ಮತ್ತಾಯನು ಬರೆದ ಸುಸಂದೇಶಗಳು
ಫರಿಸಾಯರ ಆಕ್ಷೇಪಣೆ
(ಮಾರ್ಕ2:23-28; ಲೂಕ6:1-11)
9 ತರುವಾಯ ಯೇಸುವು ಅಲ್ಲಿಂದ ಹೊರಟು ಸಭಾಮಂದಿರದೊಳಕ್ಕೆ ಹೋದರು. 10 ಅಲ್ಲಿ ಕೈ ಬತ್ತಿದ್ದ ಓರ್ವ ಮನುಷ್ಯನಿದ್ದನು. ಆಗ ಯೇಸುವನ್ನು ಯಾವುದಾದರೂ ತಪ್ಪಿನಲ್ಲಿ ಸಿಲುಕಿಸಬೇಕೆಂದು ಯೋಚಿಸುತ್ತಿದ್ದ ಫರಿಸಾಯರು, "ಸಬ್ಬತ್ ದಿನಗಳಲ್ಲಿ ರೋಗಿಗಳನ್ನು ಗುಣಪಡಿಸುವುದು ನ್ಯಾಯವೇ?" ಎಂದು ಯೇಸುವನ್ನು ಕೇಳಿದರು. 11 ಅದಕ್ಕೆ ಯೇಸುವು ಅವರಿಗೆ, "ನಿಮ್ಮಲ್ಲಿ ಯಾರಲ್ಲಾದರೂ ಒಂದು ಕುರಿಯಿದ್ದು ಅದು ಸಬ್ಬತ್ ದಿನದಂದು ಕಂದಕದೊಳಕ್ಕೆ ಬಿದ್ದರೆ ಅವನದನ್ನು ಮೇಲಕ್ಕೆ ಎತ್ತದೆ ಇರುವನೇ? 12 ಹಾಗಾದರೆ ಮನುಷ್ಯನು ಕುರಿಗಿಂತಲೂ ಎಷ್ಟೋ ಶ್ರೇಷ್ಠನಲ್ಲವೇ? ಆದುದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯವೇ ಆಗಿದೆ" ಎಂದ ಯೇಸುವು 13 ಕೈ ಬತ್ತಿದ ಮನುಷ್ಯನಿಗೆ, "ನಿನ್ನ ಕೈಯನ್ನು ಮುಂದಕ್ಕೆ ಚಾಚು" ಎಂದರು. ಅವನು ಕೈ ಚಾಚಿದಾಗ ಅದು ಗುಣವಾಯಿತು. 14 ಫರಿಸಾಯರು ಯೇಸುವನ್ನು ಹೇಗೆ ಕೊಲ್ಲುವುದೆಂದು ಆಲೋಚಿಸಲು ಹೊರಕ್ಕೆ ಹೊರಟು ಹೋದರು. 15 ಅದನ್ನರಿತ ಯೇಸುವು ಅಲ್ಲಿ ನಿಲ್ಲದೆ ಹೊರಟು ಹೋದರು.
ಯೇಸುವಿನ ಡಂಭಾಚಾರವಿಲ್ಲದ ಸ್ವಭಾವ
16 ರೋಗಿಗಳ ದೊಡ್ಡ ಸಮೂಹವೊಂದು ಯೇಸುವನ್ನು ಹಿಂಬಾಲಿಸಿದಾಗ ಯೇಸುವು ಅವರೆಲ್ಲರನ್ನು ಗುಣಪಡಿಸಿ ಕಳುಹಿಸಿದರು. ಅನಂತರ ಯೇಸು ತಾವು ಮಾಡಿದ ಕಾರ್ಯವನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಆಜ್ಞಾಪಿಸಿದರು; 17 ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟ ಪ್ರವಾದನೆ ನೆರವೇರಿತು; ಅದೇನೆಂದರೆ,
18 'ಇಗೋ, ನನ್ನ ಸೇವಕನು;
ನಾನಾರಿಸಿಕೊಂಡೆನಿವನನು;
ನನ್ನ ಪ್ರಾಣಪ್ರಿಯನು, ನನಗಿಷ್ಟವು ಇವನು;
ನಾನಾತನ ಮೇಲೆ ನನ್ನಾತ್ಮವನಿರಿಸುವೆನು,
ಅನ್ಯಜನಗಳಿಗೆನ್ನ ಧರ್ಮವ ಸಾರುವನವನು,
19 ಜಗಳ ಕೂಗಾಟ ಮಾಡುವುದಿಲ್ಲವಾತನು,
ಹಾದಿಗಳಲ್ಲಾತನ ಸ್ವರವು ಕೇಳಿಸದು.
20 ಜಜ್ಜಿದ ದಂಟನು ಮುರಿಯದೆಯೂ
ಆರುತಿಹ ದೀಪವ ನಂದಿಸದೆಯೂ
ನ್ಯಾಯಕೆ ಜಯವನೊದಿಗಿಸದೆ ಬಿಡಲಾರನು,
21 ಇಡುವರು ಅನ್ಯಜನರಾತನಲಿ ನಂಬಿಕೆಯನು'
ಎಂದು.
ಫರಿಸಾಯರ ದೂಷಣೆ
(ಮಾರ್ಕ3:22-30; ಲೂಕ11:14-32; 12, 10)
ಫರಿಸಾಯರ ದೂಷಣೆ
(ಮಾರ್ಕ3:22-30; ಲೂಕ11:14-32; 12, 10)
22 ಅದೇ ವೇಳೆ ಜನರು ದೆವ್ವ ಹಿಡಿದವನೂ, ಕುರುಡನೂ, ಮೂಗನೂ ಆಗಿದ್ದ ಓರ್ವನನ್ನು ಯೇಸುವಿನ ಬಳಿ ತಂದರು; ಅವನನ್ನು ಗುಣಪಡಿಸಿದ್ದರಿಂದ, ಆತನು ಮಾತನಾಡಲು ತೊಡಗಿದನಲ್ಲದೇ ಅವನಿಗೆ ಕಣ್ಣುಗಳೂ ಕಾಣಿಸತೊಡಗಿದವು.23 ಆಗ ಅಲ್ಲಿದ್ದ ಜನರೆಲ್ಲರೂ ವಿಸ್ಮಯಗೊಂಡು, "ಈತ ದಾವೀದನ ಕುಮಾರನೇನು?" ಎಂದು ಮಾತನಾಡಿಕೊಂಡರು. 24 ಆದರೆ ಫರಿಸಾಯರು ಇದನ್ನು ಕೇಳಿ, "ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುವುದೇ ಹೊರತು ಬೇರೆ ರೀತಿಯಿಂದಲ್ಲ" ಎಂದರು. 25 ಆಗ ಯೇಸುವು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ, "ಭೇದ ಹುಟ್ಟಿ ವಿಭಜಿಸಲ್ಪಟ್ಟ ಯಾವ ರಾಜ್ಯವಾಗಲಿ, ಪಟ್ಟಣವಾಗಲಿ ಅಥವಾ ಮನೆಯೇ ಆಗಲಿ ಅವು ನಿಲ್ಲದು; ಹಾಳಾಗುವುವು. 26 ಸೈತಾನನು ಸೈತಾನನನ್ನೇ ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ಇನ್ನೊಬ್ಬನನ್ನು ಸೃಷ್ಟಿಸುತ್ತಾನೆ; ಹಾಗೆ ಆದಾಗ ಅವನ ರಾಜ್ಯವು ಹೇಗೆ ನಿಂತೀತು? 27 ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದ್ದೇ ಆದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದುದರಿಂದ ನಿಮ್ಮವರೇ ನಿಮ್ಮ ತಪ್ಪನ್ನು ನಿಮಗೆ ತೋರಿಸುವರು. 28 ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದ ಕಾರಣಕ್ಕೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ.
29 ಬಲಶಾಲಿಯಾದ ಮನುಷ್ಯನನ್ನು ಮೊದಲು ಕಟ್ಟಿಹಾಕದ ಹೊರತು ಅವನ ಮನೆಯನ್ನು ಪ್ರವೇಶಿಸಿ ಅವನ ಆಸ್ತಿಯನ್ನು ಸೂರೆಮಾಡಲು ಸಾಧ್ಯವಾದೀತೇ? ಕಟ್ಟಿಹಾಕಿದ ಮೇಲಲ್ಲವೇ ಮನೆಯನ್ನು ಸೂರೆಮಾಡಲು ಸಾಧ್ಯ. 30 ನನ್ನ ಜೊತೆಯಲ್ಲಿ ಇರದವನು ನನಗೆ ವಿರೋಧ ವ್ಯಕ್ತಪಡಿಸುತ್ತಾನೆ; ಮತ್ತು ನನ್ನ ಸಂಗಡ ಯಾರನ್ನೂ ಸೇರಿಸದವನು ಚದರಿಸುವವನಾಗಿದ್ದಾನೆ.
31 ಮನುಷ್ಯನ ಎಲ್ಲಾ ವಿಧದ ಪಾಪಗಳಿಗೂ, ದೂಷಣೆಗಳಿಗೂ ಕ್ಷಮೆ ಇದೆ; ಆದರೆ ಪರಿಶುದ್ಧಾತ್ಮನ ಮೇಲೆ ಮಾಡುವ ದೂಷಣೆಗೆ ಕ್ಷಮೆಯೇ ಇಲ್ಲ. 32 ನರಪುತ್ರನ ವಿರುದ್ಧ ಯಾರೇ ಮಾತನಾಡಿದರೂ ಅವನಿಗೆ ಕ್ಷಮೆಯಿದೆ. ಆದರೆ ಪರಿಶುದ್ಧಾತ್ಮನಿಗೆ ವಿರುದ್ಧವಾಗಿ ಯಾರೇ ಮಾತನಾಡಿದರೂ ಅವನಿಗೆ ಈ ಲೋಕದಲ್ಲಾಗಲೀ ಇಲ್ಲವೆ ಪರಲೋಕದಲ್ಲೇ ಆಗಲೀ ಕ್ಷಮೆ ದೊರೆಯುವುದಿಲ್ಲ.
33 ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದಾಗಿರುತ್ತದೆ; ಕೆಟ್ಟ ಮರವಾಗಿದ್ದರೆ ಅದರ ಫಲವೂ ಕೆಟ್ಟದ್ದಾಗಿರುತ್ತದೆ. ಮರವು ನೀಡುವ ಫಲದಿಂದಲೇ ಅದರ ಗುಣವನ್ನು ತಿಳಿಯಬಹುದು. 34 ಎಲೈ ಸರ್ಪಸಂತತಿಯವರೇ, ಕೆಟ್ಟವರಾಗಿರುವ ನಿಮ್ಮಲ್ಲಿ ಒಳ್ಳೆಯ ಮಾತುಗಳು ಹೇಗೆ ಬಂದೀತು? ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತನಾಡುತ್ತದೆ. 35 ಒಳ್ಳೆಯ ಮನುಷ್ಯನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನೇ ಹೊರತರುತ್ತಾನೆ. 36 ಆದರೆ ನಾನು ಹೇಳುವುದೇನೆಂದರೆ, ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗೂ ತೀರ್ಪಿನ ದಿನದಲ್ಲಿ ಅವರು ಲೆಕ್ಕಕೊಡಬೇಕಾಗುತ್ತದೆ. 37 ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವೆ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೂ ಆಗುವೆ" ಎಂದು ಹೇಳಿದರು.
38 ಆಗ ಧರ್ಮಶಾಸ್ತ್ರಿಗಳಲ್ಲಿ ಮತ್ತು ಫರಿಸಾಯರಲ್ಲಿ ಕೆಲವರು, "ಗುರುವೇ, ನಿಮ್ಮಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದಿದ್ದೇವೆ" ಎಂದು ಕೇಳಿದರು. 39 ಅದಕ್ಕೆ ಪ್ರತ್ಯುತ್ತರವಾಗಿ ಯೇಸುವು, , "ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಲು ಅಪೇಕ್ಷಿಸುತ್ತದೆ; ಆದರೆ ಪ್ರವಾದಿ ಯೋನನಲ್ಲಿ ಆದ ಸೂಚಕ ಕಾರ್ಯವೇ ಹೊರತು ಇನ್ಯಾವ ಸೂಚಕಕಾರ್ಯವೂ ಇವರಿಗೆ ಸಿಗುವುದಿಲ್ಲ. 40 ಯೋನನು ಮೂರು ಹಗಲು, ಮೂರು ರಾತ್ರಿಯೂ ಮೀನಿನ ಹೊಟ್ಟೆಯಲ್ಲಿ ಇದ್ದಂತೆಯೇ ನರಪುತ್ರನು ಮೂರು ಹಗಲು, ಮೂರು ರಾತ್ರಿಯೂ ಭುವಿಯ ಗರ್ಭದಲ್ಲಿರುವನು. 41 ನ್ಯಾಯತೀರ್ಪಿನ ದಿನದಂದು ನಿನೆವೆಯ ಜನರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆನ್ನುವರು; ಅವರು ಯೋನನ ಸಂದೇಶವನ್ನು ಕೇಳಿ ದೇವರ ಕಡೆಗೆ ತಿರುಗಿದವರು; ಆದರೆ ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. 42 ಅದೇ ದಿನ ದಕ್ಷಿಣ ದೇಶದ ರಾಣಿಯು ಈ ಸಂತತಿಯವರಿಗೆ ವಿರುದ್ಧವಾಗಿ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವಳು; ಏಕೆಂದರೆ ಆಕೆ ಸೊಲೊಮೋನನ ಜ್ಞಾನೋಕ್ತಿಯನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದವಳು; ಆದರೆ ಇಲ್ಲಿ ಸೊಲೊಮೋನನಿಗಿಂತಲೂ ಮೇಲಾದವನು ಇಲ್ಲಿದ್ದಾನೆ.
43 ದೆವ್ವವು ಒಬ್ಬ ಮನುಷ್ಯನಿಂದ ಹೊರ ಬಂದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡಿ ನೆಲೆಯನ್ನು ಕಂಡುಕೊಳ್ಳದೇ, 44 "ನಾನು ಬಿಟ್ಟು ಬಂದ ಮನೆಗೇ ಹಿಂತಿರುಗುತ್ತೇನೆ" ಎಂದು ಹೇಳಿಕೊಂಡು ಹಿಂದಿರುಗಿದಾಗ ಅದು ಬರಿದಾಗಿಯೂ, ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವುದನ್ನು ಕಂಡಿತು. 45 ತರುವಾಯ ಅದು ಹಿಂದಿರುಗಿ ಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬಂದು ಅದರೊಳಗೆ ಪ್ರವೇಶಿಸಿ ವಾಸಮಾಡಿತು; ಹೀಗಾದಾಗ ಆ ಮನುಷ್ಯನ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಯಿತು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವುದು" ಎಂದು ಹೇಳಿದರು ಯೇಸು.
ಯೇಸುವಿನ ಸಂಬಂಧಿಕರು ಯಾರು?
(ಮಾರ್ಕ3:31-35; ಲೂಕ8:19-21)
46 ಅವರು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ ಅವರ ತಾಯಿಯೂ, ಸಹೋದರರೂ ಯೇಸುವಿನೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು. 47 ಆಗ ಒಬ್ಬಾತನು, "ನಿಮ್ಮ ತಾಯಿಯೂ ಸಹೋದರರೂ ನಿಮ್ಮೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ಕಾದು ನಿಂತಿದ್ದಾರೆ" ಎಂದನು. 48 ಅದಕ್ಕೆ ಯೇಸುವು ಪ್ರತ್ಯುತ್ತರವಾಗಿ, " ಯಾರು ನನ್ನ ತಾಯಿ? ನನ್ನ ಸಹೋದರರು ಯಾರು?" ಎಂದು ಹೇಳಿ ಶಿಷ್ಯರ ಕಡೆಗೆ ಕೈಚಾಚಿ, 49 "ಇಗೋ, ನನ್ನ ತಾಯಿ ಮತ್ತು ನನ್ನ ಸಹೋದರರು! 50 ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಯಾರು ಮಾಡುವರೋ ಅವರೇ ನನ್ನ ಸಹೋದರರೂ, ಸಹೋದರಿಯರೂ, ತಾಯಿಯೂ ಆಗಿದ್ದಾರೆ" ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ