ಅಧ್ಯಾಯ 6

ಮತ್ತಾಯನು ಬರೆದ ಸುಸಂದೇಶಗಳು


1 ನೀವು ನಿಮ್ಮ ಧರ್ಮಕಾರ್ಯಗಳನ್ನು ಜನರು ನೋಡಲೆಂದು ಅವರ ಮುಂದೆ ಮಾಡದಿರಿ; ಹಾಗೆ ಮಾಡಿದ್ದೇಯಾದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಗದು.  2 ಆದುದರಿಂದ ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ, ಬೀದಿಗಳಲ್ಲಿಯೂ ಮಾಡುವಂತೆ ನೀವು ದಾನಧರ್ಮಗಳನ್ನು ಮಾಡುವಾಗ ತುತ್ತೂರಿಯನ್ನೂದಬೇಡಿ. ಹಾಗೆ ಮಾಡಿದವರು ಆಗಲೇ ತಮ್ಮ ಪ್ರತಿಫಲವನ್ನು ಹೊಂದಿದ್ದಾರೆಂದು ನಾನು ನಿಜವಾಗಿ ಹೇಳುತ್ತೇನೆ. 3 ಆದರೆ ನೀವು ದಾನಮಾಡುವಾಗ ನಿಮ್ಮ ಬಲಗೈ ಮಾಡುವುದು ನಿಮ್ಮ ಎಡಗೈಗೆ ತಿಳಿಯದಂತಿರಲಿ. 4 ಹೀಗೆ ನೀವು ಮಾಡಿದ ಧರ್ಮಕಾರ್ಯಗಳು ನಿಮ್ಮ ಅಂತರಂಗದಲ್ಲಿರುವುದು; ಮತ್ತು ನಿಮ್ಮ ತಂದೆಯು ಅದನ್ನು ನೋಡಿ ನಿಮಗೆ ಪ್ರತಿಫಲ ನೀಡುವರು.

5 ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳಾಗಿರಬೇಡಿ; ಕಪಟಿಗಳು ಜನರು ನೋಡಲೆಂದು ಸಭಾಮಂದಿರಗಳಲ್ಲಿಯೂ, ಬೀದಿಗಳ ಮೂಲೆಗಳಲ್ಲಿಯೂ ನಿಂತು ಪ್ರಾರ್ಥನೆ ಮಾಡುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, 'ಅವರಿಗೆ ಬರಬೇಕಾದ ಪ್ರತಿಫಲವನ್ನು ಅವರು ಆಗಲೇ ಹೊಂದಿದ್ದಾರೆ. 6 ಆದರೆ ನೀವು ಪ್ರಾರ್ಥನೆ ಮಾಡುವಾಗ ನಿಮ್ಮ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿಮ್ಮ ತಂದೆಗೆ ಪ್ರಾರ್ಥನೆ ಮಾಡಿ; ಆಗ ಅಂತರಂಗವನ್ನು ನೋಡುವ ನಿಮ್ಮ ತಂದೆಯು ಬಹಿರಂಗವಾಗಿ ನಿಮಗೆ ಪ್ರತಿಫಲವನ್ನು ನೀಡುವರು. 7 ಹಾಗೂ ನೀವು ಪ್ರಾರ್ಥನೆ ಮಾಡುವಾಗ ಇತರರು ಮಾಡುವಂತೆ ವ್ಯರ್ಥವಾದ ಪದಗಳನ್ನು ಪದೇಪದೇ ಉಚ್ಚರಿಸಬೇಡಿರಿ. ತಾವು ಬಹಳವಾಗಿ ಪ್ರಾರ್ಥನೆ ಮಾಡುವುದರಿಂದ ತಮ್ಮ ತಂದೆಯು ಅದನ್ನು ಕೇಳುವರೆಂದು ಅವರು ಅಂದುಕೊಂಡಿರುತ್ತಾರೆ. 8 ಆದುದರಿಂದ ನೀವು ಅವರಂತೆ ಮಾಡಬೇಡಿರಿ; ನಿಮ್ಮ ತಂದೆಯನ್ನು ನೀವು ಕೇಳುವುದಕ್ಕಿಂತ ಮುಂಚೆಯೇ ಸರ್ವಶಕ್ತರಾದ ಅವರು ನಿಮ್ಮ ಅಗತ್ಯಗಳನ್ನು ಮನಗಂಡಿರುತ್ತಾರೆ.
9 ಆದುದರಿಂದ ನೀವು ಪ್ರಾರ್ಥನೆಯನ್ನು ಮಾಡುವಾಗ ಈ ರೀತಿಯಲ್ಲಿ ಮಾಡಿರಿ;

'ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿಮ್ಮ ನಾಮವು ಪರಿಶುದ್ಧವಾಗಿರಲಿ.
ನಿಮ್ಮ ರಾಜ್ಯವು ಬರಲಿ.
10 ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಹಾಗೆಯೇ ಭೂಲೋಕದಲ್ಲಿಯೂ ನೆರೆವೇರಲಿ.
11 ನಮ್ಮ ಅನುದಿನದ ಆಹಾರವನ್ನು ಇಂದೂ ನಮಗೆ ನೀಡಿರಿ.
12 ನಮಗೆ ತಪ್ಪುಗಳನ್ನು ಮಾಡುವವರನ್ನು ನಾವು ಕ್ಷಮಿಸುವ ಹಾಗೆ ನಮ್ಮ ಪಾಪಗಳನ್ನೂ ಕ್ಷಮಿಸಿ.
13 ನಮ್ಮನ್ನು ಶೋಧನೆಗೆ ಒಳಪಡಿಸದಂತೆ ಕೇಡಿನಿಂದ ನಮ್ಮನ್ನು ರಕ್ಷಿಸಿರಿ'

14 ಆದುದರಿಂದ ನೀವು ಇತರರ ತಪ್ಪುಗಳನ್ನು ಕ್ಷಮಿಸಿದರೆ; ಸ್ವರ್ಗದಲ್ಲಿರುವ ನಿಮ್ಮ ತಂದೆಯೂ ನಿಮ್ಮನ್ನು ಕ್ಷಮಿಸುವರು. 15 ನೀವು ಇತರರ ತಪ್ಪುಗಳನ್ನು ಕ್ಷಮಿಸದೇ ಹೋದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

16 ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖವನ್ನು ಕಳೆಗುಂದಿಸಬೇಡಿರಿ. ಕಪಟಿಗಳು ತಾವು ಉಪವಾಸಿಗಳೆಂದು ತೋರಿಸಿಕೊಳ್ಳುವ ಸಲುವಾಗಿ ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳುತ್ತಾರೆ. ನಿಜವಾಗಿ ನಾನು ನಿಮಗೆ ಹೇಳುವುದೇನೆಂದರೆ,ಅವರ ಪ್ರತಿಫಲವು ಆಗಲೇ ಅವರಿಗೆ ದೊರೆತಿರುತ್ತದೆ. 17 ಆದರೆ ನೀವು ಉಪವಾಸ ಮಾಡುವಾಗ ನಿಮ್ಮ ತಲೆಗೆ ಎಣ್ಣೆಯನ್ನು ಹಚ್ಚಿಕೊಂಡು, ಮುಖವನ್ನು ತೊಳೆದುಕೊಳ್ಳಿರಿ. 18 ಆಗ ನೀವು ಮಾಡಿದ ಉಪವಾಸವು ಇತರರಿಗೆ ಗೊತ್ತಾದಿದ್ದರೂ ಅಂತರಂಗದಲ್ಲಿರುವ ನಿಮ್ಮ ತಂದೆಗೆ ಕಾಣಿಸುವುದು. ಅದನ್ನು ನೋಡುವ ನಿಮ್ಮ ತಂದೆಯು ನಿಮಗೆ ತಕ್ಕ ಪ್ರತಿಫಲ ನೀಡುವರು.

19 ಭೂಲೋಕದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಡಬೇಡಿರಿ; ಇಲ್ಲಿ ನುಸಿಯೂ, ಕಿಲುಬೂ ಅದನ್ನು ಹಾಳುಮಾಡುವುದು; ಮತ್ತು ಕಳ್ಳಕಾಕರು ಕನ್ನಾ ಹಾಕಿ ಕದಿಯುವರು. 20 ಆದರೆ ನಿಮಗಾಗಿ  ಪರಲೋಕದಲ್ಲಿ ಸಂಪತ್ತನ್ನು ಕೂಡಿಸಿಡಿರಿ; ಅಲ್ಲಿ ನುಸಿಯೂ ಕಿಲುಬೂ ಅದನ್ನು ಹಾಳು ಮಾಡುವುದಿಲ್ಲ; ಮತ್ತು ಕಳ್ಳರು ಕನ್ನಾ ಕೊರೆದು ಕದಿಯುವುದೂ ಇಲ್ಲ. 21 ನಿಮ್ಮ ಸಂಪತ್ತು ಎಲ್ಲಿದೆಯೋ ನಿಮ್ಮ ಹೃದಯವೂ ಅಲ್ಲೇ ಇರುವುದು.

22 ಕಣ್ಣು ಶರೀರದ ದೀಪ. ಆದಕಾರಣ ನಿಮ್ಮ ಕಣ್ಣು ಶುದ್ಧವಾಗಿದ್ದರೆ ನಿಮ್ಮ ಶರೀರವು ಬೆಳಕಿನಿಂದ ಕೂಡಿರುತ್ತದೆ. 23 ನಿಮ್ಮ ಕಣ್ಣು ಕೆಟ್ಟು ಹೋಗಿದ್ದರೆ ನಿಮ್ಮ ಶರೀರವೂ ಕತ್ತಲುಮಯವಾಗಿರುವುದು. ನಿಮ್ಮಲ್ಲಿರುವ ಬೆಳಕೇ ಕತ್ತಲಾಗಿರುವುದಾದರೆ ಆ ಕತ್ತಲು ಎಷ್ಟು ಭೀಕರವಾಗಿರಬಹುದು.

24 ಇಬ್ಬರು ಯಜಮಾನರಿಗೆ ಯಾರೂ ಸೇವೆ ಸಲ್ಲಿಸಲಾರರು; ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ಅಸಡ್ಡೆ ಮಾಡುತ್ತಾನೆ. ಹಾಗೆಯೇ ನೀವು ದೇವರನ್ನೂ, ಧನವನ್ನೂ ಒಟ್ಟಿಗೆ ಸೇವಿಸಲಾರಿರಿ.

25 ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಕ್ಕಾಗಿ ನೀವು ಏನನ್ನು ತಿನ್ನಬೇಕು ಮತ್ತು ಏನನ್ನು ಕುಡಿಯಬೇಕು ಎಂಬುದರ ಬಗ್ಗೆಯಾಗಲೀ ಇಲ್ಲವೆ ನಿಮ್ಮ ಶರೀರವನ್ನು ಮುಚ್ಚಲು  ಏನು ಮಾಡಬೇಕೆಂಬುದರ ಕುರಿತಾಗಲೀ ಚಿಂತೆ ಮಾಡಬೇಡಿರಿ; ಊಟಕ್ಕಿಂತ ಪ್ರಾಣವೂ, ಉಡುಪಿಗಿಂತ ಶರೀರವೂ ಮೇಲಾದುದಲ್ಲವೇ. 26 ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದೂ ಇಲ್ಲ, ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವುದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವೆಷ್ಟೋ ಶ್ರೇಷ್ಠರಲ್ಲವೇ? 27 ನಿಮ್ಮಲ್ಲಿ ಯಾರಾದರೂ ಚಿಂತಿಸಿ ತನ್ನ ಆಯಸ್ಸನ್ನು ಒಂದು ದಿನದಷ್ಟಾದರೂ ಹೆಚ್ಚಿಸಿಕೊಳ್ಳಲು ಸಾಧ್ಯವೇ? 28 ನಿಮ್ಮ ಉಡುಪಿಗಾಗಿ ನೀವೇಕೆ ಚಿಂತೆ ಮಾಡುತ್ತೀರಿ? ತೋಟದಲ್ಲಿ ಹೂಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಗಮನಿಸಿರಿ; ಅವು ಕಷ್ಟಪಡುವುದಿಲ್ಲ, ನೂಲುವುದೂ ಇಲ್ಲ. 29 ಆದರೂ ಸೊಲೊಮೋನನು ತನ್ನ ಎಲ್ಲಾ ವೈಭವದ ಕಾಲದಲ್ಲಿ ಇವುಗಳಲ್ಲಿ ಒಂದರಂತೆಯೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ ಎಂದು ನಾನು ನಿಜವಾಗಿ ನಿಮಗೆ ಹೇಳುತ್ತೇನೆ. 30 ಆದುದರಿಂದ ಓ ಅಲ್ಪ ವಿಶ್ವಾಸಿಗಳೇ, ಈ ದಿನವಿದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಮಾಡಿದರೆ, ಅವರು ನಿಮಗೆ ಇನ್ನೆಷ್ಟು ಮಾಡಬಲ್ಲರು? 31 ಆದಕಾರಣ ಏನು ಊಟಮಾಡಬೇಕು? ಏನು ಕುಡಿಯಬೇಕು? ಯಾವುದನ್ನು ಧರಿಸಬೇಕು ಎಂದು ಚಿಂತೆಮಾಡಬೇಡಿರಿ. 32 ಇವೆಲ್ಲವುಗಳಿಗಾಗಿ ಇತರರೂ ಪರದಾಡುತ್ತಾರೆ; ಆದರೆ ಇವೆಲ್ಲಾ ನಿಮಗೆ ಅಗತ್ಯವಾಗಿವೆ ಎಂಬುದು ಸ್ವರ್ಗದ ನಿಮ್ಮ ತಂದೆಗೆ ತಿಳಿದಿದೆ. 33 ಆದುದರಿಂದ ನೀವು ಮೊದಲು ದೇವರ ಸಾಮ್ರಾಜ್ಯಕ್ಕಾಗಿಯೂ ಮತ್ತು ನೀತಿಗಾಗಿಯೂ ತವಕಪಡಿರಿ. ಇವುಗಳ ಜೊತೆಗೆ ಅವೆಲ್ಲವೂ ನಿಮಗೆ ಸಿಗುವುವು. 34 ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನಗೆ ತಾನೇ ಚಿಂತಿಸುವುದು. ಆ ದಿನದ ಚಿಂತೆ ಆ ದಿನಕ್ಕೆ ಇರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ