ಅಧ್ಯಾಯ 19

ಮತ್ತಾಯನು ಬರೆದ ಸುಸಂದೇಶಗಳು


ಹೆಂಡತಿಯ ಪರಿತ್ಯಾಗದ ವಿಷಯ
(ಮಾರ್ಕ10:1-12)

1 ಯೇಸುವು ಆ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಗಲಿಲೇಯದಿಂದ ಹೊರಟು ಜೋರ್ಡನಿನ ಆಚೆಯ ತೀರಕ್ಕೆ ಬಂದರು. 2 ಜನರ ದೊಡ್ಡ ಸಮೂಹವೊಂದು ಅವರನ್ನು ಹಿಂಬಾಲಿಸಿತು; ಅವರನ್ನೆಲ್ಲಾ ಯೇಸುವು ಅಲ್ಲಿಯೇ ಗುಣಪಡಿಸಿದರು. 3 ಆಗ ಫರಿಸಾಯರು ಯೇಸುವನ್ನು ಪರೀಕ್ಷಿಸುವ ಸಲುವಾಗಿ ಅವರ ಬಳಿಗೆ ಬಂದು, "ಒಬ್ಬ ಮನುಷ್ಯನು ಕಾರಣಾಂತರದಿಂದ ತನ್ನ ಹೆಂಡತಿಯನ್ನು ಬಿಡುವುದು ನ್ಯಾಯವೇ" ಎಂದು ಕೇಳಿದರು. 4 ಅವರು ಪ್ರತ್ಯುತ್ತರವಾಗಿ, "ಆದಿಯಲ್ಲಿ ಮನುಷ್ಯರನ್ನು ಸೃಷ್ಟಿಸಿದ ದೇವರು ಅವರನ್ನು ಗಂಡು ಹೆಣ್ಣಾಗಿ ನಿರ್ಮಾಣ ಮಾಡಿದರು. 5 ಈ ಕಾರಣದಿಂದಲೇ ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಹೀಗೆಯೇ ಅವರಿಬ್ಬರೂ ಒಂದೇ ಶರೀರವಾಗಿರುವರು ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ? 6 ಅವರೀಗ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು ಮನುಷ್ಯರು ಪ್ರತ್ಯೇಕಿಸಬಾರದು" ಎಂದು ಹೇಳಿದರು. 

7 ಅದಕ್ಕೆ ಫರಿಸಾಯರು, "ಹಾಗಾದರೆ ತ್ಯಾಗಪತ್ರವನ್ನು ನೀಡಿ ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಆಜ್ಞಾಪಿಸಿದ್ದೇಕೆ?" ಎಂದು ಕೇಳಿದರು. 8 ಯೇಸುವು ಅವರಿಗೆ, "ಮೋಶೆಯು ನಿಮ್ಮ ಹೃದಯದ ಕಾಠಿಣ್ಯತೆಯ ಕಾರಣದಿಂದಲೇ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡಬಹುದೆಂದು ಅಪ್ಪಣೆ ನೀಡಿದರು. ಆದರೆ ಅದು ಆದಿಯಿಂದಲೂ ಹಾಗೆ ಇರಲಿಲ್ಲ" ಎಂದರು. 9 "ಆದರೆ ನಾನು ನಿಮಗೆ ಹೇಳುವುದೇನೆಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ. ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರಿಯಾತ್ತಾನೆ" ಎಂದರು. 10 ಆಗ ಯೇಸುವಿನ ಶಿಷ್ಯರು, "ಹೆಂಡತಿಯೊಂದಿಗೆ ಗಂಡನ ಧರ್ಮ ಹೀಗಿರುವುದಾದರೆ ಮದುವೆಯಾಗುವುದು ಒಳ್ಳೆಯದಲ್ಲ" ಅಂದಾಗ. 11 ಯೇಸುವು ಅವರಿಗೆ, "ಯಾರಿಗೆ ಈ ವರವನ್ನು ಕೊಡಲಾಗಿದೆಯೋ ಅವರನ್ನು ಹೊರತು ಪಡಿಸಿ ಇತರರು ಈ ಮಾತನ್ನು ಅಂಗೀಕರಿಸಲು ಆಗುವುದಿಲ್ಲ. 12 ಏಕೆಂದರೆ ತಮ್ಮ ತಾಯ ಗರ್ಭದಿಂದ ಹುಟ್ಟಿ ದಾಗಲೇ ಕೆಲವರು ನಪುಂಸಕರಾಗುತ್ತಾರೆ, ಮತ್ತು ಕೆಲವರು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಡತ್ತಾರೆ, ಇನ್ನು ಕೆಲವರು ಸ್ವರ್ಗಸಾಮ್ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ಅವಿವಾಹಿತರಾಗಿ ಉಳಿದುಕೊಂಡವರೂ ಇದ್ದಾರೆ. ಇದನ್ನು ಅಂಗೀಕರಿಸ ಬಲ್ಲವರು ಅಂಗೀಕರಿಸಲಿ" ಎಂದರು.

ಚಿಕ್ಕಮಕ್ಕಳನ್ನು ಆಶೀರ್ವದಿಸಿದ್ದು
(ಮಾರ್ಕ10:13-16; ಲೂಕ18:15-17)

13 ತರುವಾಯ ಕೆಲವರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ತಂದು ಅವರನ್ನು ತಮ್ಮ ಮಕ್ಕಳ ಮೇಲೆ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ  ಕೇಳಿಕೊಂಡರು. ಆಗ ಶಿಷ್ಯರು ಅವರನ್ನು ಗದರಿಸಿದರು. 14 ಆದರೆ ಯೇಸುವು, "ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರದಂತೆ ಅವುಗಳಿಗೆ ತೊಂದರೆ ಮಾಡಬೇಡಿರಿ; ಏಕೆಂದರೆ ಸ್ವರ್ಗಸಾಮ್ರಾಜ್ಯವು ಇಂಥವರದೇ" ಎಂದರು. 15 ಬಳಿಕ ಯೇಸುವು ಆ ಮಕ್ಕಳ ಮೇಲೆ ತಮ್ಮ ಕೈಗಳನ್ನಿಟ್ಟು ಪ್ರಾರ್ಥಿಸಿ ಅಲ್ಲಿಂದ ಹೊರಟರು.

ಹಣದ ಭ್ರಾಂತಿಯಿಂದಾಗುವ ಕೇಡು
(ಮಾರ್ಕ10:17-27; ಲೂಕ18:18-27)

16 ಆಗ ಒಬ್ಬ ತರುಣನು ಯೇಸುವಿನ ಬಳಿಗೆ ಬಂದು ಅವರಿಗೆ, "ಒಳ್ಳೆಯ ಗುರುವೇ, ನಾನು ನಿತ್ಯಜೀವವನ್ನು ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?" ಎಂದು ಕೇಳಿದನು. 17 ಅದಕ್ಕೆ ಯೇಸುವು ಆತನಿಗೆ, "ನನ್ನನ್ನು ಒಳ್ಳೆಯವನೆಂದು ನೀನೇಕೆ ಕರೆಯುವೆ? ದೇವರೊಬ್ಬರ ಹೊರತು ಮತ್ತಾರೂ ಒಳ್ಳೆಯವನಲ್ಲ; ಆದರೆ ನೀನು ನಿತ್ಯಜೀವದಲ್ಲಿ ಸೇರಬೇಕೆಂದು ಬಯಸುವಿಯಾದರೆ, ದೇವರ ಆಜ್ಞೆಗಳನ್ನು ಕೈಕೊಂಡು ಅದರಂತೆ ನಡೆದುಕೋ" ಎಂದರು. 18 ಅದಕ್ಕೆ ಅವನು, "ಅವು ಯಾವುವು?" ಎಂದು ಕೇಳಿದನು. ಅದಕ್ಕೆ ಯೇಸುವು, "ನೀನು ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆ ತಾಯಿಗಳನ್ನು ನೀನು ಗೌರವಿಸಬೇಕು; ಮತ್ತು ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ನೀನು ಪ್ರೀತಿಸಬೇಕು" ಎಂದು ಹೇಳಿದರು. 20 ಆಗ ಆ ತರುಣನು ಯೇಸುವಿಗೆ, "ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಮಾಡುತ್ತಾ ಬಂದಿದ್ದೇನೆ" ಎಂದು ಹೇಳಿದನು. 21 ಯೇಸು ಅವನಿಗೆ, "ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನ್ನಲ್ಲಿ ಇರುವುದನ್ನೆಲ್ಲಾ ಮಾರಿ ಬಡವರಿಗೆ ಕೊಡು; ಆಗ ಸ್ವರ್ಗಲೋಕದಲ್ಲಿ ನಿನ್ನ ಸಂಪತ್ತು ಹೆಚ್ಚಾಗುವುದು; ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು" ಎಂದು ಹೇಳಿದರು. 

22 ಆದರೆ ಆ ತರುಣನು ಯೇಸುವಿನ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಸಾಕಷ್ಟು ಐಶ್ವರ್ಯ ಇತ್ತು. 23 ಬಳಿಕ ಯೇಸು ತನ್ನ ಶಿಷ್ಯರಿಗೆ, "ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಸೇರುವುದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 24 ಮತ್ತೆ ನಾನು ನಿಮಗೆ ಹೇಳುವುದೇನಂದರೆ, ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತಲೂ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವುದು ಸುಲಭ" ಎಂದರು. 25 ಇದನ್ನು ಕೇಳಿದ ಶಿಷ್ಯರು ಅತ್ಯಂತ ವಿಸ್ಮಯದಿಂದ, "ಹಾಗಾದರೆ ರಕ್ಷಣೆ ಸಿಗುವುದಾದರೂ ಯಾರಿಗೆ?" ಎಂದು ಕೇಳಿದರು. 26 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, "ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ" ಎಂದು ಹೇಳಿದರು. 

ಎಲ್ಲವನ್ನೂ ತ್ಯಾಗ ಮಾಡಿದವರಿಗೆ ದೇವರ ಕೃಪೆ
(ಮಾರ್ಕ10:28-31; ಲೂಕ18:28-30)

27 ಆಮೇಲೆ ಪೇತ್ರನು ಯೇಸುವಿಗೆ, "ನಾವು ಎಲ್ಲವನ್ನು ಬಿಟ್ಟು ನಿಮ್ಮನ್ನು ಹಿಂಬಾಲಿಸಿದೆವು; ಅದರಿಂದ ನಮಗೇನು ದೊರೆಯುವುದು?" ಎಂದು ಕೇಳಿದನು. 28 ಯೇಸು ಅವರಿಗೆ, "ನಾನು ನಿಮಗೆ ನಿಜವಾಗಿ ಹೇಳುತ್ತೇನೆ; "ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾಭರಿತ ಸಿಂಹಾಸನದಲ್ಲಿ ಕುಳಿಕೊಂಡಿರಲು ನನ್ನನ್ನು ಹಿಂಬಾಲಿಸಿದ ನೀವು ಸಹ ಇಸ್ರೇಲಿನ ಹನ್ನೆರಡು ಗೋತ್ರಗಳ ಜನಾಂಗಕ್ಕೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. 29 ನನ್ನ ನಿಮಿತ್ತ ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ ಕಳೆದುಕೊಳ್ಳುವ ಪ್ರತಿಯೊಬ್ಬನು ಅದಕ್ಕೆ ನೂರರಷ್ಟು ಪಡೆದುಕೊಳ್ಳುವನು; ಮತ್ತು ನಿತ್ಯಜೀವಕ್ಕೆ ಬಾಧ್ಯಸ್ಥನಾಗುವನು. 30 ಆದರೆ ಮೊದಲನೆಯ ವರಲ್ಲಿ ಅನೇಕರು ಕಡೆಯವರಾಗುವರು; ಮತ್ತು ಕಡೆಯವರಲ್ಲಿ ಅನೇಕರು ಮೊದಲನೆಯವರಾಗುವರು” ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ