ಅಧ್ಯಾಯ 7

ಮತ್ತಾಯನು ಬರೆದ ಸುಸಂದೇಶಗಳು


1 ನೀವು ಇತರರ ಬಗ್ಗೆ ತೀರ್ಪನ್ನು ನೀಡಬೇಡಿರಿ; ಹಾಗೆಯೇ ದೇವರು ನಿಮಗೂ ತೀರ್ಪನ್ನು ನೀಡುವುದಿಲ್ಲ. 2 ನೀವು ನೀಡುವ ತೀರ್ಪಿನಂತೆಯೇ ನಿಮಗೂ ತೀರ್ಪನ್ನು ನೀಡಲಾಗುವುದು. ನೀವು ಮಾಡುವ ಅಳತೆಯ ಹಾಗೆಯೇ ನಿಮಗೂ ಅಳತೆ ಮಾಡಲಾಗುವುದು. 3 ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೇ ನಿನ್ನ ಸಹೋದರನ ಕಣ್ಣಿನಲ್ಲಿರುವ ಧೂಳನ್ನು ಏಕೆ ಗಮನಿಸುವೆ? 4 ನಿನ್ನ ಕಣ್ಣಿನಲ್ಲೇ ತೊಲೆಯಿರುವಾಗ ನಿನ್ನ ಸಹೋದರನ ಕಣ್ಣಿನಿಂದ ಧೂಳನ್ನು ಹೇಗೆ ತೆಗೆಯುವೆ? 5 ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದು ಹಾಕು; ಆಗ ನಿನ್ನ ಸಹೋದರನ ಕಣ್ಣಿನೊಳಗಿನ ಧೂಳನ್ನು ತೆಗೆದು ಹಾಕುವುದು ಸುಲಭವಾಗುತ್ತದೆ.

6 ನಾಯಿಗಳಿಗೆ ಪವಿತ್ರವಾದುದನ್ನು ಹಾಕಬೇಡಿರಿ; ಅವು  ನಿಮ್ಮನ್ನು ಹರಿದು ಬಿಡುತ್ತವೆ. ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ. ಅವುಗಳನ್ನು ಹಂದಿಗಳು ತುಳಿದು ಹಾಕುತ್ತವೆ.

7 ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ತೆರೆಯಲ್ಪಡುವುದು. 8 ಬೇಡಿಕೊಳ್ಳುವ ಪ್ರತಿಯೊಬ್ಬನು ಅದನ್ನು ಪಡೆದುಕೊಳ್ಳುವನು; ಹುಡುಕುವವನಿಗೆ ಸಿಕ್ಕುವದು; ತಟ್ಟುವವನಿಗೆ ಬಾಗಿಲು ತೆರೆಯಲ್ಪಡುವುದು. 9 ತನ್ನ ಮಗನು ರೊಟ್ಟಿಯನ್ನು ಕೇಳಿದರೆ ನಿಮ್ಮಲ್ಲಿ ಯಾರಾದರೂ ಅವನಿಗೆ ಕಲ್ಲನ್ನು ಕೊಡುವರೇ? 10 ಅವನು ಮೀನನ್ನು ಕೇಳಿದರೆ ತಂದೆಯು ಅವನಿಗೆ ಹಾವನ್ನು ಕೊಡುವನೇ? 11 ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯದನ್ನು ಮಾಡುವಾಗ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನಲ್ಲಿ ಬೇಡಿಕೊಳ್ಳುವವರಿಗೆ ಅದಕ್ಕಿಂತ ಹೆಚ್ಚು ಒಳ್ಳೆಯವುಗಳನ್ನು ಮಾಡಲಾರರೇ? 12 ಆದುದರಿಂದ ಜನರು ನಿಮಗೆ ಏನನ್ನು ಮಾಡಬೇಕೆಂದು ನೀವು ಇಚ್ಛೈಸುವಿರೋ ಅವುಗಳನ್ನು ನೀವು ಸಹ ಅವರಿಗೆ ಮಾಡಿರಿ; ಇದು ಧರ್ಮಶಾಸ್ತ್ರದದ ಮತ್ತು ಪ್ರವಾದನೆಗಳ ತಾತ್ಪರ್ಯ.

13 ಇಕ್ಕಟ್ಟಾದ ದ್ವಾರದೊಳಗೆ ನೀವು ಪ್ರವೇಶಿಸಿರಿ; ಏಕೆಂದರೆ ವಿನಾಶಕ್ಕೆ ಸಾಗುವ ದ್ವಾರವು ವಿಶಾಲವೂ, ಹಿರಿದೂ ಆಗಿರುತ್ತದೆ. ಅದರೊಳಕ್ಕೆ ಪ್ರವೇಶಿಸುವವರು ಹೆಚ್ಚು ಜನ. 14 ನಿತ್ಯ ಜೀವನದತ್ತ ಸಾಗುವ ದ್ವಾರವು ಇಕ್ಕಟ್ಟಾಗಿರುತ್ತದೆ. ಅದರೊಳಕ್ಕೆ ಪ್ರವೇಶಿಸುವುದೂ ಕಷ್ಟಕರವಾಗಿದೆ; ಆದುದರಿಂದ ಅದನ್ನು ಕಂಡುಕೊಳ್ಳುವವರು ಕೆಲವೇ ಜನ.

15 ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ; ಅವರು ಒಳಗೆ ಕಿತ್ತು ತಿನ್ನುವ ತೋಳಗಳು. 16 ಅವರ ನಡವಳಿಕೆಗಳಿಂದಲೇ ನೀವು ಅವರನ್ನು ಅರಿತುಕೊಳ್ಳುವಿರಿ. ಮುಳ್ಳುಗಳಿಂದ ದ್ರಾಕ್ಷಿಯನ್ನೂ, ಮದ್ದುಗುಣಿಕೇ ಗಿಡಗಳಿಂದ ಅಂಜೂರಗಳನ್ನೂ ಕೀಳುವರೇ? 17 ಪ್ರತಿ ಒಳ್ಳೆಯ ಮರವು ಒಳ್ಳೆಯ ಫಲಗಳನ್ನು ಕೊಡುತ್ತದೆ; ಮತ್ತು ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ; 18 ಒಳ್ಳೆ ಮರವು ಎಂದೂ ಕೆಟ್ಟ ಫಲವನ್ನು ನೀಡಲಾರದು; ಹಾಗೆಯೇ ಕೆಟ್ಟ ಮರವು ಒಳ್ಳೇ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು. 20 ಆದುದರಿಂದ ಕಪಟಿಗಳ ನಡವಳಿಕೆಗಳಿಂದಲೇ ನೀವು ಅವರನ್ನು ಅರಿಯುವಿರಿ. 21 ನನ್ನನ್ನು 'ಸ್ವಾಮೀ ಸ್ವಾಮೀ' ಎನ್ನುವ ಪ್ರತಿಯೊಬ್ಬನು ಪರಲೋಕರಾಜ್ಯದಲ್ಲಿ ಪ್ರವೇಶಿಸಲಾರರು; ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಅದರಲ್ಲಿ ಪ್ರವೇಶಿಸುವನು. 22 'ಸ್ವಾಮೀ, ಸ್ವಾಮೀ ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆಯನ್ನು ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ನಾವು ಬಿಡಿಸಲಿಲ್ಲವೇ? ಅಲ್ಲದೆ ಅನೇಕ ಮಹತ್ಕಾರ್ಯಗಳನ್ನು ನಿಮ್ಮ ಹೆಸರಿನಲ್ಲಿ ನಾವು ಮಾಡಲಿಲ್ಲವೇ' ಎಂದು ಬಹಳ ಜನರು ಹೇಳುವರು. 23 ಆಗ ನಾನವರಿಗೆ, 'ನಾನು ನಿಮ್ಮನ್ನು ಎಂದಿಗೂ ಅರಿಯೆ; ದುರುಳರೇ ನೀವು ನನ್ನಿಂದ ತೊಲಗಿರಿ ಎಂದು ಹೇಳುವೆನು.

24 ಆದುದರಿಂದ ನಾನು ಹೇಳುವ ಈ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುವ ಬುದ್ಧಿವಂತನಿಗೆ ಹೋಲಿಸಬಹುದು. 25 ಮಳೆಯು ಸುರಿದು, ಪ್ರವಾಹಗಳು ಬಂದು, ಗಾಳಿಯು ಬೀಸಿ ಆ ಮನೆಗೆ ಬಡಿದರೂ ಅದು ಬೀಳಲಿಲ್ಲ; ಏಕೆಂದರೆ ಅದರ ಅಸ್ತಿವಾರವು ಬಂಡೆಯ ಮೇಲಿದೆ. 26 ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬರೂ ಅವುಗಳಂತೆ ನಡೆಯದೆ ಹೋದರೆ ಅವರು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಹೋಲಿಕೆಯಾಗುವನು. 27 ಮಳೆಯು ಸುರಿದು, ಪ್ರವಾಹ ಬಂದು, ಗಾಳಿಯು ಬೀಸಿ ಆ ಮನೆಗೆ ಬಡಿದಾಗ ಅದು ಕುಸಿದು ಬಿತ್ತು; ಮತ್ತು ಅದರ ಬೀಳುವಿಕೆಯು ಅಗಾಧವಾಗಿತ್ತು.

28 ಯೇಸುವು ಈ ಮಾತುಗಳನ್ನು ಹೇಳಿ ಮುಗಿಸಿದ ಬಳಿಕ ಜನರು ಅವರ ಬೋಧನೆಗೆ ಆಶ್ಚರ್ಯಪಟ್ಟರು. 29 ಏಕೆಂದರೆ ಯೇಸುವು ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರಯುತವಾಗಿ ಜನರಿಗೆ ಬೋಧಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ