ಅಧ್ಯಾಯ 24

ಮತ್ತಾಯನು ಬರೆದ ಸುಸಂದೇಶಗಳು


ಜೆರುಸಲೇಮಿನ ನಾಶ, ಯುಗಸಮಾಪ್ತಿಯ ಕುರಿತು ಯೇಸುವಿನ ಭವಿಷ್ಯ
(ಮಾರ್ಕ13:1-31; ಲೂಕ21:5-33)

1 ತರುವಾಯ ಯೇಸುವು ದೇವಾಲಯದಿಂದ ಹೊರಬಂದ ಮೇಲೆ ಅವರ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕಾಗಿ ಅವರ ಬಳಿಗೆ ಬಂದರು. 2 ಆಗ ಯೇಸುವು ಅವರಿಗೆ, "ಇವುಗಳನ್ನು ನೀವು ನೋಡುತ್ತಿರುವಿರಲ್ಲಾ. ಇವೆಲ್ಲವೂ ಕೆಡವಲ್ಪಡುವುವು. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ, ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ" ಎಂದರು. 

3 ಬಳಿಕ ಅವರು ಎಣ್ಣೆಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಅವರ ಬಳಿಗೆ ಬಂದು, "ಈ ಘಟನೆಯು ಯಾವಾಗ ಸಂಭವಿಸುವುವು? ಮತ್ತು ನಿಮ್ಮ ಆಗಮನಕ್ಕೂ ಲೋಕಾಂತ್ಯಕ್ಕೂ ಸೂಚನೆ ಏನು? ದಯವಿಟ್ಟು ನಮಗೆ ಅದನ್ನು ಹೇಳಿ," ಎಂದು ಕೇಳಿಕೊಂಡರು. 4 ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ, "ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ. 5 ಏಕೆಂದರೆ ನನ್ನ ಹೆಸರಿನಲ್ಲಿ ಅನೇಕರು ಬಂದು, 'ನಾನೇ ಕ್ರಿಸ್ತನು' ಎಂದು ಹೇಳಿ ಅನೇಕರನ್ನು ಮೋಸಮಾಡುವರು. 6 ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ ಮತ್ತು ಯುದ್ಧಗಳು ಸಂಭವಿಸುವುದನ್ನು ನೋಡುವಿರಿ. ಆದರೆ ನೀವು ಕಳವಳಗೊಳ್ಳದಿರಿ; ಇವೆಲ್ಲವುಗಳು ಸಂಭವಿಸುವುದು ಅತ್ಯಗತ್ಯವಾಗಿದೆ; ಆದರೆ ಇದೇ ಅಂತ್ಯವಲ್ಲ. 7 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವುವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಸಂಭವಿಸುವುವು. 8 ಇವೆಲ್ಲವುಗಳು ಪ್ರಸವ ವೇದನೆಯ ಪ್ರಾರಂಭವಷ್ಟೆ. 9 ಆಗ ನಿಮ್ಮನ್ನು ಉಪದ್ರವಕ್ಕೆ ಒಳಪಡಿಸಿ ಕೊಲ್ಲುವರು; ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳೂ ನಿಮ್ಮನ್ನು ವಿರೋಧಿಸುವರು. 

10 ಆಗ ಅನೇಕರು ತಮ್ಮನ್ನು ಉಳಿಸಿಕೊಳ್ಳಲು ಇನ್ನೊಬ್ಬರನ್ನು ಹಿಡಿದುಕೊಡುವರು ಮತ್ತು ಒಬ್ಬರಿಗೊಬ್ಬರು ವಿರೋಧಿಗಳಾಗುವರು. 11 ಇದಲ್ಲದೆ ಅನೇಕ ಮಂದಿ ಸುಳ್ಳು ಪ್ರವಾದಿಗಳು ಬಂದು ಜನರನ್ನು ಮೋಸಗೊಳಿಸುವರು. 12 ದುಷ್ಟತನವು ಹೆಚ್ಚುತ್ತಿದ್ದಂತೆಯೇ ಬಹಳ ಜನರ ನಂಬಿಕೆ ವಿಶ್ವಾಸಗಳು ತಣ್ಣಗಾಗುವುವು. 13 ಆದರೆ ಕಡೆಯವರೆಗೆ ಎಲ್ಲವನ್ನೂ ಸೈರಿಸುವವನೇ ರಕ್ಷಿಸಲ್ಪಡುವನು. 14 ಅಲ್ಲದೇ ಸ್ವರ್ಗಸಾಮ್ರಾಜ್ಯದ ಈ ಸುವಾರ್ತೆಯು ಲೋಕದ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ತರುವಾಯ ಅಂತ್ಯವು ಬರುವುದು. 

15 ಆದುದರಿಂದ ಪ್ರವಾದಿಯಾದ ದಾನಿಯೇಲನು ಹೇಳಿದಂತೆ, 'ಹಾಳುಮಾಡುವ ಅಸಹ್ಯ ವಸ್ತುವು ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ) 16 ಜುದೇಯದಲ್ಲಿದ್ದವರು ಬೆಟ್ಟಗಳಿಗೆ ಓಡಿ ಹೋಗಲಿ; 17 ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಯಾವುದಾದರೂ ವಸ್ತುವನ್ನು ತೆಗೆದುಕ್ಕೊಳ್ಳುವುದಕ್ಕಾಗಿ ಕೆಳಕ್ಕೆ ಇಳಿಯದಿರಲಿ; 18 ಇಲ್ಲವೆ ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುವ ಸಲುವಾಗಿ ಹಿಂತಿರುಗದೆ ಇರಲಿ. 19 ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲಿಕುಡಿಯುವ ಕೂಸುಗಳಿದ್ದವರಿಗೂ ಏನು ಹೇಳಲಿ! 20 ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ, ಸಬ್ಬತ್ತಿನ ದಿನದಲ್ಲಾಗಲಿ ಆಗದಂತೆ ದೇವರಲ್ಲಿ ಪ್ರಾರ್ಥಿಸಿರಿ. 21 ಅಂತಹ ಮಹಾಸಂಕಟವು ಲೋಕದ ಆದಿಯಿಂದ ಇಂದಿನವರೆಗೂ ಆಗಲಿಲ್ಲ, ಆಮೇಲೆ ಎಂದಿಗೂ ಆಗುವುದಿಲ್ಲ. 22 ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯೂ ಉಳಿಯುವುದಿಲ್ಲ; ಆದರೆ ಆರಿಸಲ್ಪಟ್ಟವರಿಗಾಗಿ ಆ ದಿನಗಳು ಕಡಿಮೆಯಾಗುವುವು. 23 ಆಗ ಯಾರಾದರೂ ನಿಮಗೆ, 'ನೋಡಿರಿ, ಕ್ರಿಸ್ತರು ಇಲ್ಲಿದ್ದಾರೆ', 'ಅಲ್ಲಿದ್ದಾರೆ' ಎಂದು ಹೇಳಿದರೆ ಅದನ್ನು ನಂಬಬೇಡಿರಿ. 24 ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಆರಿಸಲ್ಪಟ್ಟವರನ್ನು ಸಹ ಮೋಸಗೊಳಿಸುವಂತಹ ದೊಡ್ಡ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. 25 ನೋಡಿರಿ, ನಾನಿದನ್ನು ನಿಮಗೆ ಮುಂಚಿತವಾಗಿಯೇ ಹೇಳಿದ್ದೇನೆ. 26 ಆದಕಾರಣ ಅವರು ನಿಮಗೆ, 'ನೋಡಿರಿ, ಆತನು ಅಡವಿಯಲ್ಲಿದ್ದಾನೆ' ಎಂದು ಹೇಳಿದರೆ ಹೋಗಬೇಡಿ; ನೋಡಿರಿ, ಆತನು ರಹಸ್ಯವಾದ ತಂಗುದಾಣಗಳಲ್ಲಿದ್ದಾನೆಂದು ಯಾರಾದರೂ ಹೇಳಿದರೆ ಅದನ್ನೂ ನಂಬಬೇಡಿರಿ. 27 ಮಿಂಚು ಪೂರ್ವದಿಕ್ಕಿನಿಂದ ಹೊರಟು ಬಂದು ಪಶ್ಚಿಮ ದಿಕ್ಕಿನವವರೆಗೆ ಹೊಳೆಯುವಂತೆಯೇ ನರಪುತ್ರನ ಆಗಮನವೂ ಇರುವುದು. 28 ಹೆಣ ಇದ್ದಲ್ಲಿ ಹದ್ದುಗಳು ಕೂಡಿಕೊಳ್ಳುವುವು. 

29 ಆ ದಿನಗಳ ಸಂಕಟಗಳು ಮುಗಿದ ತಕ್ಷಣವೇ ಸೂರ್ಯನ ಬೆಳಕು ಹೋಗಿ ಕತ್ತಲಾವರಿಸುವುದು; ಚಂದ್ರನ ಬೆಳಕು ಮಂಕಾಗುವುದು; ಆಕಾಶದಿಂದ ನಕ್ಷತ್ರಗಳು ಉದುರುವುವು. ಆಕಾಶದ ಶಕ್ತಿಯು ಕುಂದುವುದು. 30 ಆಗ ನರಪುತ್ರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸುವುದು; ಭೂಮಿಯ ಎಲ್ಲಾ ಗೋತ್ರದವರು ಗೋಳಾಡುವರು. ಮತ್ತು ನರಪುತ್ರನು ಆಕಾಶದ ಮೇಘಗಳಲ್ಲಿ, ಬಲದಿಂದಲೂ, ಮಹಾ ಪ್ರಭಾವಶಾಲಿಯಾಗಿಯೂ ಬರುವುದನ್ನು ಅವರು ನೋಡುವರು. 31 ತರುವಾಯ ಆತನು ತನ್ನ ದೂತರನ್ನು ತುತ್ತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ದುತರು ಆತನು ಆರಿಸಿದವರನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವರು. 
32 ಅಂಜೂರದ ಮರದ ದೃಷ್ಟಾಂತದಿಂದ ಬುದ್ದಿಯನ್ನು ಕಲಿಯಿರಿ; ಆದರ ಕೊಂಬೆಯು ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುವಿರಿ; 33 ಅದರಂತೆಯೇ ನೀವು ಈ ಎಲ್ಲಾ ಸೂಚನೆಗಳಿಂದ ಆಗಮನ ಕಾಲವು ಸಮೀಪದಲ್ಲಿದೆಯೆಂದು ತಿಳಿದುಕೊಳ್ಳಿರಿ. 34 ಇವೆಲ್ಲವುಗಳು ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 35 ಭೂಮ್ಯಾಕಾಶಗಳು ಅಳಿದುಹೋಗುವುವು; ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. 

ನರಪುತ್ರನ ಆಗಮನಕ್ಕೆ ಎಚ್ಚರವಾಗಿರಬೇಕೆಂದು ಯೇಸುವಿನ ಬೋಧನೆ
(ಮಾರ್ಕ13:32-37; ಲೂಕ21:34-36, 19:12-27)

36 ಆದರೆ ನನ್ನ ತಂದೆಯ ಹೊರತು ಮತ್ತಾರಿಗೂ ಆ ದಿನವಾಗಲಿ, ಸಮಯವಾಗಲಿ ತಿಳಿಯದು. 37 ನೋಹನ ದಿನಗಳಲ್ಲಿದ್ದಂತೆಯೇ ನರಪುತ್ರನ ಆಗಮನವೂ ಇರುವುದು. 38 ಪ್ರಳಯವು ಬರುವುದಕ್ಕಿಂತ ಮುಂಚಿನ ಆ ದಿನಗಳಲ್ಲಿ ಜನರು, ತಿನ್ನುತ್ತಾ ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ನೋಹನು ನೌಕೆಯನ್ನು ಸೇರುವ ದಿನದವರೆಗೆ ಇದ್ದರು. 39 ಪ್ರಳಯವು ಬಂದು ಅವರನ್ನು ಕೊಚ್ಚಿಕೊಂಡು ಹೊಗುವವರೆಗೂ ಅವರಿಗದು ತಿಳಿದಿರಲಿಲ್ಲ; ಹಾಗೆಯೇ ನರಪುತ್ರನ ಆಗಮನವೂ ನಡೆಯುವುದು. 40 ಆಗ ಇಬ್ಬರು ಹೊಲದಲ್ಲಿದ್ದರೆ; ಒಬ್ಬನು ಆರಿಸಲ್ಪಡುವನು; ಇನ್ನೊಬ್ಬನು ತ್ಯಜಿಸಲ್ಪಡುವನು. 41 ಇಬ್ಬರು ಸ್ತ್ರೀಯರು ಹಿಟ್ಟು ಬೀಸುತ್ತಿರುವಾಗ ಒಬ್ಬಳು ಆರಿಸಲ್ಪಡುವಳು, ಇನ್ನೊಬ್ಬಳು ತ್ಯಜಿಸಲ್ಪಡುವಳು. 42 ನಿಮ್ಮ ಪ್ರಭುವು ಯಾವ ಗಳಿಗೆಯಲ್ಲಿ ಬರುವರೋ ನಿಮಗೆ ಗೊತ್ತಿಲ್ಲವಾದುದರಿಂದ ಸದಾ ಎಚ್ಚರವಾಗಿರಿ. 43 ಕಳ್ಳನು ಯಾವ ಸಮಯದಲ್ಲಿ ಬರುವನೆಂಬುದು ಯಾರಿಗೂ ತಿಳಿಯುವುದಿಲ್ಲ. ಅದು ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ತನ್ನ ಮನೆಗೆ ಕನ್ನಬೀಳದಂತೆ ಕಾಯುತ್ತಿದ್ದನೆಂಬುದು ನಿಮಗೆ ತಿಳಿದಿರಲಿ. 44 ಆದಕಾರಣ ನೀವು ಸಹ ಸಿದ್ಧವಾಗಿರಿ; ನೀವು ಯೋಚಿಸದ ಸಮಯದಲ್ಲಿ ನರಪುತ್ರನು ಬರುತ್ತಾನೆ. 45 ತನ್ನ ಮನೆಯಲ್ಲಿದ್ದವರಿಗೆ ಕಾಲಕಾಲಕ್ಕೆ ಸರಿಯಾಗಿ ಆಹಾರದ ಏರ್ಪಾಡನ್ನು ಮಾಡಲು ಮನೆಯ ಯಜಮಾನನು ನೇಮಿಸಿದ ಅಧಿಕಾರಿಗೆ ನಂಬಿಗಸ್ತನೂ, ವಿವೇಕಿಯೂ ಆದ ಸೇವಕನು ಹೇಗಿರಬೇಕು? 46 ತನ್ನ ಯಜಮಾನನು ಯಾವ ಸಮಯದಲ್ಲಾದರೂ ಬರುವನೆಂದು ನಿರೀಕ್ಷಿಸುತ್ತಾ ತನ್ನ ಕೆಲಸಕಾರ್ಯಗಳನ್ನು ಮಾಡುವನೋ ಆ ಸೇವಕನೇ ಧನ್ಯನು. 47 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯನ್ನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 48 ಆದರೆ ಯಾವ ಸೇವಕನು ತನ್ನ ಹೃದಯದಲ್ಲಿ, "ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ" ಎಂದು ಹೇಳಿಕೊಂಡು 49 ತನ್ನ ಜೊತೆಯ ಸೇವಕರನ್ನು ಹೊಡೆಯುತ್ತಾ, ಕುಡುಕರ ಸಂಗಡ ತಿನ್ನುತ್ತಾ, ಕುಡಿಯುತ್ತಾ ಇರುತ್ತಾನೋ 50 ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಅಥವಾ ನೆನೆಸದ ಸಮಯದಲ್ಲಿ ಆ ಯಜಮಾನನು ಬಂದು ಅವನನ್ನು ಕಠಿಣವಾಗಿ ಶಿಕ್ಷಿಸುವನು. 51 ಕಪಟಿಗಳಿಗೆ ಆಗತಕ್ಕ ಶಿಕ್ಷೆಯನ್ನು ಅವನಿಗೆ ವಿಧಿಸುವನು; ಅಲ್ಲಿ ಗೋಳಾಟವೂ, ಹಲ್ಲು ಕಡಿಯುವಿಕೆಯೂ ಇರುವುವು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ