ಅಧ್ಯಾಯ 23

ಮತ್ತಾಯನು ಬರೆದ ಸುಸಂದೇಶಗಳು


ಜೆರುಸಲೇಮಿನ ವಿಷಯದಲ್ಲಿ ಯೇಸುವಿನ ದುಃಖ
(ಮಾರ್ಕ12:38-40; ಲೂಕ20:45-47, 11:39-54, 13:34, 35)

1 ಬಳಿಕ ಯೇಸುವು ಜನಸಮೂಹವನ್ನೂ, ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಹೇಳಿದ್ದೇನೆಂದರೆ, 2 "ಧರ್ಮಶಾಸ್ತ್ರಿಗಳೂ, ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ; 3 ಆದುದರಿಂದ ಅವರು ನಿಮಗೆ ಹೇಳುವವುಗಳನ್ನೆಲ್ಲಾ ಪಾಲಿಸಿ ನಡೆಯಿರಿ; ಆದರೆ ಅವರ ನಡತೆಯನ್ನು ಮಾತ್ರ ಅನುಕರಿಸಬೇಡಿ; ಏಕೆಂದರೆ ಅವರು ಹೇಳುವುದನ್ನೆಂದೂ ಮಾಡುವುದಿಲ್ಲ. 4 ಅವರು ಭಾರವಾದ ಮತ್ತು ಹೊರಲಾಗದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೇರುತ್ತಾರೆ. ತಾವು ಮಾತ್ರ ಅವುಗಳನ್ನು ತಮ್ಮ ಕಿರುಬೆರಳಿನಿಂದಲೂ ಮುಟ್ಟಲಾರರು. 5 ಆದರೆ ತಾವು ಮಾಡುವ ಎಲ್ಲಾ ಕಾರ್ಯಗಳನ್ನೂ ಜನರು ನೋಡಲೆಂದೇ ಅವರು ಮಾಡುತ್ತಾರೆ. ಅವರು ತಮ್ಮ ಧಾರ್ಮಿಕ ಗುರುತಿನ ಪಟ್ಟಿಗಳನ್ನು ಅಗಲಮಾಡಿಕೊಳ್ಳುತ್ತಾರೆ. ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾರೆ. 6 ಔತಣಕೂಟಗಳಲ್ಲಿ ಪ್ರಥಮ ಸ್ಥಾನಗಳನ್ನೂ, ಸಭಾಮಂದಿರಗಳಲ್ಲಿ ಮುಖ್ಯಪೀಠಗಳನ್ನೂ, ಪೇಟೆ ಬೀದಿಗಳಲ್ಲಿ ಗೌರವಾದರಗಳನ್ನೂ ಅವರು ಅಪೇಕ್ಷಿಸುತ್ತಾರೆ. 7 ಅಲ್ಲದೇ ಎಲ್ಲರಿಂದಲೂ 'ಗುರುವೇ' ಎಂದು ಕರೆಸಿಕೊಳ್ಳಲು ಇಚ್ಚಿಸುತ್ತಾರೆ.  8 ಆದರೆ ನೀವು ಬೋಧಕರೆನಿಸಿಕೊಳ್ಳಬೇಡಿರಿ ನಿಮಗೆ ಒಬ್ಬನೇ ಬೋಧಕನು, ನೀವೆಲ್ಲರೂ ಆತನ ಸಹೋದರರು. 9 ಭೂಮಿಯ ಮೇಲೆ ಯಾರನ್ನೂ ನೀವು ನಿಮ್ಮ ಪಿತನೆಂದು ಕರೆಯಬೇಡಿರಿ; ಏಕೆಂದರೆ ನಿಮ್ಮ 'ಪಿತ' ಒಬ್ಬರೇ. ಅವರು ಸ್ವರ್ಗಲೋಕದಲ್ಲಿದ್ದಾರೆ. 10 ನೀವು 'ಪ್ರಭು'ವೆಂದು ಕರೆಸಿಕೊಳ್ಳಬೇಡಿರಿ; ನಿಮ್ಮ 'ಪ್ರಭು' ಒಬ್ಬನೇ, 'ಆತನೇ ಕ್ರಿಸ್ತ". 11 ಆದರೆ ನಿಮ್ಮಲ್ಲಿ ಅತಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು. 12 ಯಾರಾದರೂ ತನ್ನನ್ನು ಹೆಚ್ಚಿಸಿಕೊಳ್ಳಬಯಸಿದರೆ ಅವನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು. 

13 ಕಪಟಿಗಳಾದ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸ್ವರ್ಗಸಾಮ್ರಾಜ್ಯದ ದ್ವಾರವನ್ನು ಮನುಷ್ಯರಿಗೆ ಮುಚ್ಚುತ್ತೀರಿ. ನೀವಂತೂ ಪ್ರವೇಶಿಸುವುದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಕ್ಕೆ ಹೋಗಲು ಬಿಡುವುದಿಲ್ಲ. 14 ಕಪಟಿಗಳಾದ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ವಿಧವೆಯರ ಮನೆಗಳನ್ನು ಕಬಳಿಸುತ್ತೀರಿ; ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ; ಆದುದರಿಂದ ನೀವು ಹೆಚ್ಚು ದಂಡನೆಯನ್ನು ಅನುಭವಿಸುವಿರಿ. 5 ಕಪಟಿಗಳಾದ ಫರಿಸಾಯರೇ, ಶಾಸ್ತ್ರಿಗಳೇ, ನಿಮಗೆ ಧಿಕ್ಕಾರ! ಒಬ್ಬನನ್ನು ಮತಾಂತರಗೊಳಿಸುವುದಕ್ಕೆ ನೀವು ಸಮುದ್ರವನ್ನೂ, ಭೂಮಿಯನ್ನೂ ಸುತ್ತುತ್ತೀರಿ; ಮತಾಂತರ ಮಾಡಿದ ಮೇಲೆ ಅವನು ನಿಮಗಿಂತಲೂ ಹೆಚ್ಚಪಟ್ಟು ನರಕದಲ್ಲಿ ನರಳುವಂತೆ ಮಾಡುತ್ತೀರಿ. 16 ಕುರುಡು ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದೇನೂ ಅಲ್ಲ ಅನ್ನುವಂತೆ ವರ್ತಿಸುತ್ತೀರಿ; ಆದರೆ ಅವನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅದನ್ನವನು ನಡೆಸಿಯೇ ತೀರಬೇಕೆನ್ನುತ್ತೀರಿ. 17 ಮೂರ್ಖರೇ, ಕುರುಡರೇ, ಯಾವುದು ಉನ್ನತವಾದದ್ದು? ಚಿನ್ನವೋ ಇಲ್ಲ ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? 18 ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದೇನೂ ಅಲ್ಲ ಅನ್ನುವಂತೆ ವರ್ತಿಸುತ್ತೀರಿ; ಆದರೆ ಅವನು ಬಲಿಪೀಠದ ಮೇಲಿನ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅದನ್ನವನು ನಡೆಸಿಯೇ ತೀರಬೇಕೆನ್ನುತ್ತೀರಿ. 19 ಮೂರ್ಖರೇ, ಕುರುಡರೇ, ಯಾವುದು ಉನ್ನತವಾದದ್ದು? ಕಾಣಿಕೆಯೋ ಇಲ್ಲ ಅದನ್ನು ಪಾವನಗೊಳಿಸುವ ಬಲಿಪೀಠವೋ?  20 ಆದರೆ ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆಯೂ, ಪೀಠದ ಮೇಲಿರುವ ವಸ್ತುಗಳ ಮೇಲೆಯೂ ಆಣೆಯಿಟ್ಟಂತೆ ಆಗುತ್ತದೆ. 21 ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಆದರಲ್ಲಿ ನೆಲೆಗೊಂಡಿರುವವರ ಮೇಲೆಯೂ ಆಣೆಯಿಟ್ಟಂತೆ ಆಗುತ್ತದೆ. 22 ಹಾಗೆಯೇ ಸ್ವರ್ಗದ ಮೇಲೆ ಆಣೆಯಿಡುವವನು, ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಆಸೀನರಾಗಿರುವವರ ಮೇಲೆಯೂ ಆಣೆಯಿಟ್ಟಂತೆ ಆಗುತ್ತದೆ. 

23 ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪದೀನ, ಸದಾಪ, ಜೀರಿಗೆ ಮುಂತಾದವುಗಳಲ್ಲಿ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆಗಳನ್ನು ಬದಿಗೊತ್ತಿದ್ದೀರಿ. ಅವುಗಳನ್ನು ಅಲಕ್ಷ್ಯ ಮಾದ್ದೀರಿ. ಅನುಷ್ಠಾನಗೊಳಿಸದೆ ಸುಮ್ಮನಿದ್ದಿರಿ. 24 ಕುರುಡು ಮಾರ್ಗದರ್ಶಕರಾದ ನೀವು ಸೊಳ್ಳೆಗಳನ್ನು ಸೋಸುತ್ತೀರಿ, ಆದರೆ ಒಂಟೆಗಳನ್ನು ನುಂಗಿಬಿಡುತ್ತೀರಿ. 25 ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವುಗಳೊಳಗೆ ಸುಲಿಗೆಯ, ದುರಾಸೆಯ ಕೊಳೆ ತುಂಬಿರುತ್ತವೆ. 26 ಕುರುಡ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಭಾಗವನ್ನು ಶುಚಿಮಾಡು; ಆಗ ಅವುಗಳ ಹೊರಭಾಗವೂ ಶುಚಿಯಾಗುವುದು. 

27 ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಅವು ಹೊರಕ್ಕೆ ನಿಜಕ್ಕೂ ಅಂದವಾಗಿ ಕಾಣಿಸುತ್ತವೆ; ಆದರೆ ಒಳಗೆ ಸತ್ತವರ ಮೂಳೆಗಳಿಂದಲೂ, ಕೊಳಕಿನಿಂದಲೂ ತುಂಬಿವೆ. 28 ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸುವಿರಾದರೂ ನಿಮ್ಮೊಳಗೆ ಕಪಟತನವೂ, ದುಷ್ಟತನವೂ ಅಡಗಿದೆ. 29 ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಸಮಾಧಿಗಳನ್ನು ಕಟ್ಟಿಸುತ್ತೀರಿ. ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ. 30 ನಮ್ಮ ಪೂರ್ವಜರ ದಿನಗಳಲ್ಲಿ ನಾವಿರುತ್ತಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ನಾವು ಪಾಲ್ಗೊಳ್ಳುತ್ತಿರಲಿಲ್ಲ ಎಂದು ಹೇಳುತ್ತೀರಿ. 31 ಆದರೆ ನೀವೇ ಆ ಪ್ರವಾದಿಗಳನ್ನು ಕೊಂದವರ ಮಕ್ಕಳೆಂದೂ ಸಾಕ್ಷಿ ಹೇಳುತ್ತೀರಿ. 32 ಹಾಗಾದರೆ ನಿಮ ಪಿತೃಗಳ ಯೋಗ್ಯತೆಯನ್ನು ನೀವೇ ಅಳೆಯಿರಿ. ಅವರು ಪ್ರಾರಂಭಿಸಿದ್ದನ್ನು ನೀವು ಪೂರ್ಣಗೊಳಿಸಿರಿ. 

33 ಹಾವುಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆಯಿಂದ ಹೇಗೆ ತಪ್ಪಿಸಿಕೊಳ್ಳುವಿರಿ? 34 ಆದುದರಿಂದ ನೋಡಿರಿ, ನಾನು ಪ್ರವಾದಿಗಳನ್ನೂ, ಜ್ಞಾನಿಗಳನ್ನೂ, ಧರ್ಮಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ; ಶಿಲುಬೆಗೆ ಹಾಕುವಿರಿ; ಇನ್ನು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಸಿ ಅವರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸುವಿರಿ. 35 ಹೀಗೆ ನೀತಿವಂತನಾದ ಹೇಬೆಲನ ರಕ್ತದಿಂದ ಮೊದಲುಗೊಂಡು ದೇವಾಲಯಕ್ಕೂ ಬಲಿಪೀಠಕ್ಕೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದ ಹೊಣೆ ನಿಮ್ಮದೇ ಆಗಿರುತ್ತದೆ. 36 ಇವೆಲ್ಲವುಗಳು ನಿಮ್ಮಸಂತತಿಯವರ ಮೇಲೆ ಬರುವುದೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

37 ಜೆರುಸಲೇಮೆ, ಓ ಜೆರುಸಲೇಮೆ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರ ಮೇಲೆ ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂರಿಸುವಂತೆ ನಿನ್ನ ಮಕ್ಕಳನ್ನು ಕೂರಿಸುವುದಕ್ಕೆ ನನಗೆಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನಸ್ಸಿಲ್ಲದೇ ಹೋಯಿತು. 38 ನೋಡಿರಿ, ನಿಮ್ಮದೇವಾಲಯ ಬರಿದಾಗುವುದು. 39 ಏಕೆಂದರೆ 'ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು!' ಎಂದು ನೀವಾಗಿ ಹೇಳುವ ದಿನದವರೆಗೆ ನೀವು ನನ್ನನ್ನು ನೋಡುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ," ಎಂದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ