ಅಧ್ಯಾಯ 9

ಮತ್ತಾಯನು ಬರೆದ ಸುಸಂದೇಶಗಳು


ಪಾಪ ಕ್ಷಮೆ
(ಮಾರ್ಕ2:1-12; ಲೂಕ5:17-26)

1 ಯೇಸುವು ದೋಣಿಯನ್ನು ಹತ್ತಿ ಅಲ್ಲಿಂದ ಹೊರಟು ತಮ್ಮ ಸ್ವಂತ ಪಟ್ಟಣಕ್ಕೆ ಬಂದರು. 2 ಆಗ ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಅವರ ಬಳಿಗೆ ಹೊತ್ತುತಂದರು. ಜನರ ನಂಬಿಕೆಯನ್ನು ನೋಡಿದ ಯೇಸುವು ಆ ಪಾರ್ಶ್ವವಾಯು ರೋಗಿಗೆ, "ಮಗನೇ, ಧೈರ್ಯದಿಂದಿರು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎಂದರು. 3 ಆಗ ಧರ್ಮಶಾಸ್ತ್ರಿ ಗಳಲ್ಲಿ ಕೆಲವರು, "ಈ ಮನುಷ್ಯನು ದೇವದೂಷಣೆಯನ್ನು ಮಾಡುತ್ತಿದ್ದಾನೆ" ಎಂದು ತಮ್ಮತಮ್ಮಲ್ಲಿಯೇ ಅಂದುಕೊಂಡರು. 4 ಯೇಸು ಅವರ ಆಲೋಚನೆಗಳನ್ನು ತಿಳಿದು, "ನೀವೇಕೆ ನಿಮ್ಮ ಹೃದಯಗಳಲ್ಲಿ ಕೆಟ್ಟದ್ದನ್ನು ಯೋಚಿಸುತ್ತೀರಿ? 5 ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದು ಸರಿಯೋ? ಇಲ್ಲ ಎದ್ದು ನಡೆ ಅನ್ನುವುದು ಸರಿಯೋ? 6 ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಮಿಯ ಮೇಲೆ ಅಧಿಕಾರ ಉಂಟೆಂದು ನೀವು ತಿಳಿಯಬೇಕು" ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, "ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು" ಎಂದು ಹೇಳಿದರು. 7 ಆಗ ಅವನೆದ್ದು ತನ್ನ ಮನೆಗೆ ಹೊರಟು ಹೋದನು. 8 ಜನರ ಸಮೂಹವು ಅದನ್ನು ನೋಡಿ ಆಶ್ಚರ್ಯಪಟ್ಟು ಯೇಸುವಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.


ಪಾಪಿಗಳ ಸಂಗಡ ಊಟ
(ಮಾರ್ಕ2:13-22; ಲೂಕ5:27-38)

9 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕುಳಿತಿರುವುದನ್ನು ನೋಡಿ, "ನನ್ನನ್ನು ಹಿಂಬಾಲಿಸು" ಎಂದು ಆತನಿಗೆ ನುಡಿದರು. ಅವನೆದ್ದು ಯೇಸುವನ್ನು ಹಿಂಬಾಲಿಸಿದನು. 10 ಇದಾದ ಬಳಿಕ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಕೆಲವು ಸುಂಕದವರೂ, ಬಹಿಷ್ಕೃತರಾದ ಕೆಲವರು ಬಂದು ಯೇಸು ಮತ್ತು ಅವರ ಶಿಷ್ಯರೊಂದಿಗೆ ಕುಳಿತುಕೊಂಡರು. 11 ಅದನ್ನು ಕಂಡ ಫರಿಸಾಯರು ಯೇಸುವಿನ ಶಿಷ್ಯರಿಗೆ, "ನಿಮ್ಮ ಬೋಧಕರು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟ ಮಾಡುತ್ತಾರೆ?" ಎಂದು ಕೇಳಿದರು.

12 ಅದನ್ನು ಕೇಳಿದ ಯೇಸು ಅವರಿಗೆ. "ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೇ ಹೊರತು ಆರೋಗ್ಯವಂತರಿಗಲ್ಲ. 13 'ನನಗೆ ಬೇಕಾಗಿರುವುದು ಯಜ್ಞವಲ್ಲ, ಕರುಣೆ'.ಎಂಬುದಾಗಿ ಧರ್ಮಗ್ರಂಥದಲ್ಲಿ ಬರೆದಿರುವುದನ್ನು ಹೋಗಿ ನೋಡಿ ಅರ್ಥಮಾಡಿಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬಂದವನಲ್ಲ; ಪಾಪಿಗಳನ್ನು ಕರೆಯಲು ಬಂದವನು" ಎಂದು ಹೇಳಿದರು.

14 ಅದಾದ ಬಳಿಕ ಯೋವಾನ್ನನ ಶಿಷ್ಯರು ಯೇಸುವಿನ ಬಳಿಗೆ ಬಂದು, "ಫರಿಸಾಯರು ಮತ್ತು ನಾವು ಉಪವಾಸವನ್ನು ಮಾಡುತ್ತೇವೆ; ಆದರೆ ನಿಮ್ಮ ಶಿಷ್ಯರೇಕೆ ಉಪವಾಸವನ್ನು ಮಾಡುವದಿಲ್ಲ" ಎಂದು ಪ್ರಶ್ನಿಸಿದರು.
15 ಯೇಸು ಅವರಿಗೆ, "ಮದುಮಗನು ತಮ್ಮ ಜೊತೆಯಲ್ಲಿರುವಾಗ ಮದುಮಗಳ ಮನೆಯವರು ದುಃಖಪಡುವರೇ? ಆದರೆ ಮದುಮಗನು ಅಲ್ಲಿಂದ ಹೊರಡುವ ದಿನಗಳು ಬರುವವು; ಆಗ ಅವರು ಉಪವಾಸ ಮಾಡುವರು. 16 ಯಾರೂ ಹಳೇ ಬಟ್ಟೆಗೆ ಹೊಸ ಬಟ್ಟೆಯ ತುಂಡನ್ನು ತೇಪೆ ಹಾಕಲು ಉಪಯೋಗಿಸುವುದಿಲ್ಲ; ಹಾಗೆ ಮಾಡಿದರೆ ತೇಪೆಯ ಬಟ್ಟೆಯು ಆ ಹಳೆಯ ವಸ್ತ್ರವನ್ನು ಹಿಂಜುವುದರಿಂದ ಹಳೆ ವಸ್ತ್ರವು ಹರಿದು ಹೋಗುವುದು. 17 ಹೊಸ ದ್ರಾಕ್ಷಾರಸವನ್ನು ಹಳೇ ಬುದ್ದಲಿಗಳಲ್ಲಿ ಯಾರೂ ಹಾಕುವುದಿಲ್ಲ; ಹಾಕಿದರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವುವು; ಬದಲಾಗಿ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿದರೆ ಅವೆರಡೂ ಉಳಿಯುವುವು" ಎಂದರು.

ಹುಡುಗಿಗೆ ಜೀವದಾನ
(ಮಾರ್ಕ5:22-43; ಲೂಕ8:41-56)

18 ಹೀಗೆ ಯೇಸುವು ಅವರೊಂದಿಗೆ ಮಾತನಾಡುತ್ತಿದ್ದಾಗಲೇ, ಒಬ್ಬ ಅಧಿಕಾರಿಯು ಬಂದು ಯೇಸುವನ್ನು ವಂದಿಸಿ, "ನನ್ನ ಮಗಳು ಈಗತಾನೇ ಸತ್ತುಹೋದಳು; ಆದರೆ ನೀವು ಬಂದು ಆಕೆಯ ಮೇಲೆ ತಮ್ಮ ಹಸ್ತವನ್ನಿರಿಸಿದಲ್ಲಿ ಆಕೆಯು ಬದುಕುವಳು" ಎಂದು ಹೇಳಿದನು. 19 ಆಗ ಯೇಸುವು ಎದ್ದು ತಮ್ಮ ಶಿಷ್ಯರೊಂದಿಗೆ ಅವನ ಹಿಂದೆ ಹೋದರು. 20 ಆ ಅಧಿಕಾರಿಯ ಜೊತೆಗೆ ಯೇಸು ನಡೆಯುತ್ತಿದ್ದಂತೆಯೇ ಹನ್ನೆರಡು ವರುಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಸ್ತ್ರೀಯೊಬ್ಬಳು ಹಿಂದಿನಿಂದ ಅವರ ಉಡುಪಿನ ಅಂಚನ್ನು ಮುಟ್ಟಿದಳು. 21 ಯೇಸುವಿನ ಉಡುಪನ್ನು ಮುಟ್ಟಿದರೆ ತಾನು ಗುಣವಾಗುವೆನು ಎಂಬ ನಂಬಿಕೆ ಆಕೆಯದಾಗಿತ್ತು. 22 ಯೇಸು ಹಿಂತಿರುಗಿ ನೋಡಿ ಆಕೆಗೆ, "ಮಗಳೇ, ಸಮಾಧಾನದಿಂದ ಹೋಗು; ನಿನ್ನ ನಂಬಿಕೆಯು ನಿನ್ನನ್ನು ಗುಣಪಡಿಸಿದೆ" ಎಂದರು. ಆ ಘಳಿಗೆಯಲ್ಲೇ ಆಕೆಯು ಗುಣಹೊಂದಿದಳು.

23 ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಕ್ಕೆ ಬಂದು ವಾದ್ಯಗಾರರನ್ನೂ, ರೋಧನಗೈಯುತ್ತಿರುವವರನ್ನೂ ನೋಡಿ 24 ಅವರಿಗೆ, "ಹೊರಗೆ ಹೋಗಿರಿ; ಹುಡುಗಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ" ಎಂದರು. ಅದಕ್ಕಲ್ಲಿದ್ದವರು ಯೇಸುವನ್ನು ಹಾಸ್ಯ ಮಾಡಿ ನಕ್ಕರು. 25 ಆದರೆ ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಯೇಸುವು ಒಳಕ್ಕೆ ಹೋಗಿ ಆ ಬಾಲಕಿಯ ಕೈಯನ್ನು ಹಿಡಿದಾಗ ಆಕೆಯು ಎದ್ದು ಕುಳಿತಳು. 26 ಈ ಸುದ್ದಿಯು ಆ ದೇಶದಲ್ಲೆಲ್ಲಾ ಹಬ್ಬಿತು.

27 ಯೇಸು ಅಲ್ಲಿಂದ ತೆರಳುವಾಗ ಇಬ್ಬರು ಕುರುಡರು ಅವರನ್ನು ಹಿಂಬಾಲಿಸುತ್ತಾ, "ದಾವೀದ ಕುಮಾರನೇ, ನಮ್ಮ ಮೇಲೆ ಕರುಣೆ ಇಡು" ಎಂದು ಕೂಗಿ ಹೇಳುತ್ತಿದ್ದರು. 28 ಅವರು ಮನೆಯೊಳಕ್ಕೆ ಬಂದಾಗ ಆ ಕುರುಡರು ಅವರ ಬಳಿಗೆ ಬಂದರು. ಆಗ ಯೇಸುವು ಅವರಿಗೆ, "ನಾನಿದನ್ನು ಮಾಡಬಲ್ಲೆನೆಂದು ನೀವು ನಂಬುವಿರಾ?" ಎಂದು ಕೇಳಿದರು. ಅವರು, "ಸ್ವಾಮಿ, ನಾವು ನಂಬುತ್ತೇವೆ" ಎಂದರು. 29 ಆಗ ಯೇಸುವು ಅವರ ಕಣ್ಣುಗಳನ್ನು ಮುಟ್ಟಿ, "ನಿಮ್ಮ ನಂಬಿಕೆಯಂತೆ ನಿಮಗಾಗಲಿ" ಎಂದು ಹೇಳಿದರು. 30 ಆ ಕ್ಷಣವೇ ಅವರ ಕಣ್ಣುಗಳು ತೆರೆಯಲ್ಪಟ್ಟವು. ಯೇಸು ಅವರಿಗೆ, "ಇದು ಯಾರಿಗೂ ತಿಳಿಯಬಾರದು" ಎಂದು ಅವರಿಗೆ ಎಚ್ಚರಿಕೆ ನೀಡಿದರು. 31 ಆದರೆ ಅವರು ಹೊರಟುಹೋಗಿ ಆ ಸೀಮೆಯಲ್ಲೆಲ್ಲಾ ಯೇಸುವಿನ ಕೀರ್ತಿಯನ್ನು ಹಬ್ಬಿಸಿದರು.

32 ಕುರುಡರು ಹೊರಟು ಹೋಗುತ್ತಿದ್ದಂತೆಯೇ ದೆವ್ವ ಹಿಡಿದಿದ್ದ ಮೂಗನೊಬ್ಬನನ್ನು ಯೇಸುವಿನ ಬಳಿಗೆ ತಂದರು. 33 ಯೇಸುವು ಆ ಮನುಷ್ಯನಲ್ಲಿ ಸೇರಿದ್ದ ದೆವ್ವವನ್ನು ಹೊರಕ್ಕೆ ಹಾಕಿದ ಮೇಲೆ ಮೂಗನು ಮಾತನಾಡತೊಡಗಿದನು. ಆಗ ಜನಸಮೂಹವು ಬೆರಗಾಗಿ, "ಇಂಥಹ ಕಾರ್ಯವನ್ನು ನಾವೆಂದೂ ಇಸ್ರೇಲಿನಲ್ಲಿ ಕಂಡಿಲ್ಲ" ಎಂದು ಹೇಳಿದರು. 34 ಆದರೆ ಪರಿಸಾಯರು, "ದೆವ್ವಗಳ ಅಧಿಪತಿಯಿಂದ ಇವನು ದೆವ್ವಗಳನ್ನು ಬಿಡಿಸುತ್ತಾನೆ" ಅಂದರು.

ಶಿಷ್ಯರ ಆಯ್ಕೆ
(ಮಾರ್ಕ3:13-19; 6:6-13; ಲೂಕ6:12-16; 9:1-6)

35 ತರುವಾಯ ಯೇಸು ಎಲ್ಲಾ ಹಳ್ಳಿಗಳಲ್ಲಿಯೂ, ಪಟ್ಟಣಗಳಲ್ಲಿಯೂ ಸಂಚರಿಸುತ್ತಾ ಪ್ರಾರ್ಥನಾಮಂದಿರಗಳಲ್ಲಿ ಉಪದೇಶಿಸಿ ಸ್ವರ್ಗಸಾಮ್ರಾಜ್ಯದ ಸುವಾರ್ತೆಯನ್ನು ಸಾರಿದರು. ಜನರಲ್ಲಿದ್ದ ಪ್ರತಿಯೊಂದು ರೋಗಗಳನ್ನು ವಾಸಿಮಾಡಿದರು. 36 ಆದರೆ ಅವರು ತಮ್ಮ ಬಳಿಗೆ ಬರುವ ಜನರ ಸಮೂಹವನ್ನು ಕಂಡು ಕನಿಕರಪಟ್ಟರು. ಆ ಜನರ ಸಮೂಹವು ಕುರುಬನಿಲ್ಲದ ಕುರಿಗಳಂತೆ ಚೆದರಿಸಲ್ಪಟ್ಟು ಬಳಲಿದವರಾಗಿದ್ದರು.

37 ಯೇಸು ತಮ್ಮ ಶಿಷ್ಯರತ್ತ ತಿರುಗಿ, "ಬೆಳೆಯು ಹೇರಳವಾಗಿದೆ; ಆದರೆ ಕೊಯ್ಲುಗಾರರು ವಿರಳ 38 ಆದ ಕಾರಣ ಬೆಳೆಯ ಕೊಯ್ಲಿಗೆ ಕೆಲಸಗಾರರನ್ನು ಕಳುಹಿಸುವಂತೆ ಯಜಮಾನನಲ್ಲಿ ಪ್ರಾರ್ಥಿಸಿರಿ" ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ