ಅಧ್ಯಾಯ 2

ಮತ್ತಾಯನು ಬರೆದ ಸುಸಂದೇಶಗಳು


ಜೋಯಿಸರ ನಮನ

1 ಹೆರೋದ ಅರಸನು ರಾಜ್ಯವಾಳುತ್ತಿದ್ದ ದಿನಗಳಲ್ಲಿ ಜುದೇಯ ಸೀಮೆಯ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ, ಮೂಡಲದಿಂದ ಜ್ಞಾನಿಗಳು ಜೆರೂಸಲೇಮಿಗೆ ಬಂದು, 2 "ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ", ಎಂದರು. 3 ಅರಸನಾದ ಹೆರೋದನು ಇವರ ಮಾತುಗಳನ್ನು ಕೇಳಿ ಜೆರೂಸಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು. 4 ಅವನು ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು. 5 ಅದಕ್ಕೆ ಅವರು, "ಜುದೇಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ, 6 'ಜುದೇಯದ ಸೀಮೆಯಲ್ಲಿನ ಬೆತ್ಲೆಹೇಮೆ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಏಕೆಂದರೆ ನನ್ನ ಜನರಾದ ಇಸ್ರೇಲರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು', ಎಂಬುದಾಗಿ ಪ್ರವಾದಿಯೊಬ್ಬರು ಬರೆದಿದ್ದಾನೆ" ಎಂದು ಹೇಳಿದರು.

7 ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರಲ್ಲಿ ಸ್ಪಷ್ಟವಾಗಿ ವಿಚಾರಿಸಿದನು. 8 ಅನಂತರ ಅವರನ್ನು ಬೆತ್ಲೆಹೆಮಿಗೆ ಕಳುಹಿಸುವಾಗ; "ನೀವು ಹೋಗಿ ಆ ಶಿಶುವಿನ ಕುರಿತು ಚೆನ್ನಾಗಿ ಹುಡುಕಿರಿ. ಆತನನ್ನು ಕಂಡ ಕೂಡಲೇ ತಿರುಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು", ಅಂದನು.

9 ಅವರು ಅರಸನಿಂದ ಬೀಳ್ಕೊಂಡು ಹೊರಟಾಗ ಮೂಡಲದಲ್ಲಿ ಅವರು ಈ ಮೊದಲು ನೋಡಿದ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಚಲಿಸುತ್ತಾ ಅವರ ಮುಂದೆ ಹೋಯಿತು. 10 ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದಭರಿತರಾದರು. 11 ಅವರು ಆ ಶಿಶುವಿದ್ದ ಸ್ಥಳಕ್ಕೆ ಬಂದಾಗ, ಆ ಶಿಶುವು ತನ್ನ ತಾಯಿಯಾದ ಮರಿಯಳೊಂದಿಗೆ ಇರುವುದನ್ನು ಕಂಡುಕೊಂಡು ಸಾಷ್ಟಾಂಗವೆರಗಿ ಆರಾಧಿಸಿದರು; ತರುವಾಯ ತಾವು ತಂದಿದ್ದ ಚಿನ್ನ, ಧೂಪ, ರಕ್ತಬೋಳಗಳನ್ನು ಆ ಶಿಶುವಿಗೆ ಕಾಣಿಕೆಯಾಗಿ ಅರ್ಪಿಸಿದರು. 12 ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟ ಕಾರಣ ಅವರು ಬೇರೊಂದು ದಾರಿಯನ್ನು ಹಿಡಿದು ತಮ್ಮ ಸ್ವದೇಶಕ್ಕೆ ಹೊರಟುಹೋದರು. 

 ಯೇಸುವನ್ನು ಕೊಲ್ಲಲು ಹೆರೋದನ ಪ್ರಯತ್ನ

13 ಅವರು ಹೋದ ಬಳಿಕ ಕನಸಿನಲ್ಲಿ ಜೋಸೆಫನಿಗೆ ದೇವದೂತನು ಕಾಣಿಸಿಕೊಂಡು; "ಎದ್ದು ಈ ಶಿಶುವನ್ನೂ, ಅದರ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್‌ ದೇಶಕ್ಕೆ ಹೋಗು. ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು. ಏಕೆಂದರೆ ಹೆರೋದನು ಈ ಶಿಶುವನ್ನು ಕೊಲ್ಲಲು ಹವಣಿಸುತ್ತಿದ್ದಾನೆ", ಎಂದನು. 14 ಆಗ ಜೋಸೆಫನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟು ಹೋದನು. ಅನಂತರ ಹೆರೋದನು ಸಾಯುವವರೆಗೂ ಅವರು ಅಲ್ಲೇ ಇದ್ದರು. 15  ಈ ರೀತಿಯಲ್ಲಿ; 'ನಾನು ನನ್ನ ಮಗನನ್ನು ಈಜಿಪ್ಟ್‌ನಿಂದ ಕರೆದೆನು', ಎಂದು ದೇವರು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.

16 ಇತ್ತ ಜ್ಞಾನಿಗಳು ತನ್ನನ್ನು ವಂಚಿಸಿದರೆಂದು ತಿಳಿಯುತ್ತಲೇ ಹೆರೋದನು ರೋಷಾವೇಶಗೊಂಡನು. ತಾನು ಜ್ಞಾನಿಗಳಿಂದ ತಿಳಿದುಕೊಂಡ ಕಾಲಕ್ಕನುಸಾರವಾಗಿ ಬೆತ್ಲೆಹೆಮ್‌ ಮತ್ತು ಅದರ ಆಸುಪಾಸಿನ ಎಲ್ಲಾ ಪ್ರಾಂತ್ಯಗಳಲ್ಲಿಯೂ ಇರುವ ಎರಡು ವರುಷಕ್ಕಿಂತ ಕೆಳಗಿನ ಎಲ್ಲಾ ಗಂಡುಮಕ್ಕಳನ್ನೂ ಕೊಲ್ಲಿಸಿದನು. 17 ಹೀಗೆ 'ರಮದಲ್ಲಿ ಪ್ರಲಾಪವೂ, ಅಳುವಿಕೆಯೂ ಶೋಕದ ಧ್ವನಿಯೂ ಕೇಳಿಸಿತು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರಿಲ್ಲದಿದುದಕ್ಕೆ ಯಾರ ಉಪಶಮನಕ್ಕೂ ಒಲ್ಲೆನೆನ್ನುತ್ತಿದ್ದಳು', ಎಂದು 18 ಯೆರೆಮೀಯ ಪ್ರವಾದಿಯು ಹೇಳಿದ ಮಾತುಗಳು ಸತ್ಯವಾದವು.

19 ಹೆರೋದನು ಸತ್ತ ಮೇಲೆ ಈಜಿಪ್ಟ್‌ನಲ್ಲಿ ಕರ್ತನ ದೂತನು ಜೋಸೆಫನ ಕನಸಿನಲ್ಲಿ ಕಾಣಿಸಿಕೊಂಡು, 20 "ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋಗು; ಶಿಶುವಿನ ಪ್ರಾಣ ತೆಗೆಯಬೇಕೆಂದಿದ್ದವರು ಸತ್ತುಹೋದರು", ಎಂದನು. 21 ಜೋಸೆಫನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್‌ ದೇಶಕ್ಕೆ ಹಿಂದಿರುಗಿದನಾದರೂ. 22 ಹೆರೋದನ ಮಗ ಅರ್ಖೆಲಾಯನು  ಜುದೇಯವನ್ನು ಆಳುತ್ತಿದ್ದಾನೆಂದು ತಿಳಿದು ಅಲ್ಲಿಗೆ ಹೋಗಲು ಭಯಪಟ್ಟನು; ಆದರೆ ಕನಸಿನಲ್ಲಿ ದೇವರ ಆಜ್ಞೆಯನ್ನು ಕೇಳಿ ಗಲಿಲೇಯ ಪ್ರಾಂತ್ಯಕ್ಕೆ ತೆರಳಿದನು. 23 ಅಲ್ಲಿಯ ನಜರೇತೆಂಬ ಊರಿಗೆ ಬಂದು ಅಲ್ಲಿಯೇ ನೆಲೆಸಿದನು. ಹೀಗೆ, 'ಆತನು ನಜರೇತಿನವನೆಂದು ಕರೆಯಲ್ಪಡುವನು', ಎಂಬುದಾಗಿ ಪ್ರವಾದಿಗಳು ನುಡಿದ ಮಾತುಗಳು ನೆರವೇರುವಂತಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ