ಅಧ್ಯಾಯ 8

ಮತ್ತಾಯನು ಬರೆದ ಸುಸಂದೇಶಗಳು


ಯೇಸುವಿನ ಅದ್ಭುತ ಕಾರ್ಯ
(ಈ ಅಧ್ಯಾಯದ 2 ರಿಂದ 9 ಮತ್ತು 34 ಮಾರ್ಕ1:40-44, ಲೂಕ 5:12-14) 

1 ಯೇಸುವು ಪರ್ವತವನ್ನಿಳಿದು ಬಂದಾಗ ಜನರ ದೊಡ್ಡ ಸಮೂಹವು ಅವರನ್ನು ಹಿಂಬಾಲಿಸಿತು. 2 ಆಗ ಒಬ್ಬ ಕುಷ್ಠರೋಗಿಯು ಬಂದು ಅವರಿಗೆ ಅಡ್ಡಬಿದ್ದು, "ಸ್ವಾಮಿ, ನೀವು ಮನಸ್ಸು ಮಾಡಿದರೆ ನನ್ನ ರೋಗವನ್ನು ವಾಸಿ ಮಾಡಬಲ್ಲಿರಿ" ಎಂದನು. 3 ಆಗ ಯೇಸುವು ತಮ್ಮ ಕೈಯಿಂದ ಅವನನ್ನು ಮುಟ್ಟಿ, "ಖಂಡಿತವಾಗಿಯೂ ನೀನು ವಾಸಿಯಾಗುವೆ" ಎಂದರು. ತಕ್ಷಣವೇ ಅವನ ಕುಷ್ಠ ರೋಗವು ವಾಸಿಯಾಯಿತು. 4 ಯೇಸು ಅವನಿಗೆ, "ನೀನು ಯಾರಿಗೂ ಇದನ್ನು ಹೇಳಕೂಡದು; ಇಲ್ಲಿಂದ ನೇರವಾಗಿ ಯಾಜಕನ ಬಳಿ ಹೋಗಿ ನಿನ್ನನ್ನು ಪರೀಕ್ಷಿಸಿಕೋ; ಅನಂತರ ಮೋಶೆಯು ಧರ್ಮಶಾಸ್ತ್ರದಲ್ಲಿ ಹೇಳಿದ ಪ್ರಕಾರ ನಡೆದುಕೋ. ಇದು ಜನರಿಗೆ ಸಾಕ್ಷಿಯಾಗಿರಲಿ" ಎಂದು ಹೇಳಿದರು.

ಶತಾಧಿಪತಿಯ ನಂಬಿಕೆ
(ಲೂಕ7:1-10; 13, 28, 29)

5 ಇದಾದ ಬಳಿಕ ಯೇಸುವು ಕಪೆರ್ನೌಮ್‌ ಎಂಬ ಊರಿನೊಳಕ್ಕೆ ಪ್ರವೇಶಿಸಿದಾಗ ಒಬ್ಬ ಶತಾಧಿಪತಿಯು ಅವರ ಬಳಿಗೆ ಬಂದು, 6 "ಸ್ವಾಮಿ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಬಹಳವಾಗಿ ನರಳುತ್ತಾ ಮನೆಯಲ್ಲಿ ಮಲಗಿದ್ದಾನೆ" ಎಂದು ಹೇಳಿಕೊಂಡನು. 7 ಯೇಸುವು ಅವನಿಗೆ, "ನಾನು ಬಂದು ಅವನನ್ನು ಗುಣಪಡಿಸುತ್ತೇನೆ" ಎಂದರು. 8 ಅದಕ್ಕೆ ಶತಾಧಿಪತಿಯು, "ಸ್ವಾಮಿ, ನೀವು ನನ್ನ ಮನೆಯೊಳಕ್ಕೆ ಕಾಲಿರಿಸುವಷ್ಟು ನಾನು ಯೋಗ್ಯನಲ್ಲ; ಆದರೆ ತಾವು ಒಂದೇ ಒಂದು ಮಾತನ್ನು ನುಡಿಯಿರಿ; ಆಗ ನನ್ನ ಸೇವಕನು ಗುಣಹೊಂದುವನು. 9 ನಾನು ಮತ್ತೊಬ್ಬ ಅಧಿಕಾರಿಯ ಕೆಳಗಿರುವವನಾಗಿದ್ದರೂ ನನ್ನ ಅಧೀನದಲ್ಲಿ ಅನೇಕ ಸೈನಿಕರಿದ್ದಾರೆ. ನಾನವರಿಗೆ ಹೋಗು ಅಂದರೆ ಅವರು ಹೋಗುತ್ತಾರೆ; ಬಾ ಅಂದರೆ ಬರುತ್ತಾರೆ. ಇದನ್ನು ಮಾಡು ಎಂದು ಹೇಳಿದ ತಕ್ಷಣವೇ ಅದನ್ನು ಮಾಡುತ್ತಾರೆ"  " ಎಂದು ವಿನಯದಿಂದ ನುಡಿದನು. 10 ಯೇಸುವು ಅದನ್ನು ಕೇಳಿ ಆಶ್ಚರ್ಯದಿಂದ ತನ್ನ ಹಿಂದೆ ಬರುತ್ತಿದ್ದವರಿಗೆ, "ನಾನು ಇಂಥಾ ಅಪರಿಮಿತ ವಿಶ್ವಾಸವನ್ನು ಇಸ್ರೇಲಿನ ಜನರಲ್ಲಿ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ" ಎಂದರು. 11 ಅಲ್ಲದೇ ಅವರು, "ನಾನು ನಿಮಗೆ ಹೇಳುವದೇನೆಂದರೆ ಅನೇಕ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಸ್ವರ್ಗಸಾಮ್ರಾಜ್ಯದಲ್ಲಿ ಅಬ್ರಹಾಮ್‌, ಇಸಾಕ್‌, ಯಕೋಬರ ಜೊತೆಯಲ್ಲಿ ಸ್ವರ್ಗೀಯ ಭೋಜನದಲ್ಲಿ ಪಾಲ್ಗೊಳ್ಳುವರು. 12 ಆದರೆ ಯಾರು ಈ ಸಾಮ್ರಾಜ್ಯದವರೋ ಅವರು ಹೊರಗಿನ ಕತ್ತಲೆಗೆ ತಳ್ಳಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವುವು" ಎಂದರು. 13 ಬಳಿಕ ಯೇಸು ಆ ಶತಾಧಿಪತಿಗೆ, "ಹೋಗು, ನಿನ್ನ ನಂಬಿಕೆಯಂತೆಯೇ ನಿನ್ನ ಸೇವಕನು ಗುಣಹೊಂದುವನು" ಎಂದು ಹೇಳಿದರು. ಅದೇ ಘಳಿಗೆಯಲ್ಲಿ ಅವನ ಸೇವಕನು ಗುಣಹೊಂದಿದನು.

ಯೇಸುವಿನ ಇತರ ಅದ್ಭುತ ಕಾರ್ಯ
(ಮಾರ್ಕ1:29-34; ಲೂಕ4:38-41)

14 ಅನಂತರ ಯೇಸು ಪೇತ್ರನ ಮನೆಗೆ ಬಂದು ಅವನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿರುವುದನ್ನು ಕಂಡರು. 15 ಅವರು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟಿತು; ಮತ್ತು ಆಕೆಯು ಎದ್ದು ಅವರಿಗೆ ಉಪಚಾರ ಮಾಡಿದಳು. 16 ಸಂಜೆಯಾದಾಗ ದೆವ್ವ ಹಿಡಿದ ಅನೇಕರನ್ನು ಅವರ ಬಳಿಗೆ ಕರೆತರಲಾಯಿತು. ಅವರು ತಮ್ಮ ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾಗಿದ್ದವರನ್ನೂ ಗುಣಪಡಿಸಿದರು. 17 ಹೀಗೆ ಅವರು 'ತಾವೇ ನಮ್ಮ ದುರ್ಬಲತೆಯನ್ನು ಹೊತ್ತುಕೊಂಡು ನಮ್ಮ ರೋಗಗಳನ್ನು ಗುಣಪಡಿಸುವರು' ಎಂದ ಪ್ರವಾದಿ ಯೆಶಾಯನ ಪ್ರವಾದನೆ ನೆರವೇರಿತು.

ಶಿಷ್ಯರಿಗೆ ಯೇಸುವಿನ ಬೋಧನೆ
(ಲೂಕ9:57-60)

18 ಇದಾದ ಬಳಿಕ ಯೇಸುವು ತಮ್ಮ ಸುತ್ತಲೂ ಇದ್ದ ಜನರ ಸಮೂಹಗಳನ್ನು ನೋಡಿ ಸರೋವರದ ಆಚೆಯ ದಡಕ್ಕೆ ಹೋಗುವಂತೆ ಅವರಿಗೆ ಹೇಳಿದರು. 19 ಆಗ ಒಬ್ಬ ಧರ್ಮಶಾಸ್ತ್ರಿಯು ಯೇಸುವಿನ ಬಳಿ ಬಂದು, ಬೋಧಕರೇ, "ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು" ಎಂದನು. 20 ಅದಕ್ಕೆ ಯೇಸುವು, "ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ನರಪುತ್ರನಿಗೆ ತನ್ನ ತಲೆಯಿಡುವದಕ್ಕೂ ಸ್ಥಳವಿಲ್ಲ" ಎಂದು ಹೇಳಿದರು. 21 ಅವರ ಶಿಷ್ಯರಲ್ಲಿ ಒಬ್ಬನು, "ಸ್ವಾಮಿ, ನಾನು ಹೋಗಿ ಮರಣಹೊಂದಿದ ನನ್ನ ತಂದೆಯ ಸಮಾಧಿ ಮಾಡಿ ಬರಲು ನನಗೆ ಅಪ್ಪಣೆ ಕೊಡಿ" ಎಂದು ಕೇಳಿದನು. 22 ಅದಕ್ಕೆ ಯೇಸುವು ಅವನಿಗೆ, "ನನ್ನನ್ನು ಹಿಂಬಾಲಿಸಿ ಬಾ; ಸತ್ತವರು ತಮ್ಮವರನ್ನು ಸಮಾಧಿ ಮಾಡಲಿ" ಎಂದು ಹೇಳಿದರು.

ಬಿರುಗಾಳಿಯನ್ನೂ, ಸಮುದ್ರವನ್ನೂ ಗದರಿದ್ದು
(ಮಾರ್ಕ4:35-41; ಲೂಕ8:22-25)

23 ಬಳಿಕ ಯೇಸುವು ದೋಣಿಯನ್ನು ಹತ್ತಿದಾಗ ಶಿಷ್ಯರು ಅವರನ್ನು ಹಿಂಬಾಲಿಸಿದರು. 24 ಅವರು ಸರೋವರದಲ್ಲಿ ಪಯಣಿಸುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಸರೋವರದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಆ ಬಿರುಗಾಳಿಯಿಂದಾಗಿ ಎದ್ದ ಎತ್ತರದ ತೆರೆಗಳು ದೋಣಿಯನ್ನು ಆವರಿಸಿದವು; ಆದರೆ ಇದಾವುದರ ಪರಿವೆಯಿಲ್ಲದೇ ಯೇಸುವು ದೋಣಿಯಲ್ಲಿ ನಿದ್ರಿಸುತ್ತಿದ್ದರು. 25 ಆಗ ಶಿಷ್ಯರು ಅವರನ್ನು ಎಬ್ಬಿಸಿ, "ಸ್ವಾಮಿ, ನಮ್ಮನ್ನು ರಕ್ಷಿಸಿ; ನಾವು ಮುಳುಗಿಹೋಗುತ್ತೇವೆ" ಎಂದರು. 26 ಆಗ ಯೇಸುವು ಅವರಿಗೆ, "ಅಲ್ಪ ವಿಶ್ವಾಸಿಗಳೇ, ನೀವೇಕೆ ಭಯಪಡುತ್ತೀರಿ!" ಎಂದು ಹೇಳಿ, ಮೇಲೆದ್ದು ಗಾಳಿಯನ್ನೂ, ಸಮುದ್ರವನ್ನೂ ಗದರಿದರು. ಆಗ ಅಲ್ಲಿ ದೊಡ್ಡ ನಿಶ್ಯಬ್ದತೆ ಉಂಟಾಯಿತು. 27 ಶಿಷ್ಯರು ಅವರನ್ನು ಅತ್ಯಾಶ್ಚರ್ಯದಿಂದ ನೋಡಿದರು. "ಗಾಳಿಯೂ ಸಮುದ್ರವೂ ಇವರಿಗೆ ವಿಧೇಯತೆಯನ್ನು ತೋರುತ್ತವೆಂದರೆ ಇವರು ಎಂಥಹವರಾಗಿರಬಹುದು!" ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು.

ಯೇಸು ದೆವ್ವಗಳನ್ನು ಬಿಡಿಸಿದ್ದು
(ಮಾರ್ಕ5:1-20; ಲೂಕ8:26-39)

28 ಯೇಸುವು ಆಚೆಯ ದಡದಲ್ಲಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ಆಗ ದೆವ್ವಗಳು ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳೊಳಗಿಂದ ಹೊರಬಂದು ಯೇಸುವಿನೆದುರು ನಿಂತರು. ಅವರು ಬಹು ಭಯಂಕರರಾಗಿದ್ದರು. ಅವರು ಆ ಗುಹೆಗಳಲ್ಲಿದ್ದ ಕಾರಣ ಯಾವ ಮನುಷ್ಯನೂ ಆ ಮಾರ್ಗವಾಗಿ ಹೋಗುತ್ತಿರಲಿಲ್ಲ. 29 ಅವರು, "ಯೇಸುವೇ, ದೇವಸುತರೇ, ನಿಮಗೆ ನಮ್ಮ ಗೊಡವೆ ಏಕೆ? ನಿಯಮಿತ ಸಮಯಕ್ಕೆ ಮುಂಚೆಯೇ ನಮ್ಮನ್ನು ಕಾಡುವುದಕ್ಕಾಗಿ ಇಲ್ಲಿಗೆ ಬಂದಿರಾ?" ಎಂದು ಕೇಳಿದರು. 30 ಅವರಿಗೆ ಕೊಂಚ ದೂರದಲ್ಲಿ ಹಂದಿಗಳ ಗುಂಪೊಂದು ಮೇಯುತ್ತಿತ್ತು. 31 ಅವರನ್ನು ಆವರಿಸಿದ್ದ ದೆವ್ವಗಳು ಯೇಸುವಿಗೆ, "ನೀವು ನಮ್ಮನ್ನು ಹೊರಕ್ಕೆ ಹಾಕುವುದಾದರೆ ಆ ಹಂದಿಗಳ ದೇಹದೊಳಕ್ಕೆ ಸೇರಿಕೊಳ್ಳಲು ನಮಗೆ ಅಪ್ಪಣೆ ನೀಡಿ" ಎಂದು ಬೇಡಿಕೊಂಡವು. 32 ಆಗ ಯೇಸುವು ಅವುಗಳಿಗೆ, "ಹೋಗಿ" ಎಂದರು. ತಕ್ಷಣವೇ ಅವರನ್ನು ಆವರಿಸಿದ್ದ ದೆವ್ವಗಳು ಹೊರಬಂದು ಹಂದಿಗಳ ದೇಹದೊಳಕ್ಕೆ ಸೇರಿಕೊಂಡವು. ಆಗ ಹಂದಿಗಳ ಗುಂಪೆಲ್ಲಾ ಕಡಿದಾದ ಸ್ಥಳಕ್ಕೆ ಓಡಿಹೋಗಿ ಸಮುದ್ರದ ನೀರಿನೊಳಕ್ಕೆ ಬಿದ್ದು ಸತ್ತು ಹೋದವು. 33 ಅವುಗಳನ್ನು ಮೇಯಿಸುತ್ತಿದ್ದವರು ಊರಿನೊಳಕ್ಕೆ ಓಡಿಹೋಗಿ ಅಲ್ಲಿದ್ದವರಿಗೆ ಎಲ್ಲವನ್ನೂ ತಿಳಿಸಿದರು. 34 ಆಗ ಊರಿನವರೆಲ್ಲರೂ ಭಯಗೊಂಡು ಯೇಸುವಿನ ಬಳಿ ಬಂದು ಅವರನ್ನು ಕಂಡು, ತಮ್ಮ ಸ್ಥಳವನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ