು ಪ್ರಾರಂಭಿಸಿದನು. 2 ನೀವು ಮಾನಸಾಂತರ ಪಡಿರಿ; ಏಕೆಂದರೆ ಪರಲೋಕರಾಜ್ಯವು ಸಮಾಪಿಸಿದೆ" ಎಂದು ಸಾರಿದನು.
3 "ಕರ್ತನ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಯನ್ನು ನೇರಗೊಳಿಸಿರಿ"
ಎಂದು ಬೆಂಗಾಡಿನಲ್ಲಿ ಓರ್ವನು ಘೋಷಿಸುತ್ತಾನೆ"
ಎಂಬುದಾಗಿ ಪ್ರವಾದಿಯಾದ ಯೆಶಾಯನು ಹೇಳಿದ ವ್ಯಕ್ತಿ ಇವನೇ. 4 ಈ ಯೋವಾನ್ನನಿಗೆ ಒಂಟೇ ಕೂದಲಿನ ಉಡುಪೂ, ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು. ಮಿಡತೆಗಳೂ, ಕಾಡು ಜೇನೂ ಇವನ ಆಹಾರವಾಗಿದ್ದವು. 5 ಆಗ ಜೆರೂಸಲೇಮಿನವರೂ, ಜುದೇಯದವರೂ, ಜೋರ್ಡನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟು ಬಂದರು. 6 ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆಮಾಡಿ ಜೋರ್ಡನ್ ಹೊಳೆಯಲ್ಲಿ ಈತನಿಂದ ಸ್ನಾನದೀಕ್ಷೆಯನ್ನು ಪಡೆದುಕೊಂಡರು.
7 ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ಸ್ನಾನದೀಕ್ಷೆ ಮಾಡಿಸಿಕೊಳ್ಳುವುದಕ್ಕಾಗಿ ತನ್ನ ಬಳಿಗೆ ಬರುವುದನ್ನು ಕಂಡು ಯೋವಾನ್ನನು, "ಓ ಸರ್ಪ ಸಂತತಿಯವರೇ, ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? 8 ಹಾಗಾದರೆ ನಿಮ್ಮ ಮಾನಸಾಂತರಕ್ಕೆ ತಕ್ಕ ಫಲಗಳನ್ನು ಅನುಭವಿಸಿರಿ. 9 ಅಬ್ರಹಾಮನು ನಮಗೆ ಪಿತಾಮಹನಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಹೇಳಿಕೊಳ್ಳಬೇಡಿ; ಏಕೆಂದರೆ ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಪಡೆಯಲು ಶಕ್ತಿಯನ್ನು ದೇವರು ನೀಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 10 ಈಗಾಗಲೇ ಮರಗಳ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೇ ಫಲವನ್ನು ನೀಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. 11 ನಾನು ಮನಪರಿವರ್ತನೆ ಹೊಂದಿದ ನಿಮಗೆ ನೀರಿನಿಂದ ಸ್ನಾನದೀಕ್ಷೆ ನೀಡುವುದು ನಿಜವೇ; ಆದರೆ ನನ್ನ ನಂತರ ಬರುವಾತನು ನನಗಿಂತಲೂ ಸಶಕ್ತನಾಗಿದ್ದಾನೆ. ಆತನ ಪಾದರಕ್ಷೆಗಳನ್ನು ಹೊರಲೂ ನಾನು ಯೋಗ್ಯನಲ್ಲ. ಆತನು ಪವಿತ್ರಾ ತ್ಮನಿಂದಲೂ, ಬೆಂಕಿಯಿಂದಲೂ ನಿಮಗೆ ಸ್ನಾನದೀಕ್ಷೆ ಮಾಡಿಸುವನು. 12 ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣದಲ್ಲಿಯ ಕಾಳುಗಳನ್ನು ತೂರಿ ಒಳ್ಳೆಯ ಗೋಧಿಯ ಕಾಳುಗಳನ್ನು ಕಣಜದಲ್ಲಿ ಕೂಡಿಡುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು", ಎಂದು ಹೇಳಿದನು.
ಯೇಸುವಿನ ದೀಕ್ಷಾಸ್ನಾನ
(ಮಾರ್ಕ1:9-11, ಲೂಕ3:21, 22)
13 ಆಗ ಯೇಸು ಯೋವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಗಲಿಲೇಯದಿಂದ ಜೋರ್ಡನ್ ನದಿಯ ಬಳಿಗೆ ಬಂದರು. 14 ಆದರೆ ಯೋವಾನ್ನನು ಅವರನ್ನು ತಡೆದು, "ನಾನು ನಿಮ್ಮಿಂದ ಸ್ನಾನದೀಕ್ಷೆ ಮಾಡಿಸಿಕೊಳ್ಳಬೇಕು, ಆದರೆ ನೀವು ನನ್ನ ಬಳಿಗೆ ಬರುವದು ಸರಿಯೇ?" ಎಂದು ಕೇಳಿದನು. 15 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ಸದ್ಯಕ್ಕೆ ಒಪ್ಪಿಕೋ; ಏಕೆಂದರೆ ದೈವನಿಯಮಗಳನ್ನು ಹೀಗೆ ಪರಿಪಾಲಿಸುವುದು ಸರಿ", ಎಂದು ಹೇಳಿದರು. ಅದಕ್ಕೆ ಯೋವಾನ್ನನು ಒಪ್ಪಿಕೊಂಡನು.
16 ಯೇಸು ಸ್ನಾನದೀಕ್ಷೆಯನ್ನು ಪಡೆದು ನೀರಿನಿಂದ ಮೇಲಕ್ಕೆ ಬಂದ ಕೂಡಲೆ, ಆಕಾಶವು ತೆರೆಯಲ್ಪಟ್ಟು ದೇವರ ಆತ್ಮವು ಪಾರಿವಾಳದ ರೂಪದಲ್ಲಿ ಆವರ ಮೇಲೆ ಇಳಿಯುವುದನ್ನು ಆತನು ಕಂಡನು. 17 ಅದೇ ಸಮಯದಲ್ಲಿ, "ಇಗೋ, ಈತನು ನನ್ನ ಪ್ರಿಯಪುತ್ರನು; ಈತನು ನನ್ನ ಪ್ರೀತಿಪಾತ್ರನು", ಎಂದು ಆಕಾಶದಿಂದ ಧ್ವನಿಯು ಕೇಳಿಸಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ