ಅಧ್ಯಾಯ 15

ಮತ್ತಾಯನು ಬರೆದ ಸುಸಂದೇಶಗಳು


ಊಟದಿಂದ ಮನುಷ್ಯನು ಕೆಡುವುದಿಲ್ಲ
(ಮಾರ್ಕ7:1-23)

1 ಜೆರುಸಲೇಮಿನ ಧರ್ಮಶಾಸ್ತ್ರಿಗಳೂ, ಫರಿಸಾಯರೂ ಯೇಸುವಿನ ಬಳಿ ಬಂದು, 2 "ನಿಮ್ಮ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಯಾಕೆ ಮೀರುತ್ತಾರೆ? ಆಹಾರವನ್ನು ತಿನ್ನುವಾಗ ಅವರು ತಮ್ಮ ಕೈಗಳನ್ನು ಏಕೆ ತೊಳೆಯುವುದಿಲ್ಲ?" ಎಂದು ಕೇಳಿದರು. 3 ಅದಕ್ಕೆ ಪ್ರತ್ಯುತ್ತರವಾಗಿ ಯೇಸುವು, "ನೀವೇಕೆ ನಿಮ್ಮ ಸಂಪ್ರದಾಯದ ಆಚರಣೆಗಾಗಿ ದೇವರ ಆಜ್ಞೆಯನ್ನು ಮೀರುತ್ತೀರಿ? 4 'ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು. ಯಾರಾದರೂ ತಂದೆಯನ್ನಾಗಲಿ ತಾಯಿಯನ್ನಾಗಲಿ ಧೂಷಿಸಿದರೆ ಅವನಿಗೆ ಮರಣದಂಡನೆಯಾಗಬೇಕು' ಎಂದು ದೇವರ ಕಟ್ಟಳೆಯಿದೆಯಲ್ಲವೇ. 5 ಆದರೆ ಯಾರಾದರೂ 'ತನ್ನ ತಂದೆಗಾಗಲಿ, ತಾಯಿಗಾಗಲಿ, ತನ್ನಿಂದ ಸಲ್ಲಬೇಕಾದುದನ್ನು ದೇವರಿಗೆ ಸಮರ್ಪಿಸಿದೆ' ಎಂದು ಹೇಳಿದರೆ 6 'ಅವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಗೌರವಿಸುವುದರಿಂದ ಮುಕ್ತಹೊಂದಿದ್ದಾನೆ' ಎಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಆಚರಣೆಗಾಗಿಯೇ ದೇವರ ಕಟ್ಟಳೆಯನ್ನು ನಿರರ್ಥಕಗೊಳಿಸಿದ್ದೀರಿ. 7 ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿಯೇ ಪ್ರವಾದಿಸಿದ್ದಾನೆ; 8 ಆದೇನೆಂದರೆ, 

'ಈ ಜನರು ಗೌರವಿಸುವರೆನ್ನನು ಬರಿ ಮಾತಿನಲಿ,
ಆದರವರ ಹೃದಯವಿಹುದು ಅನತಿ ದೂರದಲಿ. 
9 ಕಲಿಸುವರವರು ಆಚಾರದ ನಿಯಮಗಳನು ದೈವಾಜ್ಞೆಯೆನುತ 
ವ್ಯರ್ಥವು ಇವರೆನಗೆ ಮಾಡುತಿಹ ಆರಾಧನೆಯು', ಎಂಬುದೇ" 
ಎಂದರು ಯೇಸು.

10 ಅನಂತರ ಅವರು ಜನಸಮೂಹವನ್ನು ಕರೆದು ಅವರಿಗೆ, "ಕೇಳಿರಿ, ನಾನು ಹೇಳುವುದನ್ನು ಚೆನ್ನಾಗಿ ತಿಳಿದುಕೊಳ್ಳಿರಿ. 11 ಬಾಯಿಯ ಒಳಕ್ಕೆ ಹೋಗುವಂತಹದ್ದು ಮನುಷ್ಯನನ್ನು ಅಶುದ್ಧಗೊಳಿಸುವುದಿಲ್ಲ; ಆದರೆ ಬಾಯಿಯ ಒಳಗಿನಿಂದ ಹೊರಕ್ಕೆ ಬರುವಂತಹುದೇ ಮನುಷ್ಯನನ್ನು ಅಶುದ್ಧಗೊಳಿಸುತ್ತದೆ" ಎಂದು ಹೇಳಿದರು. 12 ಆಗ ಶಿಷ್ಯರು ಹತ್ತಿರ ಬಂದು ಯೇಸುವಿಗೆ, "ನಿಮ್ಮ ಈ ಮಾತನ್ನು ಕೇಳಿದ ಮೇಲೆ ಫರಿಸಾಯರು ಬೇಸರಗೊಂಡಿದ್ದಾರೆಂಬುದು ನಿಮಗೆ ತಿಳಿಯಿತೇ?" ಎಂದು ಕೇಳಿದರು. 13 ಪ್ರತ್ಯುತ್ತರವಾಗಿ ಯೇಸುವು, "ಸ್ವರ್ಗಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವನ್ನೂ ಬೇರು ಸಹಿತವಾಗಿ ಕಿತ್ತುಹಾಕಲಾಗುವುದು. 14 ಆದುದರಿಂದ ಅವರನ್ನು ಅವರಷ್ಟಕ್ಕೆ ಬಿಡಿರಿ; ಅವರು ಕುರುಡರು, ಕುರುಡನೇ ಇನ್ನೊಬ್ಬ ಕುರುಡನನ್ನು ನಡೆಸಿದರೆ ಇಬ್ಬರೂ ಕಂದಕದೊಳಕ್ಕೆ ಬೀಳುವರು" ಎಂದು ಶಿಷ್ಯರಿಗೆ ಹೇಳಿದರು. 15 ಅನಂತರ ಪೇತ್ರನು ಯೇಸುವಿಗೆ, "ಈ ಸಾಮತಿಯ ಅರ್ಥವೇನೆಂದು ನಮಗೆ ವಿವರಿಸಿರಿ" ಎಂದು ವಿನಂತಿಸಿದನು. 16 ಅದಕ್ಕೆ ಯೇಸುವು, "ನಿಮಗಿನ್ನೂ ಅರ್ಥವಾಗಲಿಲ್ಲವೇ? 17 ಬಾಯಿಯ ಒಳಕ್ಕೆ ಹೋಗಿ ಹೊಟ್ಟೆಯನ್ನು ಸೇರುವುದೆಲ್ಲವೂ ಅಲ್ಲಿಂದ ವಿಸರ್ಜನೆಯಾಗಿ ಹೋಗುತ್ತವೆ, ಅವು ಮನುಷ್ಯನನ್ನು ಅಶುದ್ಧಗೊಳಿಸಲಾರವು. 18 ಆದರೆ ಬಾಯಿಯ ಒಳಗಿನಿಂದ ಹೊರಕ್ಕೆ ಹೊರಡುವಂತಹವುಗಳು ಹೃದಯದೊಳಗಿಂದ ಬರುವ ಕೆಟ್ಟ ಆಲೋಚನೆಗಳು. ಅವು ಮನುಷ್ಯನನ್ನು ಅಶುದ್ಧಗೊಳಿಸುತ್ತವೆ. 19 ಹೃದಯದಿಂದ ಕೊಲೆ, ಅನೈತಿಕತೆ, ವ್ಯಭಿಚಾರ, ಕಳ್ಳತನ, ಸುಳ್ಳುಸಾಕ್ಷಿ, ದೇವದೂಷಣೆ ಮುಂತಾದವು ಹೊರಕ್ಕೆ ಬರುತ್ತವೆ. 20 ಇಂಥವುಗಳೇ ಮನುಷ್ಯನನ್ನು ಹೊಲಸು ಮಾಡುವಂತವು; ಆದರೆ ಕೈತೊಳೆದುಕೊಳ್ಳದೆ ಊಟ ಮಾಡಿದರೆ ಮನುಷ್ಯನು ಅಶುದ್ಧನಾಗುವುದಿಲ್ಲ" ಎಂದರು. 

ಕಾನಾನ್ಯ ಸ್ತ್ರೀಯ ಮಗಳನ್ನು ಗುಣಪಡಿಸಿದ್ದು 
(ಮಾರ್ಕ7:24-30)

21 ಬಳಿಕ ಯೇಸುವು ಅಲ್ಲಿಂದ ಹೊರಟು ಟೈರ್‌ ಮತ್ತು ಸೀದೋನ್‌ ಪ್ರಾಂತ್ಯಕ್ಕೆ ಹೋದರು. 22 ಆಗ ಅದೇ ಪ್ರಾಂತ್ಯದಲ್ಲಿದ್ದ ಕಾನಾನ್‌ ನಾಡಿನ ಸ್ತ್ರೀಯೊಬ್ಬಳು ಅವರ ಬಳಿ ಬಂದು, "ಸ್ವಾಮಿ, ದಾವೀದನ ಕುಲಪುತ್ರರೇ, ನನ್ನ ಮೇಲೆ ಕರುಣೆಯಿಡಿ; ನನ್ನ ಮಗಳು ದೆವ್ವದಿಂದ ಪೀಡಿತಳಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾಳೆ" ಎಂದು ಹೇಳಿದಳು. 23 ಯೇಸುವು ಆಕೆಗೆ ಉತ್ತರ ನೀಡಲಿಲ್ಲ. ಅಷ್ಟರಲ್ಲಿ ಅವರ ಬಳಿ ಬಂದ ಶಿಷ್ಯರು, "ಆಕೆಯನ್ನು ಕಳುಹಿಸಿಬಿಡಿ, ಏಕೆಂದರೆ ಆಕೆಯು ನಮ್ಮ ಹಿಂದೆಯೇ ಕೂಗಿ, ರೋಧಿಸುತ್ತಾ ಬರುತ್ತಾಳೆ" ಎಂದು ಯೇಸುವನ್ನು ಬೇಡಿಕೊಂಡರು. 24 ಯೇಸುವು ಪ್ರತ್ಯುತ್ತರವಾಗಿ, "ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲಿನ ಮನೆತನದವರ ಬಳಿಗೆ ಮಾತ್ರ ನನ್ನನ್ನು ಕಳುಹಿಸಿ ಕೊಡಲಾಗಿದೆ" ಎಂದರು. 25 ಆಗ ಆಕೆಯು ಬಂದು ಯೇಸುವಿಗೆ ಅಡ್ಡಬಿದ್ದು, "ಸ್ವಾಮಿ, ನನಗೆ ಸಹಾಯ ಮಾಡಿ" ಎಂದು ಕೇಳಿಕೊಂಡಳು. 26 ಆದರೆ ಯೇಸುವು, "ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲ" ಎಂದು ಹೇಳಿದರು. 27 ಅದಕ್ಕೆ ಆಕೆಯು, "ಸ್ವಾಮಿ, ನೀವು ಹೇಳಿದ್ದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ" ಎಂದಳು. 28 ಆಗ ಯೇಸು ಆಕೆಗೆ, "ಅಮ್ಮ, ನಿನ್ನ ನಂಬಿಕೆಯು ಅತಿ ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ" ಎಂದು ಹೇಳಿದರು. ಆಕೆಯ ಮಗಳು ಅದೇ ಸಮಯದಲ್ಲಿ ಗುಣಹೊಂದಿದಳು. 

ಯೇಸು ಅನೇಕರನ್ನು ಗುಣಪಡಿಸಿದ್ದು 
(ಮಾರ್ಕ8:1-10)

29 ಇದಾದ ಬಳಿಕ ಯೇಸು ಅಲ್ಲಿಂದ ಹೊರಟು ಗಲಿಲೇಯ ಸಮುದ್ರದ ಸಮೀಪಕ್ಕೆ ಬಂದರು; ಅವರು ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. 30 ಆಗ ಜನರ ದೊಡ್ಡ ಸಮೂಹವೊಂದು ಕುಂಟರನ್ನು, ಕುರುಡರನ್ನು, ಮೂಗರನ್ನು ಮತ್ತು ಇನ್ನೂ ಅನೇಕ ವಿಕಲಾಂಗ ಚೇತನರನ್ನು ತಮ್ಮೊಂದಿಗೆ ಕರೆದುಕೊಂಡು ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನೆಲ್ಲಾ ಗುಣಪಡಿಸಿದರು. 31 ಮೂಕರು ಮಾತನಾಡುವುದನ್ನೂ, ಕುಂಟರು ನಡೆದಾಡುವುದನ್ನೂ, ಕುರುಡರು ನೋಡುವುದನ್ನೂ ಜನಸಮೂಹವು ಕಂಡು ಆಶ್ಚರ್ಯದಿಂದ ಇಸ್ರೇಲಿನ ದೇವರನ್ನು ಸ್ತುತಿಸಿದರು. 

32 ತರುವಾಯ ಯೇಸುವು ತಮ್ಮ ಶಿಷ್ಯರನ್ನು ಕರೆದು, "ಈ ಜನಸಮೂಹವು ಮೂರು ದಿನಗಳಿಂದ ನನ್ನೊಂದಿಗಿದೆ; ಅವರಿಗೆ ತಿನ್ನುವುದಕ್ಕೆ ಏನಾದರೂ ಇದೆಯೇ?; ಇವರನ್ನು ಹಸಿದ ಹೊಟ್ಟೆಯಲ್ಲಿ ಕಳುಹಿಸಲು ನನಗೆ ಇಷ್ಟವಿಲ್ಲ. ದಾರಿಯಲ್ಲಿ ಅವರು ಬಳಲಿ ಬಿದ್ದಾರು" ಎಂದರು. 33 ಶಿಷ್ಯರು, "ಇಷ್ಟು ದೊಡ್ಡ ಜನಸಮೂಹಕ್ಕೆ ಆಗುವಷ್ಟು ಆಹಾರವನ್ನು ಈ ನಿರ್ಜನ ಪ್ರದೇಶದಲ್ಲಿ ಎಲ್ಲಿಂದ ತರಲಿ?" ಎಂದರು. 34 ಆಗ ಯೇಸುವು, "ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?" ಎಂದು ಶಿಷ್ಯರನ್ನು ಕೇಳಿದರು. ಅವರು, "ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮೀನುಗಳು ಇವೆ" ಎಂದರು. 35 ಆಗ ಯೇಸುವು, ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳಲು ಅಪ್ಪಣೆಕೊಟ್ಟರು. 36 ಅನಂತರ ಆ ಏಳು ರೊಟ್ಟಿಗಳನ್ನೂ ಮತ್ತು ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ನೀಡಿದರು. ಶಿಷ್ಯರು ಅವುಗಳನ್ನು ಜನಸಮೂಹಕ್ಕೆ ಕೊಟ್ಟರು. 37 ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಬುಟ್ಟಿಗಳು ತುಂಬುವಷ್ಟಿದ್ದವು. 38 ಊಟಮಾಡಿದ ಸ್ತ್ರೀಯರೂ, ಮಕ್ಕಳೂ ಹಾಗು ಗಂಡಸರೂ ಸೇರಿ ಒಟ್ಟು ನಾಲ್ಕು ಸಾವಿರ ಜನರಿದ್ದರು. 39 ತರುವಾಯ ಯೇಸುವು ಜನಸಮೂಹವನ್ನು ಕಳುಹಿಸಿ ದೋಣಿಯನ್ನು ಹತ್ತಿ ಮಗ್ದಾನ್‌ ಎಂಬ ತೀರಕ್ಕೆ ಹೊರಟುಹೋದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ