ಅಧ್ಯಾಯ 13

ಮತ್ತಾಯನು ಬರೆದ ಸುಸಂದೇಶಗಳು


ಸ್ವರ್ಗಸಾಮ್ರಾಜ್ಯ ಕುರಿತ ಸಾಮತಿಗಳು
(ಮಾರ್ಕ4:1-20, 30-34; ಲೂಕ8:4-15; 13:18, 19)

1 ಆ ದಿನದಲ್ಲಿ ಯೇಸುವು ಉಳಿದುಕೊಂಡಿದ್ದ ಮನೆಯಿಂದ ಹೊರಬಂದು ಸಮುದ್ರ ತೀರದ ಬಳಿಗೆ ನಡೆದು ಅಲ್ಲಿ ಕುಳಿತು ಕೊಂಡರು. 2 ಆಗ ಜನರ ದೊಡ್ಡ ಸಮೂಹವೊಂದು ಅವರ ಬಳಿಗೆ ಬಂದಿದ್ದರಿಂದ ಅವರು ಅಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತುಕೊಂಡರು. ಆ ಸಮೂಹವು ದಡದ ಮೇಲೆ ನೆರೆಯಿತು. 3 ಯೇಸುವು ಆಗ ಅನೇಕ ವಿಷಯಗಳನ್ನು ಅವರಿಗೆ ಸಾಮತಿಗಳಲ್ಲಿ ಹೇಳಿದರು. ಹೇಗೆಂದರೆ, "ಬಿತ್ತುವವನು ಬಿತ್ತುವುದಕ್ಕೆ ಹೊರಟನು. 4 ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಆಗ ಪಕ್ಷಿಗಳು ಬಂದು ಅವುಗಳನ್ನು ತಿಂದು ಬಿಟ್ಟವು. 5 ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಗಳಿದ್ದ ಸ್ಥಳದಲ್ಲಿ ಬಿದ್ದವು; ಅಲ್ಲಿ ಆಳವಾದ ಮಣ್ಣು ಇಲ್ಲದಿದ್ದುದರಿಂದ ತಕ್ಷಣವೇ ಅವು ಮೊಳೆತವು; 6 ಆದರೆ ಸೂರ್ಯನ ಬಿಸಿಲ ಕಾವಿಗೆ ಅವು ಬಾಡಿಹೋದವು. 7 ಮತ್ತೆ ಕೆಲವು ಮುಳ್ಳುಕಂಟಿಗಳ ನಡುವೆ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. 8 ಒಳ್ಳೆಯ ಫಲವತ್ತಾದ ಭೂಮಿಯಲ್ಲಿ ಬಿದ್ದ ಕೆಲವು ಬೀಜಗಳು ಮೊಳೆತು ನೂರರಷ್ಟು, ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು. 9 ಕೇಳಲು ಕಿವಿಗಳಿರುವವನು ಕೇಳಲಿ" ಎಂದರು ಯೇಸು. 

10 ತರುವಾಯ ಶಿಷ್ಯರು ಬಂದು, "ನೀವು ಸಾಮತಿಗಳಲ್ಲಿ ಜನರೊಂದಿಗೆ ಯಾಕೆ ಮಾತನಾಡುವಿರಿ" ಎಂದು ಕೇಳಲು ಯೇಸುವು 11 ಪ್ರತ್ಯುತ್ತರವಾಗಿ, "ಪರಲೋಕರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ವರವು ನಿಮಗೆ ಕೊಡಲಾಗಿದೆ; ಆದರೆ ಅವರಿಗೆ ಆ ವರವನ್ನು ಕೊಡಲ್ಪಟ್ಟಿಲ್ಲ. 12 ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಮತ್ತು ಅವನಿಗೆ ಮತ್ತೂ ಹೆಚ್ಚಾಗುವುದು; ಆದರೆ ಇಲ್ಲದವನ ಕಡೆಯಿಂದ ಇದ್ದುದ್ದನ್ನೂ ಕಿತ್ತುಕೊಳ್ಳಲಾಗುವುದು. 13 ನಾನು ಅವರಿಗೆ ಸಾಮತಿಗಳಲ್ಲಿ ಮಾತನಾಡುತ್ತೇನೆ ಏಕೆಂದರೆ; ಅವರು ಕಣ್ಣಿದ್ದರೂ ನೋಡುವುದಿಲ್ಲ; ಕೇಳಿದರೂ ತಿಳಿದುಕೊಳ್ಳುವುದಿಲ್ಲ; ಮತ್ತು ತಿಳಿದುಕೊಳ್ಳುವುದೂ ಇಲ್ಲ.

14 ಯೆಶಾಯನು ಹೇಳಿದ ಪ್ರವಾದನೆಯೂ ಇದರೊಂದಿಗೆ ನೆರವೇರುತ್ತದೆ; ಅದೇನೆಂದರೆ, 

'ಕಿವಿಯಿದ್ದು ಕೇಳಿದರೂ ನೀವು ತಿಳಿದುಕೊಳ್ಳುವುದಿಲ್ಲ; 
ನೋಡಿದರೂ ಅರ್ಥಮಾಡಿಕೊಳ್ಳುವುದಿಲ್ಲ. 
15 ಇವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿ 
ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದ ಹಾಗೆಯೂ, 
ಇವರನ್ನು ಗುಣಪಡಿಸಲಾಗದಂತೆಯೂ 
ಈ ಜನರು ತಮ್ಮ ಹೃದಯಗಳನ್ನು ಕಲ್ಲಾಗಿಸಿಕೊಂಡಿದ್ದಾರೆ'

16 ಆದರೆ ನಿಮ್ಮ ಕಣ್ಣುಗಳು ಕಾಣುವುದರಿಂದಲೂ, ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಧನ್ಯರು. 17 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ನೋಡುವಂತಹವುಗಳನ್ನು ಮತ್ತು ಕೇಳುವಂತಹವುಗಳನ್ನು ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೋಡಲೂ ಕೇಳಲೂ ಅಪೇಕ್ಷಿಸಿದರಾದರೂ ಅದವರಿಂದ ಸಾಧ್ಯವಾಗಲಿಲ್ಲ. 

18 ಬಿತ್ತುವವನ ಸಾಮತಿಯ ವಿಷಯದ ಅರ್ಥವನ್ನು ಗಮನಿಸಿರಿ; 19 ಸ್ವರ್ಗ ಸಾಮ್ರಾಜ್ಯದ ವಾಕ್ಯವನ್ನು ಯಾರು ಕೇಳಿ ಗ್ರಹಿಸದೆ ಇರುತ್ತಾರೋ ಅವನ ಹೃದಯದಲ್ಲಿ ಬಿತ್ತಿದ್ದನ್ನು ಸೈತಾನನು ಬಂದು ತೆಗೆದು ಬಿಡುವನು; ದಾರಿಯ ಮಗ್ಗುಲಲ್ಲಿ ಬಿದ್ದ ಬೀಜವು ಇವನೇ. 20 ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸಿದರೂ ಅವನ ಮನಸ್ಸು ದೃಢವಾಗಿಲ್ಲದ ಕಾರಣ ಆ ವಾಕ್ಯಗಳು ಅವನ ಮನಸ್ಸಿನಿಂದ ಮರೆಯಾಗುವುದು. 21 ಬೀಜ ಬಿದ್ದ ಬಂಡೆಗಳ ನೆಲವನ್ನು ಇವನಿಗೆ ಹೋಲಿಸಬಹುದು. ಸಂಕಟವಾಗಲಿ, ಹಿಂಸೆಯಾಗಲಿ ಎದುರಾದರೆ ಇವನ ಮನಸ್ಸಿನಲ್ಲಿದ್ದ ದೈವವಾಕ್ಯಗಳು ಮರೆತುಹೋಗುತ್ತವೆ. 22 ಇನ್ನು ವಾಕ್ಯವನ್ನು ಕೇಳಿದ ಮೇಲೂ ಐಹಿಕ ಮೋಹವೂ, ಐಶ್ವರ್ಯದ ಮೋಹವೂ ಆ ವಾಕ್ಯವನ್ನು ಅಡಗಿಸಿಬಿಡುವುದು. ಮುಳ್ಳುಕಂಟಿಗಳ ನಡುವೆ ಬೀಜ ಬಿದ್ದ ನೆಲದವನು ಇವನೇ. 23 ಇನ್ನೊಬ್ಬನು ವಾಕ್ಯವನ್ನು ಕೇಳಿ ಅದನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಅದರ ಫಲವಾಗಿ ಅವನು ನೂರರಷ್ಟು, ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ. ಇವನು ಬೀಜ ಬಿದ್ದ ಹದವಾದ ಭೂಮಿಗೆ ಹೋಲುತ್ತಾನೆ" ಎಂದರು.
24 ಯೇಸುವು ಮತ್ತೊಂದು ಸಾಮತಿಯನ್ನು ಅಲ್ಲಿದ್ದ ಜನಸಮೂಹಕ್ಕೆ ಹೇಳುತ್ತಾರೆ, ಅದೇನೆಂದರೆ, "ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿತ್ತದೆ. 25 ಹೇಗೆಂದರೆ, ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೊರಟು ಹೋಗುತ್ತಾನೆ. 26 ಗೋದಿಯು ಮೊಳೆತು ಫಲಕೊಟ್ಟಾಗ ಕಳೆಯೂ ಸಹ ಕಾಣಿಸಿಕೊಂಡಿತು. 27 ಆಗ ಸೇವಕರು ಯಜಮಾನನ ಬಳಿಗೆ ಬಂದು, 'ಸ್ವಾಮಿ, ನೀವು ಹೊಲದಲ್ಲಿ ಒಳ್ಳೆಯ ಬೀಜವನ್ನೇ ಬಿತ್ತಿದ್ದೀರಲ್ಲಾ? ಆದರೂ ಈ ಕಳೆಯು ಎಲ್ಲಿಂದ ಬಂತು?' ಎಂದು ಕೇಳಿದರು. 

28 ಯಜಮಾನನು ಅವರಿಗೆ, 'ವೈರಿಯೊಬ್ಬನು ಇದನ್ನು ಮಾಡಿದ್ದಾನೆ' ಎಂದನು. ಆದರೆ ಸೇವಕರು ಆತನಿಗೆ, 'ನಾವು ಹೋಗಿ ಅವುಗಳನ್ನು ಕಿತ್ತು ಹಾಕೋಣವೇ?' ಎಂದು ಕೇಳಿದರು. 29 ಅದಕ್ಕೆ ಯಜಮಾನನು, 'ಬೇಡ, ನೀವು ಕಳೆಯನ್ನು ಕೀಳುವಾಗ ಅವುಗಳ ಜೊತೆಯಲ್ಲಿ ಗೋದಿಯನ್ನೂ ಕಿತ್ತು ಬಿಟ್ಟೀರಿ. 30 ಸುಗ್ಗೀಕಾಲದವರೆಗೆ ಅವು ಬೆಳೆಯಲಿ; ಸುಗ್ಗೀಕಾಲದಲ್ಲಿ, ಮೊದಲು ಕಳೆಯನ್ನು ಕಿತ್ತು ಅವುಗಳನ್ನು ಸುಡಲು ಕಟ್ಟಿಡಿ; ಆನಂತರ ಗೋದಿಯನ್ನು ನನ್ನ ಕಣಜದಲ್ಲಿ ತುಂಬಿರಿ ಎಂದು ಕೊಯ್ಲುಗಾರರಿಗೆ ಹೇಳುವನು' ಎಂದರು. 
31 ಯೇಸುವು ಮತ್ತೊಂದು ಸಾಮತಿಯನ್ನು ಅವರಿಗೆ ಹೇಳಿದರು, ಅದೆಂದರೆ, 'ಸ್ವರ್ಗಸಾಮ್ರಾಜ್ಯವು ಒಂದು ಸಾಸಿವೆ ಕಾಳಿಗೆ ಹೋಲುತ್ತದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು. 32 ಆ ಬೀಜವು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದೇ; ಆದರೆ ಅದು ಬೆಳೆದಾಗ ಇತರ ಎಲ್ಲಾ ಸಸಿಗಳಿಗಿಂತಲೂ ಎತ್ತರವಾಗಿ ಮರವಾಗುತ್ತದೆ. ಹೀಗೆ ಮರವಾದ ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಬಂದು ವಾಸಮಾಡುತ್ತವೆ' 

33 ಯೇಸುವು ಇನ್ನೂ ಒಂದು ಸಾಮತಿಯನ್ನು ಅವರಿಗೆ ಹೇಳಿದರು. ಅದು, 'ಸ್ವರ್ಗಸಾಮ್ರಾಜ್ಯವು ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಒಬ್ಬ ಸ್ತ್ರೀಯು ಹುಳಿಯನ್ನು ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲೆಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು'  

34 ಇವೆಲ್ಲವುಗಳನ್ನು ಯೇಸುವು ಜನಸಮೂಹಕ್ಕೆ ಸಾಮತಿಯ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೇಆ ಜನರಿಗೇನನ್ನೂ ಬೋಧಿಸಲಿಲ್ಲ. 35 ಹೀಗೆ, 'ಸಾಮತಿಗಳಲ್ಲಿ ಬೋಧಿಸುವೆನು; ಲೋಕದ ಆದಿಯಿಂದ ರಹಸ್ಯವಾಗಿ ಇಡಲ್ಪಟ್ಟವುಗಳನ್ನು ಬಯಲುಗೊಳಿಸುವೆನು' ಎಂದು ಪ್ರವಾದಿಯಿಂದ ಹೇಳಲ್ಪಟ್ಟಿದ್ದು ನೆರವೇರಿತು. 

36 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿ ಮನೆಯೊಳಕ್ಕೆ ಹೋದರು; ಆಗ ಶಿಷ್ಯರು ಅವರ ಬಳಿಗೆ ಬಂದು, "ಹೊಲದ ಕಳೆಯ ಸಾಮತಿಯನ್ನು ನಮಗೆ ವಿವರಿಸಿರಿ" ಎಂದರು. 37 ಪ್ರತ್ಯುತ್ತರವಾಗಿ ಅವರು, "ಒಳ್ಳೇ ಬೀಜ ಬಿತ್ತುವವನು ನರಪುತ್ರನು; 38 ಹೊಲವು ಈ ಲೋಕ; ಒಳ್ಳೆಯ ಬೀಜವು ಸ್ವರ್ಗಸಾಮ್ರಾಜ್ಯದ ಮಕ್ಕಳು; ಆದರೆ ಕಳೆಯು ಸೈತಾನನ ಮಕ್ಕಳಾಗಿದ್ದಾರೆ. 

39 ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವೆಂದರೆ ಲೋಕಾಂತ್ಯ; ಕೊಯ್ಲುಗಾರರು ದೇವದೂತರು. 40 ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು. 41 ನರಪುತ್ರನು ತನ್ನ ದೂತರನ್ನು ಕಳುಹಿಸುವನು; ಅವರು ಪಾಪಕ್ಕೆ ಕಾರಣವಾದವುಗಳನ್ನೂ, ದುಷ್ಕರ್ಮಿಗಳನ್ನೂ ಒಟ್ಟುಗೂಡಿಸಿ ಅವರನ್ನು ಬೆಂಕಿಯಲ್ಲಿ ಹಾಕುವರು; 42 ಅಲ್ಲಿ ಗೋಳಾಟವೂ, ಹಲ್ಲು ಕಡಿಯುವಿಕೆಯೂ ಇರುವುವು. 43 ನೀತಿವಂತರು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ. 

44 ಸ್ವರ್ಗಸಾಮ್ರಾಜ್ಯವು ಹೊಲದಲ್ಲಿ ಬಚ್ಚಿಟ್ಟ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಪತ್ತೆ ಹಚ್ಚಿದ ಒಬ್ಬಾತನು ಆ ಸಂತೋಷದಲ್ಲಿ ಹೋಗಿ ತನ್ನ ಸರ್ವಸ್ವವನ್ನೂ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ. 

45 ಸ್ವರ್ಗಸಾಮ್ರಾಜ್ಯವು ಒಳ್ಳೆಯ ಮುತ್ತುಗಳನ್ನು ಹುಡುಕುವ ವ್ಯಾಪಾರಿಗೆ ಹೋಲಿಸಬಹುದಾಗಿದೆ. 46 ಬೆಲೆಬಾಳುವ ಮುತ್ತನ್ನು ಕಂಡಕೂಡಲೇ ಅವನು ತನಗಿದ್ದುದನ್ನೆಲ್ಲಾ ಮಾರಿ ಮುತ್ತನ್ನು ಕೊಂಡುಕೊಳ್ಳುತ್ತಾನೆ. 

47 ಸ್ವರ್ಗಸಾಮ್ರಾಜ್ಯವನ್ನು ಮೀನು ಹಿಡಿಯುವ ಒಂದು ಬಲೆಗೆ ಹೋಲಿಸಬಹುದಾಗಿದೆ. ಬೆಸ್ತರು ಆ ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ತರಹದ ಮೀನುಗಳನ್ನು ಹಿಡಿಯುತ್ತಾರೆ. 48 ಅದು ತುಂಬಿದಾಗ ಅವರದನ್ನು ದಡಕ್ಕೆ ಎಳೆದು ತಂದು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಬಿಸಾಡುವರು. 49 ಹಾಗೆಯೇ ಲೋಕಾಂತ್ಯದಲ್ಲಿಯೂ ಆಗುವುದು. ದೂತರು ಬಂದು ನೀತಿವಂತರಾದವರ ನಡುವಿನಿಂದ ದುರ್ಜನರನ್ನು ಪ್ರತ್ಯೇಕಿಸುವರು. 50 ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಗೋಳಾಟವೂ, ಹಲ್ಲುಕಡಿಯುವಿಕೆಯೂ ಇರುವುವು" ಎಂದು ಯೇಸು ಹೇಳಿದರು. 

51 ಬಳಿಕ ಯೇಸುವು ಅವರಿಗೆ, "ಇವುಗಳೆಲ್ಲವೂ ನಿಮಗೆ ಅರ್ಥವಾಯಿತೇ?" ಎಂದು ಕೇಳಿದ್ದಕ್ಕೆ ಅವರು, "ಅರ್ಥವಾಯಿತು" ಎಂದರು. 52 ಅವರು ಶಿಷ್ಯರಿಗೆ, "ಸ್ವರ್ಗಸಾಮ್ರಾಜ್ಯದ ವಿಷಯವಾಗಿ ಶಿಕ್ಷಣ ಹೊಂದಿದ ಪ್ರತಿಯೊಬ್ಬ
ಶಾಸ್ತ್ರೋಪದೇಶಕನು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ" ಎಂದರು. 53 ಈ ಸಾಮತಿಗಳನ್ನು ಹೇಳಿ ಮುಗಿಸಿದ ಬಳಿಕ ಯೇಸು ಅಲ್ಲಿಂದ ಹೊರಟುಹೋದರು.

ಸ್ವಂತ ಊರಿನವರ ತಾತ್ಸಾರ
(ಮಾರ್ಕ6:1-6; ಲೂಕ4:15-30)

54 ಅವರು ತಮ್ಮ ಸ್ವಂತ ಊರಿಗೆ ಬಂದು ಅಲ್ಲಿಯ ಸಭಾಮಂದಿರದಲ್ಲಿ ಬೋಧಿಸಿದರು. ಅಲ್ಲಿಯ ಜನರು ಅವರ ಬೋಧನೆಯಿಂದ ವಿಸ್ಮಿತರಾಗಿ, "ಈ ಜ್ಞಾನವೂ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದವು? 55 ಈತನು ಬಡಗಿಯ ಮಗನಲ್ಲವೇ? ಮರಿಯಳು ಈತನ ತಾಯಿಯಲ್ಲವೇ? ಯಾಕೋಬ, ಜೋಸೆಫ್, ಸೀಮೋನ, ಯೂದ ‌ಇವನ ಸಹೋದರರಲ್ಲವೇ? 56 ಈತನ ಸಹೋದರಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ ಈ ಜ್ಞಾನವು ಈ ಮನುಷ್ಯನಿಗೆ ಎಲ್ಲಿಂದ ಬಂತು?" ಎಂದು ಮಾತನಾಡಿಕೊಂಡು ಯೇಸುವನ್ನು ಅಸಡ್ಡೆ ಮಾಡಿದರು. 57 ಆದರೆ ಯೇಸು ಅವರಿಗೆ, "ಪ್ರವಾದಿಗಳಿಗೆ ಎಲ್ಲಿಯಾದರೂ ಸನ್ಮಾನ ದೊರಕುತ್ತದೆ, ಆದರೆ ತನ್ನ ಸ್ವಂತ ನಾಡಿನಲ್ಲಿ ಮತ್ತು ಸ್ವಂತ ಮನೆಯಲ್ಲಿ ಮಾತ್ರ ಇಲ್ಲ" ಎಂದರು. 58 ಯೇಸುವು ಆ ಜನರ ಅಪನಂಬಿಕೆಯ ಕಾರಣದಿಂದಾಗಿ ಅಲ್ಲಿ ಹೆಚ್ಚಿನ ಮಹತ್ಕಾರ್ಯಗಳನ್ನು ಮಾಡಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ