ಅಧ್ಯಾಯ 28

ಮತ್ತಾಯನು ಬರೆದ ಸುಸಂದೇಶಗಳು



ಯೇಸುವಿನ ಪುನರುತ್ಥಾನ
(ಮಾರ್ಕ16:1-10; ಲೂಕ24:1-10; ಯೊವಾನ್ನ20:1-13)

1 ಸಬ್ಬತ್‌ ದಿನ ಕಳೆದ ಮೇಲೆ ವಾರದ ಮೊದಲನೆಯ ದಿನ ಉದಯವಾಗುತ್ತಿದ್ದಂತೆಯೇ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು. 2 ಆಗ ಅಲ್ಲಿ ಮಹಾಭೂಕಂಪ ಸಂಭವಿಸಿತು; ಆಗ ದೇವದೂತನು ಆಕಾಶದಿಂದ ಇಳಿದು ಬಂದು ಸಮಾಧಿಯ ಬಾಗಿಲನ್ನು ಮುಚ್ಚಿದ್ದ ಕಲ್ಲನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು. 3 ಆತನ ಮುಖವು ಮಿಂಚಿನಂತೆಯೂ, ಉಡುಪು ಹಿಮದಂತೆಯೂ ಬಿಳುಪಾಗಿತ್ತು. 4 ಅಲ್ಲಿದ್ದ ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಜೀವಶವವಾದರು. 5 ಅಲ್ಲಿಗೆ ಬಂದ ಸ್ತ್ರೀಯರಿಗೆ ಆ ದೂತನು, "ಅಂಜಬೇಡಿರಿ; ಶಿಲುಬೆಗೆ ಹಾಕಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು. 6 ಅವರು ಇಲ್ಲಿಲ್ಲ; ಅವರು ತಾವು ಹೇಳಿದ ಪ್ರಕಾರವೇ ಪುನರುತ್ಥಾನ ಹೊಂದಿದ್ದಾರೆ; 'ಪ್ರಭುವು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ. 7 ಅವರು ಸತ್ತವರೊಳಗಿಂದ ಎದ್ದಿದ್ದಾರೆ,' ಎಂದು ಬೇಗನೆ ಹೋಗಿ ಅವರ ಶಿಷ್ಯರಿಗೆ ಹೇಳಿರಿ; ಮತ್ತು ನಿಮಗಿಂತ ಮುಂಚಿತವಾಗಿ ಅವರು ಗಲಿಲೇಯಕ್ಕೆ ಹೋಗುತ್ತಾರೆ. ನೀವು ಅವರನ್ನು ಅಲ್ಲಿ ಕಾಣುವಿರಿ," ಎಂದನು. 8 ಅವರು ಭಯದಿಂದಲೂ, ಸಂತೋಷದಿಂದಲೂ ಕೂಡಿ ಯೇಸುವಿನ ಶಿಷ್ಯರಿಗೆ ತಿಳಿಸುವುದಕ್ಕಾಗಿ ಸಮಾಧಿಯಿಂದ ಬೇಗನೆ ಓಡಿದರು. 9 ಅವರು ಶಿಷ್ಯರ ಬಳಿಗೆ ಹೋಗುತ್ತಿದ್ದಂತೆಯೇ ಯೇಸು ಅವರನ್ನು ಸಂಧಿಸಿ, "ಶುಭವಾಗಲಿ" ಎಂದರು. ಆಗ ಅವರು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸಿದರು. 10 ಯೇಸು ಅವರಿಗೆ, "ಭಯ ಪಡಬೇಡಿರಿ; ನನ್ನ ಸಹೋದರರನ್ನು ಗಲಿಲೇಯಕ್ಕೆ ಹೋಗಿ ಸೇರಬೇಕೆಂದೂ, ಅಲ್ಲಿ ನಾನವರನ್ನು ಕಾಣುವೆನೆಂದು ಅವರಿಗೆ ಹೋಗಿ ತಿಳಿಸಿರಿ," ಎಂದರು. 11 ಅವರು ಹೋಗುತ್ತಿರುವಾಗ ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಓಡಿಹೋಗಿ ಪ್ರಧಾನ ಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು. 12 ಅವರು ಹಿರಿಯರೊಂದಿಗೆ ಸೇರಿ ಸಮಾಲೋಚನೆ ಮಾಡಿ, ಆ ಸೈನಿಕರಿಗೆ ಅಧಿಕ ಹಣವನ್ನು ಕೊಟ್ಟು, 13 "ನಾವು ರಾತ್ರಿಯಲ್ಲಿ ನಿದ್ದೆ ಮಾಡುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋದರು, ಎಂದು ಹೇಳಿರಿ. 14 ಈ ವಿಷಯ ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವಾತನನ್ನು ಸಮಾಧಾನಪಡಿಸಿ ನಿಮ್ಮನ್ನು ಉಳಿಸುವಂತೆ ಅವರನ್ನು ಒಪ್ಪಿಸುವೆವು," ಎಂದರು. 15 ಹೀಗೆ ಅವರು ಹಣವನ್ನು ತೆಗೆದುಕೊಂಡು ತಮಗೆ ತಿಳಿಸಿದಂತೆ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿದೆ.

ಯೇಸುವಿನ ಕೊನೆಯ ಮಾತುಗಳು

16 ಯೇಸು ತಿಳಿಸಿದಂತೆಯೇ ಹನ್ನೊಂದು ಮಂದಿ ಶಿಷ್ಯರು ಗಲಿಲೇಯದಲ್ಲಿರುವ ಬೆಟ್ಟಕ್ಕೆ ಹೋದರು. 17 ಅಲ್ಲಿ ಅವರು ಯೇಸುವನ್ನು ಕಂಡು ಅವರನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು. 18 ಯೇಸುವು ಅವರೊಂದಿಗೆ ಮಾತನಾಡಿ, "ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವನ್ನೂ ನನಗೆ ಕೊಡಲಾಗಿದೆ; 19 ಆದುದರಿಂದ ನೀವು ಹೋಗಿ ಸರ್ವ ಜನಾಂಗಗಳಿಗೂ ಬೋಧಿಸಿ, ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ನೀಡಿರಿ; 20 ಅಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಗೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಲೋಕಾಂತ್ಯದವರೆಗೂ ನಾನು ಸದಾ ನಿಮ್ಮೊಡನೆ ಇರುತ್ತೇನೆ," ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ