ಮತ್ತಾಯನು ಬರೆದ ಸುಸಂದೇಶಗಳು
1 ಯೇಸುವು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು ದುರಾತ್ಮಗಳ ಪೀಡನೆಗಳನ್ನೂ, ಎಲ್ಲಾ ವಿಧದ ರೋಗರುಜಿನಗಳನ್ನೂ ಗುಣಪಡಿಸಲು ಅವರಿಗೆ ಅಧಿಕಾರವನ್ನು ಕೊಟ್ಟರು. 2 ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರ ಅಂದ್ರೆಯ, ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ, 3 ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕದವನಾದ ಮತ್ತಾಯ, ಅಲ್ಫಾಯನ ಮಗನಾದ ಯಕೋಬ ಮತ್ತು ತದ್ದೇಯ, 4 ದೇಶಾಭಿಮಾನಿಯೆನಿಸಿದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಯೂದ ಇಸ್ಕರಿಯೋತ ಎಂಬವರೇ. ಆ ಹನ್ನೆರಡು ಮಂದಿ ಶಿಷ್ಯರು.
5 ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶಗಳೇನೆಂದರೆ, "ಅನ್ಯಜನರ ಬಳಿಗೆ ಹೋಗಲೇಬೇಡಿರಿ ಮತ್ತು ಸಮಾರಿಯಾದವರ ಯಾವ ಊರಿಗೂ ಪ್ರವೇಶಿಸಬೇಡಿರಿ. 6 ಬದಲಾಗಿ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲಿನ ಜನರ ಬಳಿಗೆ ಹೋಗಿರಿ. 7 ನೀವು ಹೋಗುವಾಗ 'ಪರಲೋಕ ರಾಜ್ಯವು ಸಮಾಪಿಸಿತು' ಎಂದು ಬೋಧಿಸಿರಿ. 8 ರೋಗಿಗಳನ್ನು ಗುಣಪಡಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಎಬ್ಬಿಸಿರಿ, ದೆವ್ವಗಳನ್ನು ಬಿಡಿಸಿರಿ; ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ. 9 ಜೇಬಿನಲ್ಲಿ ಬೆಳ್ಳಿ, ಬಂಗಾರ ಮತ್ತು ಹಿತ್ತಾಳೆಗಳನ್ನು ಇಟ್ಟುಕೊಳ್ಳಬೇಡಿರಿ. 10 ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಮೇಲಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ದಂಡವನ್ನಾಗಲಿ ತೆಗೆದುಕೊಳ್ಳಬೇಡಿರಿ; ಏಕೆಂದರೆ ಕೆಲಸ ಮಾಡುವವನು ತನ್ನ ಜೀವನಾಧಾರಕ್ಕೆ ಬಾಧ್ಯಸ್ಥನು.
11 ನೀವು ಯಾವುದೇ ಪಟ್ಟಣಕ್ಕಾಗಲಿ, ಊರಿಗಾಗಲಿ ಪ್ರವೇಶಿಸುವಾಗ ಅಲ್ಲಿರುವವರಲ್ಲಿ ಯಾರು ಯೋಗ್ಯರೆಂದು ವಿಚಾರಿಸಿರಿ; ಮತ್ತು ಅಲ್ಲಿಂದ ಹೊರಡುವವರೆಗೆ ಅವರೊಂದಿಗೆ ಇರಿ; 12 ನೀವು ಒಂದು ಮನೆಯೊಳಕ್ಕೆ ಪ್ರವೇಶಿಸಿದಾಗ ಅಲ್ಲಿರುವವರಿಗೆ 'ಶುಭವಾಗಲಿ' ಎಂದು ವಂದಿಸಿರಿ. 13 ಆ ಮನೆಯು ಯೋಗ್ಯವಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಲಭಿಸಲಿ; ಅವರು ಅಯೋಗ್ಯರಾಗಿದ್ದಲ್ಲಿ ನಿಮ್ಮ ಆಶೀರ್ವಾದವು ನಿಮಗೆ ಹಿಂದಿರುಗಲಿ. 14 ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ, ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲಿ, ಪಟ್ಟಣದಿಂದಾಗಲಿ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ. 15 ನ್ಯಾಯತೀರ್ಪಿನ ದಿನದಲ್ಲಿ ಆ ಪಟ್ಟಣಕ್ಕೆ 'ಸೊದೋಮ್', 'ಗೊಮೋರ' ಪಟ್ಟಣಗಳ ಗತಿಯೇ ಆಗುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
16 ನೋಡಿರಿ ನಾನು ನಿಮ್ಮನ್ನು ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಿಮ್ಮನ್ನು ಕಳುಹಿಸುತ್ತಿದ್ದೇನೆ. ನೀವು ಸರ್ಪಗಳಂತೆ ಯುಕ್ತಿವಂತರೂ, ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ. 17 ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯಿಸುವರು. 18 ಇದಲ್ಲದೆ ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದಕ್ಕೆ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ, ಅನ್ಯಜನಗಳಿಗೂ ನೀವು ನನಗೆ ಸಾಕ್ಷಿಗಳಾಗುವಿರಿ. 19 ಅವರು ನಿಮ್ಮನ್ನು ಹಿಡಿದೊಪ್ಪಿಸಿದಾಗ ನೀವು ಏನು ಹೇಳುವುದು, ಹೇಗೆ ವಾದಿಸುವುದು ಎಂದು ಯೋಚಿಸಬೇಡಿರಿ; ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲಿಯೇ ನಿಮಗೆ ತಿಳಿಸಲ್ಪಡುವುದು. 20 ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. 21 ಸಹೋದರನು ತನ್ನ ಸಹೋದರನನ್ನೂ, ತಂದೆಯು ತನ್ನ ಮಗನನ್ನೂ ಮರಣಕ್ಕೆ ಗುರಿಮಾಡುವರು; ಮಕ್ಕಳು ತಂದೆತಾಯಿಗಳಿಗೆ ವಿರುದ್ಧವಾಗಿ ನಿಂತು ಅವರನ್ನು ಕೊಲ್ಲಿಸುವರು. 22 ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ವಿರೋಧಿಸುವರು; ಆದರೆ ಕಡೆಯವರೆಗೆ ತಾಳುವವನು ರಕ್ಷಣೆಯನ್ನು ಹೊಂದುವನು. 23 ಇದಲ್ಲದೆ ಒಂದು ಪಟ್ಟಣದಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣದಲ್ಲಿ ಆಶ್ರಯವನ್ನು ಪಡೆಯಿರಿ; ನರಪುತ್ರನು ಬರುವದರೊಳಗೆ ಇಸ್ರೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕೆ ಆಗುವುದಿಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 24 ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಇಲ್ಲವೇ ಸೇವಕನು ತನ್ನ ಯಜಮಾನನಿಗಿಂತ ಹೆಚ್ಚಿನವನಲ್ಲ. 25 ಶಿಷ್ಯನು ಗುರುವಿನಂತೆಯೂ, ಸೇವಕನು ತನ್ನ ಯಜಮಾನನಂತೆಯೂ ಇದ್ದರೆ ಸಾಕು; ಮನೆಯ ಯಜಮಾನನನ್ನೇ ಪಿಶಾಚಿಗಳ ಒಡೆಯನೆಂದು ಅವರು ಕರೆದರೆ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡುವರು?
26 ಆದುದರಿಂದ ಅವರಿಗೆ ಹೆದರಬೇಡಿರಿ; ಯಾವುದನ್ನೂ ಮುಚ್ಚಿಡಲಾಗುವುದಿಲ್ಲ; ಗೊತ್ತಾಗದಂತೆ ಯಾವುದನ್ನೂ ಮರೆಮಾಚಲು ಆಗುವುದಿಲ್ಲ. 27 ನಾನು ಕತ್ತಲೆಯಲ್ಲಿ ಯಾವುದನ್ನು ನಿಮಗೆ ಹೇಳುತ್ತೇನೋ ಅವುಗಳನ್ನು ನೀವು ಬೆಳಕಿನಲ್ಲಿ ಹೇಳಿರಿ; ನೀವು ಕಿವಿಯಲ್ಲಿ ಏನನ್ನು ಕೇಳುವಿರೋ ಅವುಗಳನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ. 28 ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಏಕೆಂದರೆ ಅವರಿಂದ ಆತ್ಮವನ್ನು ಕೊಲ್ಲಲು ಸಾಧ್ಯವಿಲ್ಲ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನಾಶಮಾಡಲು ಶಕ್ತರಾಗಿರುವ ದೇವರಿಗೆ ಭಯಪಡಿರಿ. 29 ಒಂದು ಕಾಸಿಗೆ ಎರಡು ಗುಬ್ಬಿಗಳನ್ನು ಮಾರಲಾಗುತ್ತದೆ; ಆದರೆ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದೂ ನೆಲಕ್ಕೆ ಬೀಳುವದಿಲ್ಲ. 30 ನಿಮ್ಮ ತಲೆಯ ಕೂದಲುಗಳೂ ಸಹ ಎಣಿಸಲ್ಪಟ್ಟಿವೆ. ಆದುದರಿಂದ ಹೆದರಬೇಡಿರಿ, 31 ನೀವು ಗುಬ್ಬಿಗಳಿಗಿಂತ ಬಹು ಶ್ರೇಷ್ಟರಾಗಿದ್ದೀರಿ. 32 ಜನರ ಮುಂದೆ ತಾನು ಯೇಸುವಿನವನೆಂದು ಯಾರು ಒಪ್ಪಿಕೊಳ್ಳುವರೋ, ನಾನೂ ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವರನ್ನು ಒಪ್ಪಿಕೊಳ್ಳುವೆನು; 33 ಯಾರು ಜನರ ಮುಂದೆ ನನ್ನನ್ನು ಅಲ್ಲಗಳೆಯುತ್ತಾರೋ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಾನೂ ಅವರನ್ನು ಅಲ್ಲಗಳೆಯುವೆನು.
34 ನಾನು ಭೂಮಿಯ ಮೇಲೆ ಶಾಂತಿ ಸಮಾಧಾನವನ್ನು ತರುವುದಕ್ಕಾಗಿ ಬಂದೆನೆಂದು ತಿಳಿದುಕೊಳ್ಳಬೇಡಿರಿ; ಶಾಂತಿ ಸಮಾಧಾನಕ್ಕಲ್ಲ, ನಾನು ಬಂದಿರುವುದು ಖಡ್ಗವನ್ನು ಹಾಕಲು; 35 ಮಗನಿಗೂ ಅವನ ತಂದೆಗೂ, ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ. 36 ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವಿರೋಧಿಗಳಾಗಿರುವರು. 37 ನನಗಿಂತ ಹೆಚ್ಚಾಗಿ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಪ್ರೀತಿಸುವವನು ನನಗೆ ಯೋಗ್ಯನಲ್ಲ; ಮತ್ತು ಮಗನ ಮೇಲಾಗಲಿ ಮಗಳ ಮೇಲಾಗಲಿ ನನಗಿಂತ ಹೆಚ್ಚಿನ ಪ್ರೀತಿಯನ್ನು ತೋರುವವನು ನನಗೆ ಯೋಗ್ಯನಲ್ಲ. 38 ತನ್ನ ಶಿಲುಬೆಯನ್ನು ಹೊತ್ತುಕೊಳ್ಳದೆ ನನ್ನನ್ನು ಹಿಂಬಾಲಿಸುವವನು ನನಗೆ ಯೋಗ್ಯನಲ್ಲ. 39 ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುವನು. 40 ನಿಮ್ಮನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನೂ ಅಂಗೀಕರಿಸಿಕೊಳ್ಳುತ್ತಾನೆ; ನನ್ನನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನು ಕಳುಹಿಸಿದ ದೇವರನ್ನೂ ಅಂಗೀಕರಿಸಿಕೊಳ್ಳುತ್ತಾನೆ. 41 ಪ್ರವಾದಿಯ ಹೆಸರಿನಲ್ಲಿ ಪ್ರವಾದಿಯನ್ನು ಅಂಗೀಕರಿಸುವವನು ಪ್ರವಾದಿಯ ಪ್ರತಿಫಲವನ್ನು ಪಡೆದುಕೊಳ್ಳುವನು; ನೀತಿವಂತನ ಹೆಸರಿನಲ್ಲಿ ನೀತಿವಂತನನ್ನು ಅಂಗೀಕರಿಸುವವನು ನೀತಿವಂತನ ಪ್ರತಿಫಲವನ್ನು ಪಡೆದುಕೊಳ್ಳುವನು. 42 ಈ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ನನ್ನ ಶಿಷ್ಯನ ಹೆಸರಿನಲ್ಲಿ ಒಂದು ತಂಬಿಗೆ ನೀರನ್ನು ಕುಡಿಯಲು ಕೊಟ್ಟರೂ ಅವನು ತನ್ನ ಪ್ರತಿಫಲವನ್ನು ಪಡೆಯದೇ ಹೋಗನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ" ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ