ಮತ್ತಾಯನು ಬರೆದ ಸುಸಂದೇಶಗಳು
ಯೇಸುವಿನ ರೂಪಾಂತರ
(ಮಾರ್ಕ9:2-13; ಲೂಕ9:28-36 )
1 ಆರು ದಿನಗಳಾದ ಮೇಲೆ ಯೇಸುವು ಪೇತ್ರ, ಯಕೋಬ ಮತ್ತು ಅವನ ಸಹೋದರ ಯೋವಾನ್ನ ಇವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. 2 ಅಲ್ಲಿ ಅವರು ಶಿಷ್ಯರ ಮುಂದೆ ರೂಪಾಂತರಗೊಂಡರು. ಅವರ ಮುಖವು ಸೂರ್ಯನಂತೆ ಪ್ರಕಾಶಿಸಿತು; ಉಡುಪು ಹಿಮದಂತೆ ಬೆಳ್ಳಗಾಯಿತು. 3 ಅದೇ ಕ್ಷಣದಲ್ಲಿ ಮೋಶೆಯೂ, ಎಲೀಯನೂ ಅಲ್ಲಿ ಕಾಣಿಸಿಕೊಂಡು ಯೇಸುವಿನ ಸಂಗಡ ಮಾತನಾಡುತ್ತಿದ್ದುದನ್ನು ಶಿಷ್ಯರು ಕಂಡರು. 4 ಆಗ ಪೇತ್ರನು ಯೇಸುವಿಗೆ, "ಸ್ವಾಮಿ, ನಾವು ಇಲ್ಲಿಯೇ ಇರುವುದು ಎಷ್ಟು ಒಳ್ಳೆಯದು. ತಾವು ಅಪ್ಪಣೆಯಿತ್ತರೆ ನಾವು ನಿಮಗೂ, ಮೋಶೆಗೂ ಮತ್ತು ಎಲೀಯನಿಗೂ ಸೇರಿ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆವು" ಎಂದು ಹೇಳಿದನು. 5 ಅವನು ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶ ಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ "ಇದೋ ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು; ಈತನ ಮಾತನ್ನು ನೀವು ಕೇಳಿರಿ" ಎಂದು ಹೇಳುವ ಧ್ವನಿಯು ಮೇಘದಿಂದ ಕೇಳಿಸಿತು. 6 ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು. 7 ಆಗ ಯೇಸುವು ಬಂದು ಅವರನ್ನು ಮುಟ್ಟಿ, "ಏಳಿರಿ, ಹೆದರಬೇಡಿರಿ" ಎಂದು ಹೇಳಿದರು. 8 ಅವರು ತಮ್ಮ ತಲೆಯನ್ನು ಮೇಲೆತ್ತಿ ನೋಡಿದಾಗ ಯೇಸುವಿನ ಹೊರತಾಗಿ ಮತ್ತಾರನ್ನೂ ಕಾಣಲಿಲ್ಲ.
9 ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ ಯೇಸುವು, ನರಪುತ್ರನು ಸತ್ತವರೊಳಗಿನಿಂದ ಎದ್ದು ಬರುವವರೆಗೆ ಈ ದಿವ್ಯದರ್ಶನವನ್ನು ಯಾರಿಗೂ ಹೇಳಬಾರದೆಂದು ಶಿಷ್ಯರಿಗೆ ಆಜ್ಞಾಪಿಸಿದರು. 10 ಆಗ ಅವರ ಶಿಷ್ಯರು, "ಎಲೀಯನು ಮೊದಲು ಬರಬೇಕಾಗಿದೆ ಎಂದು ಧರ್ಮಶಾಸ್ತ್ರಿಗಳು ಏಕೆ ಹೇಳುತ್ತಾರೆ?" ಎಂದು ಕೇಳಿದರು. 11 ಯೇಸು ಪ್ರತ್ಯುತ್ತರವಾಗಿ ಅವರಿಗೆ, "ಎಲೀಯನು ಮೊದಲು ಬಂದು ಎಲ್ಲವುಗಳನ್ನು ಮೊದಲಿನಂತೆ ಸರಿಪಡಿಸುವುದು ನಿಜವೇ; 12 ಆದರೆ ಎಲೀಯನು ಆಗಲೇ ಬಂದಾಯಿತು. ಅವನನ್ನು ಅರಿಯದ ಜನರು ತಮಗೆ ಇಷ್ಟಬಂದಂತೆ ಅವನನ್ನು ಹಿಂಸಿಸಿದ್ದಾಯಿತು. ಅದರಂತೆಯೇ ನರಪುತ್ರನು ಸಹ ಅವರಿಂದ ಯಾತನೆಯನ್ನು ಅನುಭವಿಸುವನು ಎಂದು ನಾನು ನಿಮಗೆ ಹೇಳುತ್ತೇನೆ" ಎಂದರು. 13 ಅವರು ಹೇಳುತ್ತಿದ್ದುದು ದೀಕ್ಷಾಸ್ನಾನ ಮಾಡಿಸುವ ಯೋವಾನ್ನನ ಕುರಿತೇ ಎಂದು ಶಿಷ್ಯರು ತಿಳಿದುಕೊಂಡರು.
ಮೂರ್ಛಾರೋಗಿಯನ್ನು ಗುಣಪಡಿಸಿದ್ದು
(ಮಾರ್ಕ9:14-29; ಲೂಕ9:37-42)
14 ಅವರು ಜನಸಮೂಹದ ಬಳಿಗೆ ಬಂದಾಗ ಒಬ್ಬ ಮನುಷ್ಯನು ಯೇಸುವಿನ ಬಳಿ ಬಂದು ಮೊಣಕಾಲೂರಿ, 15 "ಸ್ವಾಮಿ, ನನ್ನ ಮಗನ ಮೇಲೆ ಕರುಣೆಯಿಡು; ಅವನು ಮೂರ್ಛಾರೋಗದಿಂದ ನರಳುತ್ತಿದ್ದಾನೆ, ಅನೇಕ ಸಲ ಅವನು ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬಿದ್ದಿದ್ದಾನೆ. 16 ನಾನು ಅವನನ್ನು ನಿಮ್ಮ ಶಿಷ್ಯರ ಬಳಿಗೆ ಕರೆತಂದೆನು; ಅವರು ಅವನನ್ನು ಗುಣಪಡಿಸಲಾರದೆ ಹೋದರು" ಎಂದು ಹೇಳಿದನು. 17 ಆಗ ಯೇಸು ಅವರಿಗೆ ಪ್ರತ್ಯುತ್ತರವಾಗಿ, "ನಂಬಿಕೆಯಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ" ಎಂದು ಹೇಳಿದರು. 18 ಆ ಹುಡುಗನನ್ನು ಅಲ್ಲಿಗೆ ಕರೆತಂದಾಗ ಯೇಸು ದೆವ್ವವನ್ನು ಗದರಿಸಿದರು. ಅದು ಅವನೊಳಗಿಂದ ಹೊರಟುಹೋಯಿತು; ಆಗ ಹುಡುಗನು ಆ ಗಳಿಗೆಯಲ್ಲಿಯೇ ಗುಣಹೊಂದಿದನು. 19 ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಅದನ್ನು ಬಿಡಿಸುವುದಕ್ಕೆ ನಮ್ಮಿಂದ ಯಾಕೆ ಆಗಲಿಲ್ಲ?" ಎಂದು ಕೇಳಿದರು. 20 ಯೇಸು ಅವರಿಗೆ, "ನಿಮ್ಮ ಅಪನಂಬಿಕೆಯ ಕಾರಣದಿಂದಲೇ ನಿಮಗದು ಸಾಧ್ಯವಾಗಲಿಲ್ಲ. ಆದರೆ ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಸಾಸಿವೆ ಕಾಳಿನಷ್ಟು ನಂಬಿಕೆ ನಿಮ್ಮಲ್ಲಿರುವುದಾದರೆ ನೀವು ಈ ಬೆಟ್ಟವನ್ನು ಇಲ್ಲಿಂದ ಕಿತ್ತು ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವುದು; ನಿಮಗೆ ಅಸಾಧ್ಯವಾದುದು ಯಾವುದೂ ಇಲ್ಲ. 21 ಈ ತೆರನಾದ ದೆವ್ವಗಳನ್ನು ಓಡಿಸುವ ಕ್ರಿಯೆ ಕೈಗೊಳ್ಳಲು ಪ್ರಾರ್ಥನೆ, ಉಪವಾಸಗಳ ಹೊರತಾಗಿ ಅನ್ಯ ಮಾರ್ಗವಿಲ್ಲ" ಎಂದರು.
ಮರಣ ಪುನರುತ್ಥಾನಗಳನ್ನು ಮತ್ತೊಮ್ಮೆ ತಿಳಿಯಪಡಿಸಿದ್ದು
(ಮಾರ್ಕ9:30-32; ಲೂಕ9:43-45)
(ಮಾರ್ಕ9:30-32; ಲೂಕ9:43-45)
22 ಅವರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗಿದ್ದಾಗ ಯೇಸು ಅವರಿಗೆ, "ನರಪುತ್ರನು ಜನರ ವಶಕ್ಕೆ ಒಪ್ಪಿಸಲಾಗುವುದು. 23 ಅವರು ಆತನನ್ನು ಕೊಲ್ಲುವರು; ಆದರೆ ಮೂರನೇ ದಿನದಲ್ಲಿ ಆತನು ಪುನರುತ್ಥಾನ ಹೊಂದುವನು" ಎಂದು ಹೇಳಿದರು. ಅದನ್ನು ಕೇಳಿ ಶಿಷ್ಯರು ಬಹಳವಾಗಿ ವ್ಯಥೆಪಟ್ಟರು. 24 ತರುವಾಯ ಅವರು ಕಪೆರ್ನೌಮಿಗೆ ಬಂದಾಗ ಸುಂಕದವರು ಪೇತ್ರನ ಬಳಿಗೆ ಬಂದು, "ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವುದಿಲ್ಲವೇ?" ಎಂದು ಕೇಳಿದರು. ಅದಕ್ಕವನು, "ಸಲ್ಲಿಸುವರು" ಎಂದು ಹೇಳಿದನು. 25 ಅನಂತರ ಅವನು ಮನೆಯೊಳಕ್ಕೆ ಬಂದಾಗ ಯೇಸು ಮುಂದಾಗಿಯೇ ಅವನಿಗೆ, "ಸೀಮೋನನೇ, ನಿನಗೆ ಹೇಗನಿಸುತ್ತದೆ? ಭೂಲೋಕದ ರಾಜರು ಯಾರಿಂದ ತೆರಿಗೆಯನ್ನು ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಇಲ್ಲ ಅನ್ಯರಿಂದಲೋ" ಎಂದು ಕೇಳಿದರು. 26 ಪೇತ್ರನು ಪ್ರತ್ಯುತ್ತರವಾಗಿ, "ಅನ್ಯರಿಂದ" ಎಂದು ಹೇಳಿದನು. ಅದಕ್ಕೆ ಯೇಸುವು, ಹಾಗಾದರೆ ಪುತ್ರರು ತೆರಿಗೆ ಕೊಡಬೇಕಾಗಿಲ್ಲ ತಾನೇ. 27 ಹೀಗಿದ್ದರೂ ನಾವು ಅವರಿಗೆ ಅಡ್ಡಿಯನ್ನುಂಟು ಮಾಡುವುದು ಸರಿಯಲ್ಲ. ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಸಿಗುವ ಮೀನನ್ನು ಹಿಡಿದು ಅದರ ಬಾಯನ್ನು ತೆರೆ. ಅದರಲ್ಲಿ ಒಂದು ಬೆಳ್ಳಿಯ ನಾಣ್ಯವನ್ನು ಕಾಣುವೆ; ಅದನ್ನು ತೆಗೆದುಕೊಂಡು ನನ್ನ ಮತ್ತು ನಿನ್ನ ಪರವಾಗಿ ಎಂದು ಹೇಳುತ್ತಾ ಅವರಿಗೆ ಕೊಡು" ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ