ಮತ್ತಾಯನು ಬರೆದ ಸುಸಂದೇಶಗಳು
ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವ ಪ್ರಯತ್ನ
(ಮಾರ್ಕ12:13-37; ಲೂಕ20:20-44)
15 ಆಗ ಫರಿಸಾಯರು ಅಲ್ಲಿಂದ ಹೊರಟುಹೋಗಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಲುಕಿಸುವುದೆಂದು ಗೂಢಾಲೋಚನೆಯಲ್ಲಿ ತೊಡಗಿದರು. 16 ಅನಂತರ ತಮ್ಮ ಶಿಷ್ಯರನ್ನೂ, ಹೆರೋದನ ಕೆಲವರೊಂದಿಗೆ ಯೇಸುವಿನ ಬಳಿಗೆ ಕಳುಹಿಸಿದರು. ಅವರು, "ಬೋಧಕರೇ, ತಾವು ಸತ್ಯವಂತರು ಮತ್ತು ದೇವರ ಮಾರ್ಗವನ್ನು ಸತ್ಯಕ್ಕನುಸಾರ ಬೋಧಿಸುವವರು; ಇದಲ್ಲದೆ ನೀವು ಯಾರ ಮುಖದಾಕ್ಷಿಣ್ಯವನ್ನೂ ಮಾಡುವವರಲ್ಲ. 17 ಆದ್ದರಿಂದ, ಸೆಜ಼ಾರನಿಗೆ ತೆರಿಗೆಯನ್ನು ಸಲ್ಲಿಸುವುದು ಧರ್ಮಸಮ್ಮತವೋ ಅಥವಾ ಅಲ್ಲವೋ? ನಿಮ್ಮಭಿಪ್ರಾಯವನ್ನು ನಮಗೆ ತಿಳಿಸಿ," ಎಂದರು. 18 ಯೇಸು ಅವರ ಕುತಂತ್ರವನ್ನರಿತು, "ಕಪಟಿಗಳೇ, ನೀವು ನನ್ನನ್ನೇಕೆ ಪರೀಕ್ಷಿಸುತ್ತಿರುವಿರಿ? 19 ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ" ಎಂದರು. ಆಗ ಅವರು ಒಂದು ನಾಣ್ಯವನ್ನು ತಂದುಕೊಟ್ಟರು. 20 ಯೇಸುವು ಅವರಿಗೆ, ಈ ನಾಣ್ಯದ ಮೇಲಿನ ಮುದ್ರೆಯೂ, ಬರಹವೂ ಯಾರದು?" ಎಂದು ಕೇಳಿದರು. 21 ಅದಕ್ಕೆ ಅವರು, "ಸೆಜ಼ಾರನದು" ಎಂದರು. ಆಗ ಯೇಸುವು, ಸೆಜ಼ಾರನದನ್ನು ಸೆಜ಼ಾರನಿಗೂ; ದೇವರದನ್ನು ದೇವರಿಗೂ ಕೊಡಿರಿ," ಎಂದು ಹೇಳಿದರು. 22 ಯೇಸುವಿನ ಮಾತುಗಳನ್ನು ಕೇಳಿದ ಅವರು ಆಶ್ಚರ್ಯಚಕಿತರಾದರು; ಮತ್ತು ಅವರನ್ನು ಬಿಟ್ಟು ಅಲ್ಲಿಂದ ಹೊರಟು ಹೋದರು.
23 ಅದೇ ದಿನ ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಮರಣದ ನಂತರ ಪುನರುತ್ಥಾನವಿಲ್ಲ ಎಂಬುದು ಅವರ ನಂಬಿಕೆ. 24 ಅವರು, "ಬೋಧಕರೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಕರುಣಿಸಬೇಕೆಂದು ಮೋಶೆಯು ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆ ಮಾಡಿಕೊಂಡು ಸತ್ತನು; ಮತ್ತು ಸಂತಾನವಿಲ್ಲದ ಕಾರಣ ಅವನ ಹೆಂಡತಿಯನ್ನು ಎರಡನೆಯವನು ಮದುವೆ ಮಾಡಿಕೊಂಡನು. 26 ಹಾಗೆಯೇ ಎರಡನೆಯವನ ನಂತರ ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು. ಅವರೆಲ್ಲರೂ ಗತಿಸಿದ ಬಳಿಕ 27 ಕೊನೆಯದಾಗಿ ಆ ಸ್ತ್ರೀಯೂ ಸತ್ತಳು. 28 ಹೀಗಿರುವಾಗ ಪುನರುತ್ಥಾನರಾದ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿಯಾಗುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡರಲ್ಲವೇ?," ಎಂದು ಕೇಳಿದರು. 29 ಅದಕ್ಕೆ ಯೇಸುವು ಪ್ರತ್ಯುತ್ತರವಾಗಿ ಅವರಿಗೆ, "ನೀವು ಪವಿತ್ರಗ್ರಂಥವನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದವರಾಗಿದ್ದೀರಿ. 30 ಪುನರುತ್ಥಾನ ಹೊಂದಿದ ಬಳಿಕ ಅವರು ಮದುವೆಯಾಗುವುದಿಲ್ಲ ಮತ್ತು ಮದುವೆ ಮಾಡಿಕೊಡುವುದೂ ಇಲ್ಲ; ಅವರು ಸ್ವರ್ಗದಲ್ಲಿರುವ ದೇವದೂತರಂತೆ ಇರುತ್ತಾರೆ. 31 ಅಲ್ಲದೆ ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳುವುದಾದರೆ, 32 'ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು' ಎಂದು ದೇವರು ಹೇಳಿದ್ದನ್ನು ಧರ್ಮಗ್ರಂಥದಲ್ಲಿ ನೀವು ಓದಲಿಲ್ಲವೇ? ದೇವರು ಜೀವದಿಂದಿರುವವರಿಗೆ ದೇವರಾಗಿದ್ದಾರೆಯೇ ಹೊರತು ಸತ್ತವರಿಗಲ್ಲ" ಎಂದು ಹೇಳಿದರು. 33 ಜನ ಸಮೂಹವು ಯೇಸುವಿನ ಮಾತನ್ನು ಕೇಳಿ ಅವರ ಬೋಧನೆಗೆ ವಿಸ್ಮಯಗೊಂಡರು. 34 ತಮ್ಮ ಬೋಧನೆಯಿಂದ ಯೇಸುವು ಸದ್ದುಕಾಯರ ಬಾಯನ್ನು ಮುಚ್ಚಿಸಿದರೆಂಬ ವಿಷಯವನ್ನರಿತ ಫರಿಸಾಯರು ಒಟ್ಟಾಗಿ ಅಲ್ಲಿಗೆ ಬಂದು ಸೇರಿದರು. 35 ಅವರಲ್ಲಿ ಧರ್ಮೋಪದೇಶಕನಾಗಿದ್ದ ಒಬ್ಬನು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, 6 "ಬೋಧಕರೇ, ಧರ್ಮಶಾಸ್ತ್ರದಲ್ಲಿ ಅತಿಪ್ರಮುಖವಾದ ಆಜ್ಞೆ ಯಾವುದು?" ಎಂದು ಪ್ರಶ್ನಿಸಿದನು. 37 ಯೇಸುವು ಅವನಿಗೆ, "ನೀನು ನಿನ್ನ ಪ್ರಭುವಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಆತ್ಮದಿಂದಲೂ, ಪೂರ್ಣ ಮನಸ್ಸಿನಿಂದಲೂ ಪ್ರೀತಿಸು. 38 ಎಂಬ ಆಜ್ಞೆಯು ಮೊದಲನೆಯದೂ ಮತ್ತು ಪ್ರಮುಖವೂ ಆಗಿದೆ. ಅದರಂತೆಯೇ, 39 'ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು' ಎಂಬುದು ಎರಡನೆಯದು. 40 ಧರ್ಮಶಾಸ್ತ್ರವೂ, ಪ್ರವಾದನೆಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ," ಎಂದು ಹೇಳಿದರು.
41 ಅನಂತರ ಅಲ್ಲಿ ಸೇರಿದ್ದ ಫರಿಸಾಯರಿಗೆ ಯೇಸುವು, 42 "ಅಭಿಷಿಕ್ತನಾದ ಲೋಕೋದ್ಧಾರಕನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರು ಯಾರ ಮಗ?" ಎಂದು ಪ್ರಶ್ನೆಯನ್ನು ಹಾಕಿದರು. ಅದಕ್ಕೆ ಅವರು ಯೇಸುವಿಗೆ, "ಅವರು ದಾವಿದನ ಪುತ್ರ" ಎಂದು ಉತ್ತರಿಸಿದರು. ಯೇಸುವು ಅವರಿಗೆ, 43 "ಹಾಗಾದರೆ ದಾವೀದನೇ ಪವಿತ್ರಾತ್ಮಭರಿತನಾಗಿ ಆತನನ್ನು 'ಪ್ರಭು' ಎಂದು ಕರೆದಿದ್ದಾನಲ್ಲ, ಅದು ಹೇಗೆ?
44 'ನಿನ್ನ ಶತ್ರುಗಳನ್ನು ನಾನು
ನಿನ್ನ ಪಾದದಡಿ ಹಾಕುವ ತನಕ
ನೀನೆನ್ನ ಬಲಗಡೆ ಆಸೀನನಾಗಿರು
ಎಂದೆನ್ನ 'ಪ್ರಭು'ವಿಗೆ ಹೇಳಿಹರು ಸರ್ವೇಶ್ವರ'
ಎಂದಿದ್ದಾನಲ್ಲವೇ?
45 ದಾವೀದನು ಆತನನ್ನು ಪ್ರಭುವೆಂದು ಕರೆಯುವುದಾದರೆ ಅಭಿಷಿಕ್ತನಾದ ಲೋಕೋದ್ಧಾರಕನು ದಾವೀದನ ಪುತ್ರನಾಗುವುದು ಹೇಗೆ?" ಎಂದು ಕೇಳಿದರು. 46 ಅದಕ್ಕೆ ಉತ್ತರವಾಗಿ ಅವರು ಒಂದೇ ಒಂದು ಮಾತನ್ನೂ ಆಡಲಾರದೇ ಹೋದರು. ಅಲ್ಲದೆ ಅಂದಿನಿಂದ ಯೇಸುವಿನ ಬಳಿ ಯಾವ ಪ್ರಶ್ನೆಯನ್ನು ಕೇಳಲೂ ಅವರಿಗೆ ಧೈರ್ಯ ಬರಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ