ಅಧ್ಯಾಯ 4

ಮತ್ತಾಯನು ಬರೆದ ಸುಸಂದೇಶಗಳು


ಸೈತಾನನ ಪ್ರಲೋಭನೆ
(ಮಾರ್ಕ1:12, ಲೂಕ4:1-13)

1  ಯೇಸು ಸೈತಾನನಿಂದ ಶೋಧಿಸಲ್ಪಡುವದಕ್ಕಾಗಿ ಪವಿತ್ರಾತ್ಮರಿಂದ ಪ್ರೇರಿತರಾಗಿ ಬಂಗಾಡಿಗೆ ನಡೆದರು. 2 ಅವರು ನಲ್ವತ್ತು ದಿನಗಳ ಕಾಲ ಹಗಲಿರುಳು ಉಪವಾಸವಿದ್ದರು. ತರುವಾಯ ಅವರಿಗೆ ವಿಪರೀತ ಹಸಿವಾಯಿತು. 3 ಆಗ ಆ ಸೈತಾನನು ಅವರ ಬಳಿ ಬಂದು, "ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಆದೇಶಿಸು", ಎಂದನು. 4 ಪ್ರತ್ಯುತ್ತರವಾಗಿ ಯೇಸುವು, "ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ದೇವರಿಂದ ಹೊರಡುವ ಪ್ರತಿ ಮಾತಿನಿಂದ ಜೀವಿಸುವನು ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ" ಅಂದರು. 5 ಬಳಿಕ ಸೈತಾನನು ಅವರನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡುಹೋಗಿ ಮಹಾದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಅವರಿಗೆ, 6 "ನೀನು ದೇವಕುಮಾರನೇ ಆಗಿದ್ದರೆ ಇಲ್ಲಿಂದ ಕೆಳಗೆ ದುಮುಕು; ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನ ಕಾಲುಗಳು ಕಲ್ಲಿಗೆ ಅಪ್ಪಳಿಸದಂತೆ ದೇವರು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು" ಎಂದನು. 7 ಯೇಸು ಅವನಿಗೆ, "ದೇವರಾದ ಸವೇಶ್ವರನನ್ನು ಪರೀಕ್ಷಿಸಬಾರದು ಎಂದು ಅದರಲ್ಲಿ ಬರೆದಿದೆ", ಎಂದರು.
  
8 ಮತ್ತೊಮ್ಮೆ ಸೈತಾನನು ಅವರನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿ, 9 "ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು", ಎಂದನು. 10 ಆಗ ಯೇಸುವು ಅವನಿಗೆ, "ಸೈತಾನನೇ, ತೊಲಗಿಲ್ಲಿಂದ. 'ನೀನು ನಿನ್ನ ದೇವರಾದ ಸರ್ವೇಶ್ವರನನ್ನು ಮಾತ್ರ ಆರಾಧಿಸಿ ಅವರೊಬ್ಬರ ಸೇವೆಯನ್ನೇ ಸಲ್ಲಿಸಬೇಕು' ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ ಎಂದರು. 11 ಆಗ ಸೈತಾನನು ಅವರನ್ನು ಬಿಟ್ಟು ತೊಲಗಿದನು. ದೇವದೂತರು ಬಂದು ಅವರನ್ನು ಉಪಚರಿಸಿದರು.

ಗಲಿಲೇಯದಲ್ಲಿ ಯೇಸುವಿನ ಸುವಾರ್ತೆ
(ಮಾರ್ಕ1:14, 15, ಲೂಕ4:14-15)

12 ಯೋವಾನ್ನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಕೇಳಿ ಯೇಸುವು ಗಲಿಲೇಯಕ್ಕೆ ಹೊರಟುಹೋದರು. 13 ಅವರು ನಜರೇತಿನಲ್ಲಿ ಉಳಿಯದೆ ಜೆಬುಲೋನ್‌, ನೆಫ್ತಲೀಮ್‌ ಪ್ರಾಂತ್ಯಗಳ ಸರಹದ್ದಾದ ಸಮುದ್ರತೀರದ ಬಳಿಯ ಕಪೆರ್ನೌಮಿಗೆ ಬಂದು ನೆಲೆಸಿದರು. 14 ಹೀಗೆ ಪ್ರವಾದಿಯಾದ ಯೆಶಾಯನ ವಚನವಾದ,15 "ಜೋರ್ಡನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್‌ ಮತ್ತು ನೆಫ್ತಲೀಮ್‌ ಪ್ರಾಂತ್ಯಗಳಲ್ಲಿಯೂ ಮತ್ತು ಅನ್ಯಜನರಿರುವ ಗಲಿಲೇಯದಲ್ಲಿಯೂ 16 ಕತ್ತಲೆಯಲ್ಲಿದ್ದ ಜನರು ಪ್ರಖರ ಬೆಳಕನ್ನು ಕಂಡರು; ಮತ್ತು ಮರಣದ ಛಾಯೆಯಲ್ಲಿದ್ದವರಿಗೆ ಅರುಣೋದಯವಾಯಿತು" ಎಂಬುದು ನೆರವೇರಿತು. 17 ಅಂದಿನಿಂದ ಯೇಸು, ಪಶ್ಚಾತಾಪ ಪಡಿರಿ; ಪರಲೋಕರಾಜ್ಯವು ಸಮಾಪಿಸಿತು" ಎಂದು ಜನರಿಗೆ ಸಾರಿ ಹೇಳಲು ಪ್ರಾರಂಭಿಸಿದರು.

18 ಆ ದಿನ ಯೇಸು ಗಲಿಲೇಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ ಮತ್ತವನ ಸಹೋದರ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುತ್ತಿರುವುದನ್ನು ಕಂಡರು; ಅವರು ಬೆಸ್ತರಾಗಿದ್ದರು. 19 ಆಗ ಯೇಸುವು ಅವರಿಗೆ, "ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು" ಎಂದರು. 20 ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 21 ಅಲ್ಲಿಂದ ಮುಂದೆ ಹೋದ ಯೇಸು ಜೆಬೆದಾಯನ ಮಗನಾದ ಯಕೋಬ ಮತ್ತವನ ಸಹೋದರ ಯೋವಾನ್ನ ಎಂಬ ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದುದನ್ನು ಕಂಡು ಅವರನ್ನು ಕರೆದನು. 22 ಅವರು ತಕ್ಷಣವೇ ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 23 ಬಳಿಕ ಯೇಸು ಗಲಿಲೇಯವನ್ನೆಲ್ಲಾ ಸಂಚರಿಸಿ, ಸಭಾಮಂದಿರಗಳಲ್ಲಿ ಬೋಧಿಸಿ ದೈವೀರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಿಗಳನ್ನೂ, ಸಕಲ ವಿಧದ ರೋಗಗಳನ್ನೂ ಗುಣಪಡಿಸತೊಡಗಿದರು. 24 ಅವರ ಕೀರ್ತಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗ ಮತ್ತು ಯಾತನೆಗಳಿಂದ ನರಳುತ್ತಿದ್ದವರೆಲ್ಲರನ್ನೂ, ದೆವ್ವಪೀಡಿತರಾದವರನ್ನೂ, ಮೂರ್ಛಾ ರೋಗಿಗಳನ್ನೂ, ಪಾರ್ಶ್ವವಾಯು ರೋಗಿಗಳನ್ನೂ ಅವರ ಬಳಿಗೆ ತರಲಾಯಿತು. ಅವರನ್ನೆಲ್ಲಾ ಯೇಸುವು ಗುಣಪಡಿಸಿದರು. 25 ಆಗ ಗಲಿಲೇಯದಿಂದಲೂ, ದೆಕಪೊಲಿಯಿಂದಲೂ, ಜೆರುಸಲೇಮಿನಿಂದಲೂ, ಜುದೇಯದಿಂದಲೂ ಜೋರ್ಡನಿನ ಆಚೆಯಿಂದಲೂ ಜನರು ದೊಡ್ಡ ಸಮೂಹಗಳಾಗಿ ಅವರನ್ನು ಹಿಂಬಾಲಿಸತೊಡಗಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ