ಮತ್ತಾಯನು ಬರೆದ ಸುಸಂದೇಶಗಳು
ಸ್ನಾನಿಕ ಯೊವಾನ್ನನ ಕೊಲೆ
(ಮಾರ್ಕ6:14-29; ಲೂಕ9:7-9)
ಐದು ಸಾವಿರ ಜನರಿಗೆ ಊಟ
(ಮಾರ್ಕ6:31-56; ಲೂಕ9:10-17; ಯೊವಾನ್ನ6:1-21)
13 ಆ ವಿಷಯವನ್ನು ಕೇಳಿದ ಯೇಸುವು ನೋವಿನಿಂದ ದೋಣಿಯನ್ನು ಹತ್ತಿ ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಹೊರಟುಹೋದರು. ಯೇಸು ನಿರ್ಜನ ಪ್ರದೇಶದಲ್ಲಿರುವುದನ್ನು ತಿಳಿದ ಜನರು ಪಟ್ಟಣಗಳಿಂದ ಕಾಲು ನಡಿಗೆಯಲ್ಲಿ ಯೇಸುವಿನ ಬಳಿಗೆ ಬಂದರು. 14 ಆಗ ಯೇಸುವು ತಮ್ಮನ್ನು ಹಿಂಬಾಲಿಸಿ ಬಂದ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಗುಣಪಡಿಸಿದರು. 15 ಸಂಜೆಯಾದಾಗ ಅವರ ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಸ್ಥಳ, ಹೊತ್ತು ಮೀರಿದೆ; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ" ಎಂದರು.
16 ಆದರೆ ಯೇಸು ಶಿಷ್ಯರಿಗೆ, "ಅವರು ಇಲ್ಲಿಂದ ಹೋಗುವ ಅವಶ್ಯಕತೆಯಿಲ್ಲ; ಅವರ ಊಟಕ್ಕೆ ನೀವೇ ವ್ಯವಸ್ಥೆ ಮಾಡಿರಿ" ಎಂದು ಹೇಳಿದರು. 17 ಅವರು ಯೇಸುವಿಗೆ, "ನಮ್ಮ ಹತ್ತಿರ ಐದು ರೊಟ್ಟಿ, ಎರಡು ಮೀನುಗಳು ಮಾತ್ರ ಇವೆ" ಎಂದು ಹೇಳಿದರು. 18 ಯೇಸುವು, "ಅವುಗಳನ್ನು ನನ್ನ ಬಳಿಗೆ ತನ್ನಿರಿ" ಎಂದರು. 19 ಜನ ಸಮೂಹವು ಹುಲ್ಲಿನ ಮೇಲೆ ಕುಳಿತುಕೊಳ್ಳಬೇಕೆಂದು ಯೇಸುವು ಅಪ್ಪಣೆಕೊಟ್ಟು ಆ ಐದು ರೊಟ್ಟಿಗಳನ್ನೂ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ದೇವರ ಸ್ತೋತ್ರ ಮಾಡಿ ನಂತರ ಆ ರೊಟ್ಟಿಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟರು. ಶಿಷ್ಯರು ಅವುಗಳನ್ನು ಜನಸಮೂಹಕ್ಕೆ ನೀಡಿದರು. 20 ಅಲ್ಲಿದ್ದವರೆಲ್ಲಾ ಊಟಮಾಡಿ ತೃಪ್ತರಾದರು; ಅವರು ಊಟಮಾಡಿದ ಬಳಿಕ ಉಳಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಬುಟ್ಟಿಗಳಲ್ಲಿ ತುಂಬಿಸಿದರು. 21 ಊಟ ಮಾಡಿದವರಲ್ಲಿ ಸ್ತ್ರೀಯರೂ, ಮಕ್ಕಳೂ, ಗಂಡಸರೂ ಸೇರಿ ಹೆಚ್ಚು ಕಡಿಮೆ ಐದು ಸಾವಿರ ಜನರಿದ್ದರು.
22 ಇದಾದ ಬಳಿಕ ಜನಸಮೂಹಗಳನ್ನು ಅಲ್ಲಿಂದ ಕಳುಹಿಸುವ ಮೊದಲೇ ಯೇಸು ಶಿಷ್ಯರಿಗೆ ದೋಣಿಯನ್ನು ಹತ್ತಿ ಆಚೆಯ ದಡಕ್ಕೆ ಹೋಗಿ ತಮಗಾಗಿ ಕಾದಿರಬೇಕೆಂದು ಹೇಳಿದರು. 23 ಜನಸಮೂಹವು ತೆರಳಿದ ಬಳಿಕ ಪ್ರಾರ್ಥನೆ ಮಾಡಲು ಏಕಾಂತವಾಗಿ ಗುಡ್ಡದ ಮೇಲಕ್ಕೆ ಹೋದ ಯೇಸುವು ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕವೂ ಅಲ್ಲಿಯೇ ಉಳಿದುಕೊಂಡರು. 24 ಅಷ್ಟರಲ್ಲಿ ದೋಣಿಯು ಬಹುದೂರ ಸಾಗಿತ್ತು. ಮತ್ತು ಬಿರುಗಾಳಿ ಬೀಸುತ್ತಿದ್ದುದರಿಂದ ತೆರೆಗಳ ಹೊಡೆತಕ್ಕೆ ಸಿಲುಕಿ ಹೊಯ್ದಾಡಲಾರಂಭಿಸಿತು. 25 ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಹೋದರು. 26 ಸಮುದ್ರದ ಮೇಲೆ ನಡೆಯುತ್ತಿರುವ ಯೇಸುವನ್ನು ಕಂಡು ಶಿಷ್ಯರು ಭೂತವೆಂದು ತಿಳಿದು ಭಯಭೀತರಾಗಿ ಚೀರಿದರು. 27 ಯೇಸು ತಕ್ಷಣವೇ ಅವರಿಗೆ, "ಧೈರ್ಯವಾಗಿರಿ; ಇದು ನಾನೇ" ಎಂದರು. 28 ಆಗ ಪೇತ್ರನು ಯೇಸುವಿಗೆ, "ಸ್ವಾಮಿ, ನೀವೇ ಆಗಿದ್ದರೆ, ನೀರಿನ ಮೇಲೆ ನಡೆದು ನಿಮ್ಮ ಬಳಿ ಬರುವಂತೆ ನನಗೆ ಅಪ್ಪಣೆ ಮಾಡಿರಿ" ಎಂದನು. 29 ಅದಕ್ಕೆ ಯೇಸುವು, "ಬಾ" ಎಂದರು. ಪೇತ್ರನು ತಕ್ಷಣವೇ ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗುವುದಕ್ಕಾಗಿ ನೀರಿನ ಮೇಲೆ ನಡೆಯತೊಡಗಿದನು. 30 ಆದರೆ ಬಲವಾಗಿ ಬೀಸುತ್ತಿರುವ ಬಿರುಗಾಳಿಗೆ ಅಂಜಿ ನೀರಿನಲ್ಲಿ ಮುಳುಗುತ್ತಾ, "ಸ್ವಾಮಿ, ನನ್ನನ್ನು ರಕ್ಷಿಸು" ಎಂದು ಕೂಗಿಕೊಂಡನು. 31 ಯೇಸುವು ತಕ್ಷಣವೇ ತಮ್ಮ ಕೈಯನ್ನು ಚಾಚಿ ಅವನನ್ನು ಹಿಡಿಯುತ್ತಾ, "ಅಲ್ಪ ವಿಶ್ವಾಸಿಯೇ, ಯಾಕೆ ಸಂದೇಹಪಟ್ಟೆ" ಎಂದು ಹೇಳಿದರು.
32 ಯೇಸುವು ದೋಣಿಯೊಳಕ್ಕೆ ಕಾಲಿರಿಸಿದಾಗ ಬಿರುಗಾಳಿ ಬೀಸುವುದು ನಿಂತಿತು. 33 ದೋಣಿಯಲ್ಲಿದ್ದವರು ಯೇಸುವಿನ ಬಳಿ ಬಂದು ಅವರನ್ನು ಆರಾಧಿಸಿ, "ನಿಜವಾಗಿಯೂ ನೀವು ದೇವಪುತ್ರರು" ಎಂದು ಹೇಳಿದರು. 34 ಅವರು ಸಮುದ್ರವನ್ನು ದಾಟಿ ಗೆನೆಜರೇತ್ ನಾಡಿಗೆ ಬಂದರು. 35 ಆಗ ಅಲ್ಲಿದ್ದ ಜನರು ಯೇಸುವಿನ ಗುರುತನ್ನು ಹಿಡಿದು ಸುತ್ತಮುತ್ತಲಿನ ನಾಡಿಗೆಲ್ಲಾ ಹೇಳಿಕಳುಹಿಸಿ ರೋಗಿಗಳನ್ನು ಯೇಸುವಿನ ಬಳಿ ಬರುವಂತೆ ಮಾಡಿದರು. 36 ಅವರು ಯೇಸುವಿನ ಉಡುಪಿನ ಅಂಚನ್ನಾದರೂ ಮುಟ್ಟಲು ಅನುಗ್ರಹಿಸುವಂತೆ ಅವರಲ್ಲಿ ಬೇಡಿಕೊಂಡರು; ಇದೇ ವೇಳೆಯಲ್ಲಿ ಯಾರು ಯೇಸುವಿನ ಉಡುಪನ್ನು ಮುಟ್ಟಿದರೋ ಅವರು ಸಂಪೂರ್ಣವಾಗಿ ಗುಣಮುಖರಾದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ