ಅಧ್ಯಾಯ 16

ಮತ್ತಾಯನು ಬರೆದ ಸುಸಂದೇಶಗಳು


ಫರಿಸಾಯರ ಮತ್ತು ಸದ್ದುಕಾಯರ ವಿಷಯದಲ್ಲಿ ಎಚ್ಚರಿಕೆ
(ಮಾರ್ಕ8:11-21)

1 ತರುವಾಯ ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಯೇಸುವನ್ನು ಪರೀಕ್ಷಿಸುವ ದುರುದ್ದೇಶದಿಂದ, ಆಕಾಶದಲ್ಲಿ ತಮಗೊಂದು ಸೂಚಕಕಾರ್ಯವನ್ನು ಮಾಡಿ ತೋರಿಸಬೇಕೆಂದು ಕೇಳಿದರು. 2 ಯೇಸುವು ಅವರಿಗೆ ಪ್ರತ್ಯುತ್ತರವಾಗಿ, "ಸಂಜೆಯಾದಾಗ ಆಕಾಶವು ಕೆಂಪಗಿದ್ದರೆ ಒಳ್ಳೆಯ ಹವಾಮಾನವೆಂದು ಹೇಳುತ್ತೀರಿ. 3 ಬೆಳಿಗ್ಗೆ ಆಕಾಶವು ಮೋಡಕವಿದು ಕೆಂಪಾಗಿದ್ದರೆ, ಈ ಹೊತ್ತು ಕೆಟ್ಟ ಹವಾಮಾನ ಇರುವುದೆಂದೂ ಹೇಳುತ್ತೀರಿ. ಕಪಟಿಗಳೇ, ಆಕಾಶದಲ್ಲಾಗುವ ಸೂಚನೆಗಳನ್ನು ನೀವು ಗ್ರಹಿಸಬಲ್ಲಿರಿ; ಆದರೆ ಸಮಯಗಳ ಸೂಚನೆಗಳನ್ನು ನೀವು ಗ್ರಹಿಸಬಲ್ಲಿರಾ? 4 ವ್ಯಭಿಚಾರಿಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ; ಆದರೆ ಪ್ರವಾದಿಯಾದ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇವರಿಗೆ ದೊರಕದು" ಎಂದು ಹೇಳಿದರು. ತರುವಾಯ ಯೇಸುವು ಅವರನ್ನು ಬಿಟ್ಟು ಹೊರಟು ಹೋದರು.

5 ಶಿಷ್ಯರು ರೊಟ್ಟಿಯನ್ನು ತೆಗೆದುಕೊಳ್ಳುವುದನ್ನು ಮರೆತು ಆಚೆಯ ದಡಕ್ಕೆ ಬಂದಿದ್ದರು. 6 ಆಗ ಯೇಸುವು ಅವರಿಗೆ, "ಎಚ್ಚರಿಕೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಹೇಳಿದರು. 7 ಅದಕ್ಕೆ ಅವರು ತಮ್ಮ ತಮ್ಮಲ್ಲಿಯೇ, 'ನಾವು ರೊಟ್ಟಿಯನ್ನು ತೆಗೆದುಕೊಳ್ಳದೆ ಇರುವುದರಿಂದ ಹೀಗೆ ಹೇಳುತ್ತಿದ್ದಾರೆ' ಎಂದು ತಿಳಿದುಕೊಂಡರು. 8 ಯೇಸು ಅದನ್ನು ಅರ್ಥಮಾಡಿಕೊಂಡು ಅವರನ್ನು ಕುರಿತು, "ಅಲ್ಪ ವಿಶ್ವಾಸಿಗಳೇ, ರೊಟ್ಟಿಯನ್ನು ನೀವು ತೆಗೆದುಕೊಂಡು ಬರಲಿಲ್ಲವೆಂದು ನಿಮ್ಮಲ್ಲೇಕೆ ಅಂದುಕೊಳ್ಳುತ್ತೀರಿ? 9 ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದಾಗ ಎಷ್ಟು ಬುಟ್ಟಿಗಳು ತುಂಬಿದವೆಂದು ನೀವು ನೋಡಿರಲಿಲ್ಲವೇ? ಅಥವಾ ನಿಮಗೆ ನೆನಪಿಲ್ಲವೇ? 10 ಇದೂ ಅಲ್ಲದೆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದಾಗ ಎಷ್ಟು ಬುಟ್ಟಿಗಳನ್ನು ನೀವು ತುಂಬಿದಿರಿ? 11 ಆದರೆ ನಾನು ರೊಟ್ಟಿಯ ವಿಷಯದಲ್ಲಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದೆ. ಅದನ್ನು ನೀವು ಅರ್ಥಮಾಡಿಕೊಳ್ಳದೇ ಹೋದಿರಿ" ಎಂದು ಹೇಳಿದರು. 12 ಯೇಸುವು ಹೇಳಿದ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕು ಅಂದರೆ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಜಾಗರೂಕವಾಗಿರಬೇಕೆಂದು ಆಗ ಶಿಷ್ಯರು ಅರ್ಥಮಾಡಿಕೊಂಡರು. 

ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆ ಮಾಡಿದ್ದು
(ಮಾರ್ಕ8:27-29; ಲೂಕ9:9:18-21)

13 ಅಲ್ಲಿಂದ ಯೇಸುವು ಫಿಲಿಪ್ಪನ ಸೆಜಾರಿಯ ಎಂಬ ಪ್ರಾಂತ್ಯಕ್ಕೆ ಬಂದಾಗ ತಮ್ಮ ಶಿಷ್ಯರನ್ನು, "ನರಪುತ್ರನಾಗಿರುವ ನನ್ನನ್ನು ಜನರು ಯಾರೆಂದು ಹೇಳುತ್ತಾರೆ" ಎಂದು ಕೇಳಿದರು. 14 ಆಗ ಅವರು, "ನಿಮ್ಮನ್ನು ಕೆಲವರು ಸ್ನಾನದೀಕ್ಷೆ ಮಾಡಿಸುವ 'ಯೋವಾನ್ನ'ರು ಎಂದೂ, ಇನ್ನೂ ಕೆಲವರು 'ಎಲೀಯ'ರೆಂದೂ, ಮತ್ತೆ ಕೆಲವರು, 'ಯೆರೆಮೀಯ'ರೆಂದೂ, ಇಲ್ಲವೆ 'ಪ್ರವಾದಿಗಳಲ್ಲಿ ಒಬ್ಬರು' ಎಂದೂ ಹೇಳುತ್ತಾರೆ" ಎಂದು ಹೇಳಿದರು. 15 ಅದಕ್ಕೆ ಯೇಸುವು, "ನೀವು ನನ್ನನ್ನು ಯಾರೆನ್ನುತ್ತೀರಿ" ಎಂದು ಶಿಷ್ಯರನ್ನು ಕೇಳಿದರು. 16 ಅದಕ್ಕೆ ಸೀಮೋನ ಪೇತ್ರನು, "ನೀವೇ ಅಭಿಷಿಕ್ತರಾದ ಲೋಕರಕ್ಷಕರು, ಜೀವವುಳ್ಳ ದೇವರಪುತ್ರರು" ಎಂದು ಹೇಳಿದನು. 17 ಆಗ ಯೇಸುವು ಅವನಿಗೆ, "ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಇದನ್ನು ನೀನು ತಿಳಿದುಕೊಂಡದ್ದು ಮನುಷ್ಯನ ಶಕ್ತಿಯಿಂದಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಅದನ್ನು ನಿನಗೆ ಪ್ರಕಟಿಸಿದರು" ಎಂದು ಹೇಳಿದರು. 18 ನಾನು ನಿನಗೆ ಹೇಳುವುದೇನೆಂದರೆ, "ನೀನು ಪೇತ್ರ ಅಂದರೆ ಬಂಡೆ, ಈ ಬಂಡೆಯ ಮೇಲೆ ನಾನು ನನ್ನ ಧರ್ಮಸಭೆಯನ್ನು ಕಟ್ಟುವೆನು; ನರಕಲೋಕದ ಶಕ್ತಿಯು ಅದನ್ನೆಂದೂ ಜಯಿಸಲಾರದು. 19 ನಾನು ನಿನಗೆ ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ಕೊಡುವೆನು; ನೀನು ಯಾವುದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು; ನೀನು ಯಾವುದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು" ಎಂದರು. 20 ತರುವಾಯ ತಾವು ಅಭಿಷಿಕ್ತ ರಕ್ಷಕರು ಎಂಬುದನ್ನು ಯಾರಿಗೂ ಹೇಳಬಾರದು ಎಂಬುದಾಗಿ ತಮ್ಮ ಶಿಷ್ಯರಿಗೆ ಆಜ್ಞಾಪಿಸಿದರು. 

ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
(ಮಾರ್ಕ8:31; 9:1; ಲೂಕ9:22-27)

21 ತಾವು ಜೆರುಸಲೇಮಿಗೆ ಹೋಗಬೇಕಾಗಿದೆಯೆಂದೂ ಮತ್ತು ಅಲ್ಲಿಯ ಸಭೆಯ ಪ್ರಮುಖರಿಂದಲೂ, ಪ್ರಧಾನ ಯಾಜಕರಿಂದಲೂ, ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಗಳನ್ನು ಅನುಭವಿಸುವೆನೆಂತಲೂ ಅನಂತರ ಮರಣವನ್ನು ಹೊಂದಿ ಮೂರನೆಯ ದಿವಸ ಪುನರುತ್ಥಾನ ಹೊಂದಬೇಕಾಗಿದೆಯೆಂದೂ ತಮ್ಮ ಶಿಷ್ಯರಿಗೆ ಅಂದಿನಿಂದ ಬೋಧಿಸಲಾರಂಭಿಸಿದರು. 22 ಅದನ್ನು ಕೇಳಿದ ಪೇತ್ರನು ಯೇಸುವಿನ ಕೈಯನ್ನು ಹಿಡಿದು, "ಸ್ವಾಮಿ ಆ ಸಂಕಷ್ಟಗಳು ತಮ್ಮಿಂದ ದೂರವಿರಲಿ; ಇಂಥಾದ್ದು ನಿಮಗೆ ಆಗಬಾರದು" ಎಂದು ಹೇಳಿದನು. 23 ಆದರೆ ಯೇಸುವು ಪೇತ್ರನತ್ತ ತಿರುಗಿ, "ಸೈತಾನನೇ ನೀನಿಲ್ಲಿಂದ ತೊಲಗು! ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು, ದೇವರದಲ್ಲ! ನೀನು ನನಗೊಂದು ಅಡ್ಡಿ!" ಎಂದು ಗದರಿದರು.. 24 ತರುವಾಯ ಯೇಸು ತಮ್ಮ ಶಿಷ್ಯರಿಗೆ, "ಯಾರಿಗಾದರೂ ನನ್ನ ಹಿಂಬಾಲಿಸಲು ಇಷ್ಟವಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 25 ಏಕೆಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳೆದುಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು. 26 ಒಬ್ಬ ಮನುಷ್ಯನು ಇಡೀ ಜಗತ್ತನ್ನೇ ಗೆದ್ದರೂ ತನ್ನ ಪ್ರಾಣವನ್ನು ಕಳೆದುಕೊಂಡರೆ ಆಗುವ ಪ್ರಯೋಜನವಾದರೂ ಏನು? ಇಲ್ಲವೆ ತನ್ನ ಪ್ರಾಣಕ್ಕೆ ಬದಲಾಗಿ ಅವನು ಬೇರೇನನ್ನು ಕೊಟ್ಟಾನು? 27 ನರಪುತ್ರನು ಪಿತನ ಮಹಿಮೆಯೊಂದಿಗೆ ತನ್ನ ದೂತರೊಡನೆ ಹಿಂದಿರುಗಿ ಬರುವನು. ಆಗ ಆತನು ಇಲ್ಲಿರುವ ಪ್ರತಿಯೊಬ್ಬನಿಗೂ ಅವನವನ ಕೆಲಸಕಾರ್ಯಗಳಿಗೆ ತಕ್ಕಂತಹ ಪ್ರತಿಫಲವನ್ನು ನೀಡುವನು.  28 ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷವಾಗುವುದನ್ನು ನೋಡುವ ಮುನ್ನ ಸಾವನ್ನು ನೋಡುವುದಿಲ್ಲ" ಎಂದರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ